
ಹಿಮಂತ್ ಬಿಸ್ವಾ ಶರ್ಮಾ-ಶಾರುಖ್ ಖಾನ್
ಗುವಾಹಟಿ: ಬಾಲಿವುಡ್ ನಟ ಶಾರುಖ್ ಖಾನ್ ಯಾರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೇಳಿದ್ದಾರೆ.
ಶುಕ್ರವಾರ ನಗರದ ನರೇಂಗಿಯಲ್ಲಿನ ಚಿತ್ರಮಂದಿರದಲ್ಲಿ ಭಜರಂಗದಳದ ಕಾರ್ಯಕರ್ತರು ಗಲಾಟೆ ಮಾಡಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಬಗ್ಗೆ ಇಂದು ಗುವಾಹಟಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಸ್ಸಾಂ ಮುಖ್ಯಮಂತ್ರಿ, 'ಶಾರುಖ್ ಯಾರು? ಅವರ ಬಗ್ಗೆ ಮತ್ತು ಅವರ ಚಿತ್ರದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.
ಇನ್ನು ಶಾರುಖ್ ಖಾನ್ ಬಾಲಿವುಡ್ ಸೂಪರ್‌ಸ್ಟಾರ್ ಎಂದು ವರದಿಗಾರರು ಮುಖ್ಯಮಂತ್ರಿಗೆ ಹೇಳಿದಾಗ, ಹಿಮಾಂತ ಬಿಸ್ವಾ ಶರ್ಮಾ, ರಾಜ್ಯದ ಜನರು ಹಿಂದಿಯ ಬದಲು ಅಸ್ಸಾಮಿ ಚಿತ್ರಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಹೆಣ್ಣು ಮಕ್ಕಳನ್ನು ಹೀಗೆ ತೋರಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಲ್ಲ: ಪಠಾಣ್ ಹಾಡಿನ ಬಗ್ಗೆ ಅನಂತ್ ನಾಗ್ ಅಸಮಾಧಾನ
ಈ ಥಿಯೇಟರ್ ನಲ್ಲಿ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಜನವರಿ 26ರಂದು ಪ್ರದರ್ಶನಗೊಳ್ಳಲಿದೆ. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿ ಸಂಘಟನೆಯ ಸ್ವಯಂಸೇವಕರು ಚಿತ್ರದ ಪೋಸ್ಟರ್ ಗಳನ್ನು ಹರಿದು ಸುಟ್ಟು ಹಾಕಿದ್ದರು. ಈ ಬಗ್ಗೆ ಸಿಎಂ ಬಿಸ್ವಾ ಶರ್ಮಾ ಅವರು, 'ಶಾರುಖ್ ಖಾನ್ ಈ ಸಮಸ್ಯೆಯ ಬಗ್ಗೆ ನನ್ನೊಂದಿಗೆ ಮಾತನಾಡಿಲ್ಲ, ಆದರೆ ಬಾಲಿವುಡ್‌ನ ಅನೇಕ ಜನರು ನನ್ನೊಂದಿಗೆ ಮಾತನಾಡುತ್ತಾರೆ. ಅವರು ಮಾತನಾಡಿದರೆ, ನಾನು ವಿಷಯವನ್ನು ಪರಿಶೀಲಿಸುತ್ತೇನೆ. ಕಾನೂನು ಸುವ್ಯವಸ್ಥೆ ಉಲ್ಲಂಘನೆಯಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
'ಪಠಾಣ್' ಚಿತ್ರದ 'ಬೇಷರಂ ರಂಗ್...' ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡ ನಂತರ ಚಿತ್ರದ ಕುರಿತಂತೆ ವಿವಾದ ಭುಗಿಲೇದಿತ್ತು. ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವು ಮುಖಂಡರು ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.