ನಟಿ ಶ್ರೀದೇವಿಯದ್ದು ಸಹಜ ಸಾವಲ್ಲ, ಇದಕ್ಕಾಗಿ ನಾನು ಸುದೀರ್ಘ ವಿಚಾರಣೆ ಎದುರಿಸಿದ್ದೆ: ಕೊನೆಗೂ ಮೌನ ಮುರಿದ ಬೋನಿ ಕಪೂರ್
ಖ್ಯಾತ ನಟಿ ಶ್ರೀದೇವಿ ಅವರ ಸಾವಿನ ಬಗ್ಗೆ ಜನರಿಗೆ ಹಲವು ಅನುಮಾನಗಳಿವೆ. 2018ರ ಫೆಬ್ರವರಿ 24ರಂದು ದುಬೈನಲ್ಲಿ ಅವರು ನಿಧನರಾದರು. ಸ್ಟಾರ್ ಹೋಟೆಲ್ನ ಬಾತ್ಟಬ್ನಲ್ಲಿ ಮುಳುಗಿ ಅವರು ಕೊನೆಯುಸಿರೆಳೆದರು ಎಂಬುದನ್ನು ತಿಳಿದು ಇಡೀ ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತಗೊಳಗಾಗಿತ್ತು.
Published: 03rd October 2023 09:09 AM | Last Updated: 03rd October 2023 02:36 PM | A+A A-

ಶ್ರೀದೇವಿ
ಮುಂಬೈ: ಖ್ಯಾತ ನಟಿ ಶ್ರೀದೇವಿ ಅವರ ಸಾವಿನ ಬಗ್ಗೆ ಜನರಿಗೆ ಹಲವು ಅನುಮಾನಗಳಿವೆ. 2018ರ ಫೆಬ್ರವರಿ 24ರಂದು ದುಬೈನಲ್ಲಿ ಅವರು ನಿಧನರಾದರು. ಸ್ಟಾರ್ ಹೋಟೆಲ್ನ ಬಾತ್ ಟಬ್‌ನಲ್ಲಿ ಮುಳುಗಿ ಅವರು ಕೊನೆಯುಸಿರೆಳೆದರು ಎಂಬುದನ್ನು ತಿಳಿದು ಇಡೀ ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತಗೊಳಗಾಗಿತ್ತು.
5 ವರ್ಷಗಳ ಹಿಂದೆ ಅತಿಲೋಕ ಸುಂದರಿ ಶ್ರೀದೇವಿ ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ದೂರದ ದುಬೈನಲ್ಲಿ ಬಾಲಿವುಡ್ ಬೆಡಗಿ ಕೊನೆಯುಸಿರೆಳೆದಿದ್ದರು. ಆಕೆ ಆಕಸ್ಮಿಕವಾಗಿ ಬಾತ್ ಟಬ್‌ಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದುಬೈನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ತಿಳಿಸಿತ್ತು.
2018 ಫೆಬ್ರವರಿಯಲ್ಲಿ ಶ್ರೀದೇವಿ ಮದುವೆಯೊಂದರಲ್ಲಿ ಭಾಗಿ ಆಗಲು ದುಬೈಗೆ ಹೋಗಿದ್ದರು. ಪತ್ನಿ ಶ್ರೀದೇವಿಗೆ ಸರ್‌ಪ್ರೈಸ್ ನೀಡಲು ಬಳಿಕ ಬೋನಿ ಕಪೂರ್ ಭಾರತದಿಂದ ದುಬೈಗೆ ತೆರಳಿದ್ದರು. ಇಬ್ಬರು ಹೊರಗೆ ಊಟಕ್ಕೆ ಹೋಗಲು ತಯಾರಾಗುತ್ತಿದ್ದರು. ಸ್ಥಳೀಯ ಕಾಲಮಾನ ಸಂಜೆ 5.30ರ ಸುಮಾರಿಗೆ, ತಯಾರಾಗಿ ಬರುತ್ತೇನೆಂದು ಶ್ರೀದೇವಿ ಬಾತ್ ರೂಮಿಗೆ ತೆರಳಿದ್ದಾರೆ. ಎಷ್ಟೆ ಹೊತ್ತು ಆದರೂ ಆಕೆ ಹೊರಗೆ ಬರದಿದ್ದಾಗ ಅನುಮಾನಗೊಂಡ ಬೋನಿ, ಬಲವಂತವಾಗಿ ಬಾಗಿಲು ತೆರೆದಾಗ ನಿಶ್ಚಲರಾಗಿ ನೀರು ತುಂಬಿದ್ದ ಬಾತ್ ಟಬ್‌ನಲ್ಲಿ ಬಿದ್ದಿದ್ದರು. ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಇದನ್ನೂ ಓದಿ: 60ನೇ ಜನ್ಮ ದಿನಾಚರಣೆ: ದಿವಂಗತ ನಟಿ ಶ್ರೀದೇವಿಗೆ ಗೂಗಲ್ ಡೂಡಲ್ ಗೌರವ
ಆಕೆಯದ್ದು ಸಹಜ ಸಾವಲ್ಲ, ಅನುಮಾನಾಸ್ಪದವಾಗಿ ನಿಧನರಾಗಿದ್ದಾರೆ ಎಂದು ಕೆಲವರು ಪತಿ ಬೋನಿ ಕಪೂರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲಿನ ಪೊಲೀಸರು ಕೂಡ ಬೋನಿ ಕಪೂರ್ ಮೇಲೆ ಅನುಮಾನಗೊಂಡು ಭಾರೀ ವಿಚಾರಣೆ ನಡೆಸಿದ್ದರು. ಇದೀಗ 5 ವರ್ಷಗಳ ಬಳಿಕ ಸಂದರ್ಶನವೊಂದರಲ್ಲಿ ಬೋನಿ ಕಪೂರ್ ಪತ್ನಿ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ್ದಾರೆ.
ಸುಮಾರು 24 ಅಥವಾ 48 ಗಂಟೆಗಳ ಕಾಲ ನನ್ನನ್ನು ತನಿಖೆ ಮತ್ತು ವಿಚಾರಣೆಗೆ ಒಳಪಡಿಸಿದಾಗ ಅದರ ಬಗ್ಗೆ ಮಾತನಾಡಿದ್ದೇನೆ. ಭಾರತೀಯ ಮಾಧ್ಯಮಗಳಿಂದ ಹೆಚ್ಚಿನ ಒತ್ತಡವಿರುವುದರಿಂದ ನಾವು ವಿಚಾರಣೆ ನಡೆಸಬೇಕಾಯಿತು ಎಂದು ಅಲ್ಲಿನ ಅಧಿಕಾರಿಗಳು ಹೇಳಿದರು. ಇಲ್ಲಿ ಯಾವುದೇ ಮೋಸದಾಟ ಇರಲಿಲ್ಲ. ನಾನು ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಎಲ್ಲಾ ತರಹದ ವಿಚಾರಣೆ ಎದುರಿಸಿದೆ. ಕೊನೆಗೆ ಬಂದ ವರದಿಯಲ್ಲಿ ಶ್ರೀದೇವಿ ಸಾವು ಆಕಸ್ಮಿಕ ಎಂದು ಸ್ಪಷ್ಟವಾಯಿತು.
ಇದನ್ನೂ ಓದಿ: ಪುಸ್ತಕ ರೂಪದಲ್ಲಿ ಬರಲಿದೆ ದಿವಂಗತ ನಟಿ ಶ್ರೀದೇವಿ ಅವರ ಜೀವನ ಚರಿತ್ರೆ; ಬೋನಿ ಕಪೂರ್ ಘೋಷಣೆ
ತೆರೆಯ ಮೇಲೆ ಅಂದವಾಗಿ ಕಾಣಿಸಬೇಕು ಎಂದು ಶ್ರೀದೇವಿ ಸ್ಟ್ರಿಕ್ಟ್ ಡಯೆಟ್ ಅನುಸರಿಸುತ್ತಿದ್ದಳು. ನಮ್ಮ ಮದುವೆ ಬಳಿಕ ನನಗೆ ಈ ವಿಷಯ ತಿಳಿಯಿತು. ಉಪ್ಪು ಇಲ್ಲದೇ ಸಪ್ಪೆ ಊಟ ಮಾಡುತ್ತಿದ್ದಳು. ಇದರಿಂದ ಸಾಕಷ್ಟು ಬಾರಿ ನಿತ್ರಾಣಗೊಂಡು ಬೀಳುತ್ತಿದ್ದಳು. ಲೋ ಬಿಪಿ ಸಮಸ್ಯೆ ಇದೆ ಎಂದು ವೈದ್ಯರು ಜಾಗ್ರತೆಯಿಂದ ಇರಲು ಸಾಕಷ್ಟು ಬಾರಿ ಸೂಚಿಸಿದ್ದರು. ಆದರೆ ಆಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಶ್ರೀದೇವಿಯದ್ದು ಸಹಜ ಸಾವಲ್ಲ. ಆಕಸ್ಮಿಕ ಸಾವು ಎಂದಿದ್ದಾರೆ.