
ಲತಾ ಮಂಗೇಶ್ಕರ್
ಮುಂಬೈ: ಭಾರತೀಯ ಸಿನಿ ಸಂಗೀತ ಪ್ರಪಂಚದಲ್ಲಿ ಒಂದು ಶಿಖರವನ್ನು ಏರಿದ ಹಿರಿಯ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಲತಾ ಮಂಗೇಶ್ಕರ್ ಅವರ ಸಾವು ಇಡೀ ದೇಶವನ್ನು ನೋವಿನ ಮಡುವಿನಲ್ಲಿಟ್ಟಂತಾಗಿದೆ. ಕೋಟ್ಯಂತರ ಅಭಿಮಾನಿಗಳ ಸಂಗೀತ ದೇವತೆ ಎಂದು ಆರಾಧಿಸುವ ಲತಾ ಮಂಗೇಶ್ಕರ್ ಅವರ ಜೀವನವು ತುಂಬಾ ಸ್ಫೂರ್ತಿದಾಯಕವಾಗಿದೆ.
ಆಕೆಯ ಕೀರ್ತಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ. ಆದರೂ ಅವರ ವೈಯಕ್ತಿಕ ಜೀವನವು ಅಸಂಪೂರ್ಣವಾಗಿ ಉಳಿದುಹೋಯಿತು. ಈ ದಿಗ್ಗಜ ಗಾಯಕಿ ಯಾಕೆ ಮದುವೆಯಾಗಲಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇನ್ನೂ ಉಳಿದಿದೆ. ಪ್ರಮುಖ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲತಾ ಮಂಗೇಶ್ಕರ್ ಅವರು ಪ್ರತಿಕ್ರಿಯಿಸಿದ್ದರು. ‘ಜೀವನದಲ್ಲಿ ಎಲ್ಲವೂ ದೇವರ ನಿರ್ಧಾರದ ಮೇಲೆ ನಿಂತಿದೆ. ಏನೇ ಆಗಲಿ ಅದು ನಮ್ಮ ಒಳಿತಿಗಾಗಿಯೇ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ 'ಬೆಳ್ಳನೆ ಬೆಳಗಾಯಿತು' ಹಾಡನ್ನು ಹಾಡಿ ಕನ್ನಡಿಗರಲ್ಲಿ ಅಚ್ಚಳಿಯದೇ ಉಳಿದ ಲತಾ!
ಮದುವೆಯಾಗಲು ಇಷ್ಟಪಡದ ಹುಡುಗಿಯರಿದ್ದಾರೆಯೇ? ಈ ಪ್ರಶ್ನೆಯನ್ನು ನಲವತ್ತು ವರ್ಷಗಳ ಹಿಂದೆ ಕೇಳಿದ್ದರೆ ನನ್ನ ಉತ್ತರ ಬೇರೆಯೇ ಇರುತ್ತಿತ್ತೇನೋ. ಈ ವಯಸ್ಸಿನಲ್ಲಿ ಅಂತಹ ಯೋಚನೆಯೇ ಆಸ್ಪದವಿಲ್ಲ ಎಂದು ಅವರು ಉತ್ತರಿಸಿದ್ದರು. ಈ ಸಂದರ್ಶನದ ಸಮಯದಲ್ಲಿ ಲತಾ ಮಂಗೇಶ್ಕರ್ ಅವರಿಗೆ 82 ವರ್ಷ ವಯಸ್ಸಾಗಿತ್ತು.
ಲತಾ ಮಂಗೇಶ್ಕರ್ ಅವರು ಮದುವೆಯ ಬಗ್ಗೆ ಮತ್ತೊಂದು ಹೇಳಿಕೆಯನ್ನೂ ಸಹ ಸಂದರ್ಶನದಲ್ಲಿ ನೀಡಿದ್ದರು. ನನ್ನ ತಂದೆ ತೀರಿಕೊಂಡಾಗ ನನಗೆ ಕೇವಲ 13 ವರ್ಷ, ಕುಟುಂಬದ ಹಿರಿಯ ಮಗಳಾದ ನಾನು ಕುಟುಂಬದ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯತೆ ಬಂದಿತ್ತು. ಒಂದು ಹಂತದಲ್ಲಿ ಮದುವೆಯಾಗುವ ಯೋಚನೆ ಬಂದಿದ್ದರೂ, ಇದರಿಂದ ಸಾಧ್ಯವಾಗಲಿಲ್ಲ ಎಂದು ಖಾಸಗಿ ಮಾದ್ಯಮಕ್ಕೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಈ ರೀತಿಯಾಗಿ ಮದುವೆಯ ಬಗ್ಗೆ ಹೇಳಿಕೊಂಡಿದ್ದಾರೆ.