ಅಶ್ಲೀಲ ಚಿತ್ರ ನಿರ್ಮಾಣ: ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರ ವಿರುದ್ಧ ಕೇಸು ದಾಖಲಿಸಿದ ಜಾರಿ ನಿರ್ದೇಶನಾಲಯ
ಅಶ್ಲೀಲ ಚಿತ್ರ (Porn movies) ನಿರ್ಮಾಣ ಮತ್ತು ವಿತರಣೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರ ವಿರುದ್ಧ ಜಾರಿ ನಿರ್ದೇಶನಾಲಯ (Enforcement directorate-ED) ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿದೆ.
Published: 19th May 2022 10:21 AM | Last Updated: 19th May 2022 01:19 PM | A+A A-

ರಾಜ್ ಕುಂದ್ರ(ಸಂಗ್ರಹ ಚಿತ್ರ)
ಮುಂಬೈ: ಅಶ್ಲೀಲ ಚಿತ್ರ (Porn movies) ನಿರ್ಮಾಣ ಮತ್ತು ವಿತರಣೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರ ವಿರುದ್ಧ ಜಾರಿ ನಿರ್ದೇಶನಾಲಯ (Enforcement directorate-ED) ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿದೆ.
ರಾಜ್ ಕುಂದ್ರ 2019ರಲ್ಲಿ ಆರ್ಮ್ಸ್ ಪ್ರೈಮ್ ಮೀಡಿಯಾ ಲಿಮಿಟೆಡ್ ಎಂಬ ಕಂಪೆನಿಯನ್ನು ಸ್ಥಾಪಿಸಿ ಹಾಟ್ ಶಾಟ್ಸ್ ಎಂಬ ಆಪ್ ನ್ನು ಅಭಿವೃದ್ಧಿಪಡಿಸಿದ್ದರು. ನಂತರ ಈ ಆಪ್ ನ್ನು ಲಂಡನ್ ಮೂಲದ ಕೆನ್ರಿನ್ ಎಂಬ ಕಂಪೆನಿಗೆ ಮಾರಾಟ ಮಾಡಿದ್ದರು. ಕೆನ್ರಿನ್ ಕಂಪೆನಿಯ ಸಿಇಒ ಪ್ರದೀಪ್ ಬಕ್ಷಿ ರಾಜ್ ಕುಂದ್ರ ಅವರ ಸಂಬಂಧಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಮೂಲಗಳು ತಿಳಿಸಿವೆ.
ಹಾಟ್ ಶಾಟ್ಸ್ ಆಪ್ ನ್ನು ನಿರ್ವಹಿಸಲು ಕುಂದ್ರ ಅವರ ವಿಯಾನ್ ಇಂಡಸ್ಟ್ರೀಸ್ ಕಂಪೆನಿ ಸಹಭಾಗಿಯಾಗಿ 13 ಬ್ಯಾಂಕ್ ಖಾತೆಗಳಿಗೆ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿದೆ ಎಂದು ಸಹ ವಿಚಾರಣೆ ವೇಳೆ ತಿಳಿದುಬಂದಿದೆ.
ಹಾಟ್ ಶಾಟ್ಸ್ ಆಪ್ ಪೋರ್ನ್ ಚಿತ್ರಗಳಿಗೆ ವೇದಿಕೆಯಾಗಿದ್ದು ಚಿತ್ರಗಳನ್ನು ಭಾರತದಲ್ಲಿ ತಯಾರಿಸಿ ಹಾಟ್ ಶಾಟ್ಸ್ ಆಪ್ ನಲ್ಲಿ ಅಭಿವೃದ್ಧಿಪಿಸಿ ಅಪ್ ಲೋಡ್ ಮಾಡಲಾಗುತ್ತಿತ್ತು. ನಂತರ ಗ್ರಾಹಕರು ಖರೀದಿಸುವಂತೆ ಪ್ರೇರೇಪಿಸಲಾಗುತ್ತಿತ್ತು. ಇಂಗ್ಲೆಂಡಿನಲ್ಲಿ ಚಿತ್ರಗಳನ್ನು ವಿತರಿಸಿ ಗ್ರಾಹಕರ ಮೂಲಕ ರಾಜ್ ಕುಂದ್ರರ ವಿಯಾನ್ ಇಂಡಸ್ಟ್ರೀಸ್ ಮೂಲಕ ಪೋರ್ನ್ ಚಿತ್ರಗಳ ಹೆಸರಿನಲ್ಲಿ ಸಾಕಷ್ಟು ಹಣ ಸಂಪಾದನೆ ಮಾಡಿದ ಆರೋಪ ರಾಜ್ ಕುಂದ್ರ ಮತ್ತು ಪ್ರದೀಪ್ ಬಕ್ಷಿ ವಿರುದ್ಧ ಕೇಳಿಬರುತ್ತಿದೆ.
ಅಶ್ಲೀಲ ಚಿತ್ರ ನಿರ್ಮಾಣ ಮಾಡಿ ಪ್ರಸಾರ ಮಾಡುತ್ತಿದ್ದ ಆರೋಪ ಮೇಲೆ ಕಳೆದ ವರ್ಷ ಜುಲೈ 19ರಂದು ರಾಜ್ ಕುಂದ್ರ ಸೇರಿದಂತೆ 11 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ನಂತರ 50 ಸಾವಿರ ರೂಪಾಯಿ ಬಾಂಡ್ ಹಾಗೂ ಷರತ್ತುಗಳೊಂದಿಗೆ ಮುಂಬೈ ಕೋರ್ಟ್ ಕಳೆದ ವರ್ಷ ಒಂದು ತಿಂಗಳ ಬಳಿಕ ಸೆಪ್ಟೆಂಬರ್ ನಲ್ಲಿ ರಾಜ್ ಕುಂದ್ರಗೆ ಜಾಮೀನು ನೀಡಿತ್ತು.