ದಕ್ಷಿಣ VS ಉತ್ತರ ಭಾರತದ ಸಿನಿಮಾ: ಈ ಚರ್ಚೆಯಿಂದಲೇ ಹೊರಬರಬೇಕಿದೆ ಎಂದ ನಟಿ ಐಶ್ವರ್ಯಾ ರೈ ಬಚ್ಚನ್‌

ದಕ್ಷಿಣ ಚಿತ್ರರಂಗದ ನಟರು ಸೇರಿದಂತೆ ಬಾಲಿವುಡ್‌ನ ವಿವಿಧ ಸೆಲೆಬ್ರಿಟಿಗಳು ಬಾಯ್ಕಾಟ್ ಬಾಲಿವುಡ್ ಪ್ರವೃತ್ತಿ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಕಡಿಮೆ ದಾಖಲೆ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಅವರ ಸಾಲಿಗೆ ಮಾಜಿ ವಿಶ್ವ ಸುಂದರಿ ಮತ್ತು ನಟಿ ಐಶ್ವರ್ಯಾ ರೈ ಬಚ್ಚನ್ ಸೇರಿದ್ದಾರೆ.
ನಟಿ ಐಶ್ವರ್ಯಾ ರೈ ಬಚ್ಚನ್
ನಟಿ ಐಶ್ವರ್ಯಾ ರೈ ಬಚ್ಚನ್

ಕಳೆದ ಕೆಲವು ತಿಂಗಳುಗಳಿಂದ ಉತ್ತರ VS ದಕ್ಷಿಣ ಭಾರತದ ಸಿನಿಮಾ ಎಂಬ ಕುರಿತಾದ ಚರ್ಚೆಗಳು ಚಿತ್ರೋದ್ಯಮದಲ್ಲಿ ತೀವ್ರವಾಗಿ ಕೇಳಿಬರುತ್ತಿವೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳ ಹಿಂದಿ ಡಬ್ಬಿಂಗ್ ಆವೃತ್ತಿಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದರೆ, ಹಿಂದಿ ಸಿನಿಮಾಗಳ ಸರಣಿ ಸೋಲು ಕಾಣುತ್ತಿವೆ.

ದಕ್ಷಿಣ ಚಿತ್ರರಂಗದ ನಟರು ಸೇರಿದಂತೆ ಬಾಲಿವುಡ್‌ನ ವಿವಿಧ ಸೆಲೆಬ್ರಿಟಿಗಳು ಬಾಯ್ಕಾಟ್ ಬಾಲಿವುಡ್ ಪ್ರವೃತ್ತಿ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಕಡಿಮೆ ದಾಖಲೆ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಅವರ ಸಾಲಿಗೆ ಮಾಜಿ ವಿಶ್ವ ಸುಂದರಿ ಮತ್ತು ನಟಿ ಐಶ್ವರ್ಯಾ ರೈ ಬಚ್ಚನ್ ಸೇರಿದ್ದಾರೆ. ಸದ್ಯ ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಪೊನ್ನಿಯಿನ್‌ ಸೆಲ್ವನ್‌‘ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ.

ದೆಹಲಿಯಲ್ಲಿ ನಡೆದ ಚಿತ್ರದ ಪ್ರಚಾರದ ಸಮಯದಲ್ಲಿ, 'ಕಲಾವಿದರು ಮತ್ತು ಸಿನಿಮಾವನ್ನು ನೋಡುವ ಟಿಪಿಕಲ್ ವಿಧಾನದಿಂದ ದೂರವಿರಬೇಕಾಗಿದೆ. ಎಲ್ಲಾ ರೀತಿಯ ಅಡೆತಡೆಗಳು ಕಡಿಮೆಯಾಗಿ, ನಮ್ಮ ಸಿನಿಮಾಗಳನ್ನು ರಾಷ್ಟ್ರವ್ಯಾಪಿ ಜನರು ನೋಡುತ್ತಿರುವುದು ಇದೊಂದು ಪರಿಪೂರ್ಣ ಸಮಯ ಎಂದು ನಾನು ಭಾವಿಸುತ್ತೇನೆ. ವಾಸ್ತವವಾಗಿ, ಎಲ್ಲಾ ಭಾಷೆಯ ಚಿತ್ರಗಳನ್ನು ಜನರು ನೋಡಲು ಬಯಸುತ್ತಿದ್ದಾರೆ' ಎಂದು ಹೇಳಿದರು.

'ವಿವಿಧ ವೇದಿಕೆಗಳ ಮೂಲಕ ಇಂದು ದೇಶದ ಎಲ್ಲ ಭಾಗಗಳಿಗೂ ಸಿನಿಮಾ ತಲುಪುತ್ತಿದೆ. ನಮ್ಮ ಸಾಂಪ್ರದಾಯಿಕ ಚಿಂತನೆಗಳಿಂದ ಹೊರಬಂದು ನಮ್ಮ ಪ್ರೇಕ್ಷಕರಿಗೆ ಕಲೆಯನ್ನು ಆಸ್ವಾದಿಸಲು ಸಹಾಯ ಮಾಡಬೇಕು. ಕಲೆಯನ್ನು ಪ್ರೋತ್ಸಾಹಿಸಬೇಕು. ಕಲೆ ಎಂದಿಗೂ ಪ್ರಸ್ತುತ. ಅದನ್ನು ಪ್ರದರ್ಶಿಸುವ ಕಲಾವಿದರಿದ್ದಾರೆ. ಆದರೆ ಅದನ್ನು ತಲುಪಿಸುವ ವೇದಿಕೆ ಇಂದು ದೊಡ್ಡದಾಗಿದೆ. ಜನ ದೇಶದ ಎಲ್ಲ ಭಾಗದ ಸಿನಿಮಾ ಸ್ವೀಕರಿಸುತ್ತಾರೆ ಎಂಬುದಕ್ಕೆ ಇವತ್ತು ನಮ್ಮೆದುರು ಒಂದಷ್ಟು ಉದಾಹರಣೆಗಳಿವೆ' ಎಂದಿದ್ದಾರೆ.

ಪೊನ್ನಿಯಿನ್‌ ಸೆಲ್ವನ್‌ ಚಿತ್ರದಲ್ಲಿ ಐಶ್ವರ್ಯಾ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷಿತ ಚಿತ್ರದ ತಾರಾಗಣದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಶಾ ಕೃಷ್ಣನ್, ಪ್ರಕಾಶ್ ರಾಜ್, ಪ್ರಭು, ಸೋಭಿತಾ ಧೂಳಿಪಾಲ, ಶರತ್‌ಕುಮಾರ್ ಮತ್ತು ಇನ್ನೂ ಅನೇಕರು ನಟಿಸಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ಜನಪ್ರಿಯರಾಗಿರುವ ಮಣಿರತ್ನಂ ನಿರ್ದೇಶನದ ಈ ಚಿತ್ರ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲೆಯಾಳಂನಲ್ಲಿ ತೆರೆಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com