ಹೇಳ್ಕೊಳ್ಳೋಕ್ ಬೆಂಗ್ಳೂರು, ತಲೆ ಮ್ಯಾಗೆ ಸೂರಿರಲಿಲ್ಲ, ಸಿನಿಮಾನೇ ನನ್ ಪರ್ಪಂಚ: ಮುಗಿಲ್ ಪೇಟೆ ಡೈರೆಕ್ಟರ್ ಭರತ್ ನಾವುಂದ ಸಂದರ್ಶನ

'ಓಂ' ಸಿನಿಮಾದಿಂದ ನಿರ್ದೇಶಕನಾಗುವ ಕನಸು ಕಂಡು ಕುಂದಾಪುರದಿಂದ ಬೆಂಗಳೂರಿಗೆ ಬಂದವರು ಭರತ್ ನಾವುಂದ. ಒಂದು ಕಾಲದಲ್ಲಿ ಮಲಗಲು ಸೂರಿಲ್ಲದೆ ಪರದಾಡಿದ್ದಾರೆ, ಹಸಿವಿನಿಂದ ಇಸ್ಕಾನ್ ಎದುರು ಪೊಂಗಲ್ ಗೆ ಕೈಚಾಚಿದ್ದಾರೆ. ಮುಗಿಲ್ ಪೇಟೆ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಅವರ ಸಿನಿಮಾ ಮಾಡುವ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು.
ಮುಗಿಲ್ ಪೇಟೆ ನಿರ್ದೇಶಕ ಭರತ್ ನಾವುಂದ
ಮುಗಿಲ್ ಪೇಟೆ ನಿರ್ದೇಶಕ ಭರತ್ ನಾವುಂದ

ಸಂದರ್ಶನ: ಹರ್ಷವರ್ಧನ್ ಸುಳ್ಯ    

ಮುಗಿಲ್ ಪೇಟೆ ಸಿನಿಮಾ ನೋಡಿದರೆ ನೀವೊಬ್ಬ ರವಿಚಂದ್ರನ್ ಫ್ಯಾನ್ ಬಾಯ್ ಆಗಿ ನಿರ್ಮಿಸಿದಂತಿದೆ

ಅದು ನೂರಕ್ಕೆ ನೂರು ಪ್ರತಿಶತ ನಿಜ. ಅವರ ಸಿನಿಮಾಗಳನ್ನು ನೋಡಿಕೊಂಡೇ ಬೆಳೆದವನು ನಾನು. ಸಿನಿಮಾ ಬಗೆಗೆ ಅವರಿಗಿರುವ ಪ್ಯಾಷನ್ ಎದುರು ನಮ್ಮದೇನೂ ಅಲ್ಲ. ಅವರ ಪುತ್ರ ಮನುರಂಜನ್ ಅವರ ಸಿನಿಮಾ ಮಾಡುವುದು ಗುರುತರವಾದ ಜವಾಬ್ದಾರಿಯಾಗಿತ್ತು.

ಸಿನಿಮಾದ ಟ್ರೇಲರ್ ನಲ್ಲಿ ಮನುರಂಜನ್ ಅವರು I am coming ಎಂದು ಹೇಳುತ್ತಾರೆ. ಮುಗಿಲ್ ಪೇಟೆ ಸಿನಿಮಾ ಮನುರಂಜನ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬ್ರೇಕ್ ಕೊಡುತ್ತೆ ಎನ್ನುವ ನಂಬಿಕೆ ಆಗಲೇ ಬಂದಿತ್ತಾ?

ಹೌದು ಸರ್. ನಮ್ಮ ತಂಡದ ಕೆಲಸ ಹಾಗೂ ಸ್ಕ್ರಿಪ್ಟ್ ಮೇಲೆ ನನಗೆ ನಂಬಿಕೆ ಇತ್ತು. ನನ್ನ ನಂಬಿಕೆ ಹುಸಿಯಾಗಿಲ್ಲ ಎಂದು ಭಾವಿಸುತ್ತೇನೆ.

ಸಿನಿಮಾದಲ್ಲಿ ಕುಂದಾಪ್ರ ಕನ್ನಡ ಭಾಷೆ ಬಳಕೆ ಮಾಡಿದ್ದೀರಾ. ಅದಕ್ಕೆ ಪರ್ಟಿಕ್ಯುಲರ್ ಕಾರಣ ಇದೆಯಾ?

ಕಾರಣ ಅಂತೇನಿಲ್ಲ. ನನ್ನ ಸ್ವಂತ ಊರು ಕುಂದಾಪುರದ ನಾವುಂದ. ಅಲ್ಲಿನ ಪರಿಸರ, ಭಾಷೆ ಜೊತೆಗೆ ಒಡನಾಟ ಇದ್ದಿದ್ದರಿಂದ ಅದನ್ನೇ ಬಳಸಿಕೊಂಡಿದ್ದೀನಿ. ನಮಗೆ ಯಾವ ವಿಚಾರಗಳಲ್ಲಿ ಸ್ಟ್ರಾಂಗ್ ಹೋಲ್ಡ್, ಫೆಮಿಲಿಯಾರಿಟಿ ಇರುತ್ತದೋ ಅದನ್ನೇ ಬಳಸಿಕೊಳ್ಳುವುದರಿಂದ ಸಿನಿಮಾ ಚೆನ್ನಾಗಿ ಬರುತ್ತದೆ ಅಂತ ನನ್ನ ಅಭಿಪ್ರಾಯ. 

ಸೋ ನಿಮ್ಮ ಹೋಮ್ ಟೌನ್ ಕುಂದಾಪುರ!

ಹೌದು. ನಮ್ಮದು ಕುಂದಾಪುರವಾದರೂ ಚಿತ್ರದುರ್ಗ, ಬೆಳಗಾವಿ, ಮೈಸೂರು ಹೀಗೆ ಜಿಲ್ಲೆಯಿಂದ ಜಿಲ್ಲೆಗೆ ನಮ್ಮ ಕುಟುಂಬ ಸ್ಥಳಾಂತರಗೊಳ್ಳುತ್ತಿತ್ತು. ಅಪ್ಪ ಹೊಟೇಲ್ ಉದ್ಯಮದಲ್ಲಿದ್ದಿದ್ದರಿಂದ ನನ್ನ ಬಾಲ್ಯವಿಡೀ ಊರಿಂದೂರಿಗೆ ಟ್ರಾನ್ಸ್ ಫರ್ ಆಗುತ್ತಾ ಇದ್ದಿದ್ದರಿಂದ ಎಲ್ಲಾ ಉತ್ತರ ಕರ್ನಾಟಕದ ಜವಾರಿ ಕನ್ನಡ, ಮೈಸೂರು ಕನ್ನಡ, ಕರಾವಳಿ ಕನ್ನಡ ಹೀಗೆ ವಿವಿಧ ಪ್ರಾಂತ್ಯಗಳ ಡಯಲೆಕ್ಟ್ ಕೂಡಾ ಬರುತ್ತೆ. ಮುಗಿಲ್ ಪೇಟೆ ಯಲ್ಲೂ ಅದರಿಂದ ಸಹಾಯವಾಯಿತು. ಕುಂದಾಪ್ರ ಕನ್ನಡ ಮಾತ್ರವಲ್ಲದೆ ವಿವಿಧ ಪ್ರಾಂತ್ಯಗಳ ಕನ್ನಡ ಡಯಲೆಕ್ಟನ್ನೂ ಅದರಲ್ಲಿ ಕಾಣಬಹುದು.

ಸಿನಿಮಾ ನಿರ್ದೇಶಕ ಆಗುವ ಕನಸು ಯಾವಾಗಿನಿಂದ?

ನಿಜಹೇಳಬೇಕೆಂದರೆ ಚಿಕ್ಕಂದಿನಿಂದಲೂ ಆಕ್ಟರ್ ಆಗುವ ಕನಸು ಕಾಣುತ್ತಿದ್ದೆ ನಾನು. ಹಾಗಿದ್ದವನು ಏಕಾಏಕಿ ಡೈರೆಕ್ಟರ್ ಚೇರ್ ಮೇಲೆ ಕೂರಬೇಕು ಎನ್ನುವ ಆಸೆ ಬರಲು ಕಾರಣ ಉಪೇಂದ್ರ ಅವರ 'ಓಂ' ಸಿನಿಮಾ. ಆ ಸಿನಿಮಾ ನೋಡುವಾಗ ನಾನು ೭ನೇ ತರಗತಿಯಲ್ಲಿದ್ದೆ. ಸಿನಿಮಾದಲ್ಲಿ ಡೈರೆಕ್ಟರ್ ನ ಮಹತ್ವವನ್ನು, ಪ್ರಭಾವವನ್ನು ನನಗೆ ಗೊತ್ತುಪಡಿಸಿದ ಸಿನಿಮಾ ಉಪೇಂದ್ರ ಅವರ ಓಂ.

ಸಿನಿಮಾ ಉದ್ಯಮಕ್ಕೆ ಬರಲು ಮನೆಯಲ್ಲಿ ಅನುಮತಿ ನೀಡಿದರಾ?

ಮನೆಯಲ್ಲಿ ಹೇಳಿದರೆ ತಾನೇ. ಡಿಗ್ರಿ ಓದುತ್ತೇನೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಬೆಂಗಳೂರಿಗೆ ಬಂದಿದ್ದು ನಾನು. ಆದರೆ ನನ್ನ ಪ್ಲ್ಯಾನು ಬೇರೆಯೇ ಇತ್ತು. ಸಿನಿಮಾದವರಲ್ಲಿ ಕೆಲಸ ಸೇರಿ ಡೈರೆಕ್ಟರ್ ಆಗಬೇಕು ಎನ್ನುವುದು. ಆದರೆ ಅದನ್ನು ನನಸು ಮಾಡಿಕೊಳ್ಳುವುದು ಎಷ್ಟು ಕಷ್ಟ ಎನ್ನುವುದು ನಿಧಾನವಾಗಿ ಅರಿವಿಗೆ ಬಂದಿತು. 

ಸಿನಿಮಾರಂಗದಲ್ಲಿ ಅವಕಾಶ ಸಿಕ್ಕಿತಾ?

ತುಂಬಾ ಹೊಟ್ಟೆ ಹಸಿವು ಸರ್. ಕೆಲ ದಿನಗಳ ಕಾಲ ನೆಂಟರಿಷ್ಟರ ಮನೆಯಲ್ಲಿದ್ದೆ. ಆದ್ರೆ ಅಲ್ಲಿ ತುಂಬಾ ದಿನ ಇರಲಾಗಲಿಲ್ಲ. ಅಷ್ಟರಲ್ಲಿ ನನ್ನ ಜೊತೆ ಊರುಬಿಟ್ಟಿದ್ದವರು ಬೆಂಗಳೂರಿನ ಸಹವಾಸ ಬೇಡವೆಂದು ಮತ್ತೆ ಕುಂದಾಪುರಕ್ಕೆ ಮರಳಿದ್ದರು. ನಾನು ಹೊಟ್ಟೆಗೆ ಅನ್ನವೂ ಇಲ್ಲದೆ, ಮಲಗಲು ಸೂರು ಇಲ್ಲದೆ ಅಲೆದಾಡುತ್ತಿದ್ದೆ. ಆ ಸಮಯದಲ್ಲಿ ದೇವಸ್ಥಾನವೊಂದನ್ನು ಹುಡುಕಿಕೊಂಡಿದ್ದೆ ಮಲಗಲು. ಹೊಟ್ಟೆ ತುಂಬಿಸಿದ್ದು ಇಸ್ಕಾನ್ ಟೆಂಪಲ್ ನ ಪೊಂಗಲ್ ಪ್ರಸಾದ. ಕಡೆಗೆ ಸಿನಿಮಾಗಳಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿದೆ. ಸಂಬಳ ಕೊಡುತ್ತಿರಲಿಲ್ಲ. ಆದರೆ, ಮೂರು ಹೊತ್ತಿನ ಊಟಕ್ಕೆ ಮೋಸವಿರಲಿಲ್ಲ. ತುಂಬಾ ಸಿನಿಮಾಗಳಲ್ಲಿ ಸಣ್ಣಪುಟ್ಟ ಕೆಲ್ಸ ಮಾಡಿದೆ.

ಯಾರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೀರಾ

ಅವರಿಗೆಲ್ಲಾ ನಾನು ಅವರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೀನಿ ಅನ್ನೋದೂ ಗೊತ್ತಿಲ್ಲ ಸರ್. ಉದಾಹರಣೆಗೆ ಪ್ರೇಮ್ ಅವರ ಪ್ರೀತಿ ಏಕೆ ಭೂಮಿ ಮೇಲಿದೆ ಸಿನಿಮಾಗೂ ಕೆಲಸ ಮಾಡಿದ್ದೀನಿ. ಆ ಸಂಗತಿ ಅವರಿಗೂ ಗೊತ್ತಿರಲಿಕ್ಕಿಲ್ಲ.

ಮನೆಯವರಿಗೆ ಏನು ಸಬೂಬು ಹೇಳಿದ್ದಿರಿ

ಮನೆಯವರಿಗೆ ಮತ್ತೆ ಸುಳ್ಳು ಹೇಳುವ ಅಗತ್ಯವಿರಲಿಲ್ಲ. ಏಕೆಂದರೆ ಬೆಳಿಗ್ಗೆಯೆಲ್ಲಾ ನಾನು ಸಿನಿಮಾಗಳಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುವುದರ ಜೊತೆಗೆ ಕರೆಸ್ಪಾಂಡೆನ್ಸ್ ನಲ್ಲಿ ಇತಿಹಾಸ ವಿಭಾಗದಲ್ಲಿ ಫರ್ಸ್ಟ್ ಕ್ಲಾಸಿನಲ್ಲಿ ಡಿಗ್ರಿ ಓದುತ್ತಿದ್ದೆ. ಹಾಗೇ ಓದಿ ಡಬಲ್ ಡಿಗ್ರೀ ಗ್ರಾಜುವೇಟ್ ಆದೆ ಸರ್ ನಾನು.

ವೆರಿ ಗುಡ್ ಸರ್. ಆಮೇಲೆ?

ಆಮೇಲೆ ಜೀವನ ನಿರ್ವಹಣೆ ಕಷ್ಟವಾಗತೊಡಗಿತು. ಸಿನಿಮಾ ಕೆಲಸಗಳಿಂದ ದುಡ್ಡು ಬರುತ್ತಿರಲಿಲ್ಲವಲ್ಲ. ಹಾಗಾಗಿ ನನ್ನ ಡಿಗ್ರೀ ಸರ್ಟಿಫಿಕೆಟ್ ಆಧಾರದಲ್ಲಿ ಕೆಲಸ ಮಾಡಲು ಮುಂದಾದೆ. ಪೀಣ್ಯದಲ್ಲಿನ ಒಂದು ಕಂಪನಿಗೆ ಸಂದರ್ಶನಕ್ಕೆ ಹೋದೆ. ಅದರ ಮಾಲೀಕರು ನನ್ನ ಪುಣ್ಯಕ್ಕೆ ಕುಂದಾಪುರದವರೇ ಆಗಿದ್ದರು. ನನಗೆ ಕೆಲಸ ಕೊಟ್ಟರು. ತಿಂಗಳು ತಿಂಗಳು 8,000 ರೂ. ಸಂಬಳವೂ ನಿಗದಿಯಾಯಿತು. ನೆಮ್ಮದಿಯಾಗಿದ್ದೆ.

ಮತ್ತೆ ಸಿನಿಮಾ ಕಡೆ ಸೆಳೆತ ಒಮ್ಮೆಯೂ ಬರಲಿಲ್ಲವಾ?

ಜೀವನದ ಮಜವೇ ಅದು ಸರ್. ಸೆಳೆತ ಹಾಗೆ ಸುಮ್ಮನೆ ಬಿಟ್ಟುಹೋಗುವಂಥದ್ದಲ್ಲ. ಸಿನಿಮಾ ಸೆಳೆತದಿಂದಾಗಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮತ್ತೆ ಸಿನಿಮಾ ಅಂತ ಓಡಾಡತೊಡಗಿದೆ. ಸ್ಕ್ರಿಪ್ಟ್ ಬರೆಯುವುದು, ಶಾರ್ಟ್ ಫಿಲಂ ಮಾಡುವುದು ಹೀಗೆ ಕ್ರಿಯೇಟಿವ್ ಕೆಲಸಗಳಲ್ಲಿ ತೊಡಗಿಕೊಂಡೆ.

ಅಡಚಣೆಗಾಗಿ ಕ್ಷಮಿಸಿ ಸಿನಿಮಾಗೆ ಕಥೆ ಬರೆದಿದ್ದು ಅದೇ ಸಮಯದಲ್ಲಾ?

ಇಲ್ಲ ಸರ್. ಅದಕ್ಕೂ ಮೊದಲು ಮುಗಿಲ್ ಪೇಟೆ ಸಿನಿಮಾ ಕಥೆ ಸಿದ್ಧಮಾಡಿಟ್ಟುಕೊಂಡಿದ್ದೆ. ನನ್ನ ಕತೆಗಾರ ಸ್ನೇಹಿತ ಒಬ್ಬ ರವಿಚಂದ್ರನ್ ಸರ್ ಮಗ ಮನುರಂಜನ್ ಅವರಿಗೆ ಕತೆ ಹೇಳಲು ಹೋಗಿ ಫೇಲ್ ಆಗಿದ್ದ. ನನ್ನನ್ನೂ ಹೋಗು ಟ್ರೈ ಮಾಡು ಅಂತ ಹುರಿದುಂಬಿಸಿದ. ನನ್ನ ಅದೃಷ್ಟವೋ ಏನೋ ಮನೂರಂಜನ್ ಅವರಿಗೆ ನನ್ನ ಕಥೆ ಇಷ್ಟವಾಗಿಬಿಟ್ಟಿತು. ಆ ಕಥೆ ಮೇಲೆ ಇನ್ನಷ್ಟು ವರ್ಕೌಟ್ ಮಾಡಬೇಕು ಮನೆಗೆ ಬರುತ್ತಿರು ಅಂದರು. 

ಮುಗಿಲ್ ಪೇಟೆ ಸಿನಿಮಾ ಕಥೆಯನ್ನು ಯಾರಿಗಾಗಿ ಮಾಡಿದಿರಿ?

ಕತೆ ಮಾಡುವಾಗ ಯಾರಿಗೋಸ್ಕರವೂ ಮಾಡಲಿಲ್ಲ. ಆದರೆ ಮನುರಂಜನ್ ಅವರು ಕಥೆಯಲ್ಲಿ ಆಸಕ್ತಿ ತೋರಿದಾಗ ಧೈರ್ಯ ಮಾಡಿ ಈ ಕಥೆಯನ್ನು ನಿಮಗೇ ಮಾಡಬಹುದು ಎಂದು ನಾನೇ ಅವರಲ್ಲಿ ಮೊದಲು ಹೇಳಿದೆ. ಆಯ್ತು ಅಂದರು.

ಮತ್ತೆ ಅಡಚಣೆಗಾಗಿ ಕ್ಷಮಿಸಿ ಸಿನಿಮಾ ಮಾಡಿದ್ದು ಯಾವ ಗ್ಯಾಪಿನಲ್ಲಿ?

ಮನುರಂಜನ್ ಅವರ ಸಂಪರ್ಕದಲ್ಲಿಯೇ ಇದ್ದೆ. ಕತೆಯ ಮೂಲ ಸ್ವರೂಪ ಹಾಗೆಯೇ ಇದ್ದರೂ ದೃಶ್ಯಗಳು ಮತ್ತು ಮೇಕಿಂಗ್ ನಲ್ಲಿ ಬದಲಾವಣೆಗಳು, ಇಂಪ್ರೊವೈಸೇಷನ್ ಗಳು ಆಗುತ್ತಿದ್ದವು. ಅದರ ಮಧ್ಯೆ ಕ್ರೌಡ್ ಫಂಡಿಂಗ್ ಮಾದರಿಯಲ್ಲಿ ಅಡಚಣೆಗಾಗಿ ಕ್ಷಮಿಸಿ ಸಿನಿಮಾ ಮಾಡಿದೆ. ಅದಕ್ಕೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

ಅದು ನಿಮ್ಮ ಕೆರಿಯರ್ ಮೇಲೆ ಪ್ರಭಾವ ಬೀರಿತೇ?

ಹೌದು. ಗಾಂಧಿನಗರದಲ್ಲಿ ಯಶಸ್ಸಿಗೆ ಮಾತ್ರ ಬೆಲೆ. ಸೋತವರಿಗೆ ಕಿಮ್ಮತ್ತಿನ ಬೆಲೆಯೂ ಇಲ್ಲ. ಹೀಗಾಗಿ ಮನುರಂಜನ್ ಅವರ ಬಳಿ ಮತ್ತೆ ಅವಕಾಶ ಕೇಳಿ ಹೋಗುವುದು ಸರಿಯಲ್ಲ ಎಂದುಕೊಂಡೆ. ಮನುರಂಜನ್ ಅವರಿಗಾಗಿ ಸಿದ್ಧಮಾಡಿದ್ದ ಕಥೆಯನ್ನು ಬೇರೆ ಹೊಸಬರಿಗೆ ಮಾಡೋಣ ಎಂದು ನಿರ್ಧರಿಸಿ ಅವರಲ್ಲಿ ಅದನ್ನೇ ಹೇಳಿದೆ. 

ರವಿಚಂದ್ರನ್ ಏನಂದರು?

ದೊಡ್ಡವರ ಮನಸ್ಸು ಯಾವತ್ತೂ ದೊಡ್ಡದಾಗಿಯೇ ಇರುತ್ತದೆ ಎನ್ನುವ ಮಾತು ಎಷ್ಟೊಂದು ನಿಜ ಅನ್ನೋದು ಆವತ್ತು ಅರ್ಥವಾಯಿತು. ಅವರು ನನ್ನ ಹಳೆ ಸಿನಿಮಾದ ಸೋಲನ್ನು ಪರಿಗಣಿಸಿಯೇ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಮುಗಿಲ್ ಪೇಟೆ ಸಿನಿಮಾ ಅಗಲು ಬೇಕಾದ ಎಲ್ಲಾ ಬಗೆಯ ಸಹಕಾರ ನೀಡಿದರು. ಐಯಾಮ್ ಲಕ್ಕಿ. ಅಲ್ಲದೆ ಕಡೆಯವರೆಗೂ ಸಿನಿಮಾ ಹೇಗೆ ಬರುತ್ತಿದೆ ಎಂದು ತಿಳಿದುಕೊಳ್ಳಲು ಕೂಡಾ ಬರಲಿಲ್ಲ.

ಮನುರಂಜನ್ ಜೊತೆ ನಿಮ್ಮ ಶೂಟಿಂಗ್ ಅನುಭವ ಹೇಗಿತ್ತು?

ನಾನು ಮೊದಲೇ ಹೇಳಿಬಿಟ್ಟಿದ್ದೆ. ಮನುರಂಜನ್ ಅವರನ್ನು ಕನ್ನಡ ಪ್ರೇಕ್ಷಕರ ಮುಂದೆ ಯಾವ ಲುಕ್ ನಲ್ಲಿ ತೋರಿಸಬೇಕು ಎಂದು ಮೊದಲೇ ಡಿಸೈಡ್ ಮಾಡಿದ್ದೆ. ಗುಂಗುರು ತಲೆಕೂದಲು ರವಿಚಂದ್ರನ್ ಅವರಿಗೆ ಮಾತ್ರ ಸೂಟ್ ಆಗುತ್ತೆ ಎಂದು ಹೇಳಿ ಮನು ಅವರ ಹೇರ್ ಸ್ಟೈಲ್ ಚೇಂಜ್ ಮಾಡಿಸಿದೆ. ಆಮೇಲೆ ವೇಯ್ಟ್ ಗೇನ್ ಆಗಿಸಿದೆ. ಮನು ಯಾವುದಕ್ಕೂ ಬೇಜಾರು ಮಾಡಿಕೊಳ್ಳಲಿಲ್ಲ ಸ್ನೇಹಿತನ ಥರ ನನ್ನ ಮೇಲೆ ನಂಬಿಕೆ ಇರಿಸಿದರು. 

ಮನು ಮತ್ತು ನಾಯಕಿ ಕಯಾದು ಅವರಿಗೆ ಸಿನಿಮಾ ಶುರುವಾಗುವುದಕ್ಕೂ ವರ್ಕ್ ಶಾಪುಗಳನ್ನು ಮಾಡಿದ್ದಿರೆಂದು ಕೇಳಿದ್ದೆ...

ಹೌದು ಸಿನಿಮಾದಲ್ಲಿನ ಬಾಡಿ ಲ್ಯಾಂಗ್ವೇಜ್, ಸಂಭಾಷಣೆ ಒಪ್ಪಿಸುವ ಪರಿ ಹೀಗೆ ಸಣ್ಣ ಸಣ್ಣ ಸಂಗತಿಯನ್ನೂ ಅಭ್ಯಾಸ ಮಾಡಿಸಲು ವರ್ಕ್ ಶಾಪ್ ಮಾಡಿಸಿದ್ದೆ. ನಾಯಕಿ ಕಯಾದು ಅವರು ವರ್ಕ್ ಶಾಪ್ ಜೊತೆ ಕನ್ನಡ ತರಗತಿಗೂ ಹಾಜರಾಗಬೇಕಿತ್ತು. ಹಿಂದಿಯವರಾದ ಕಯಾದು ಅವರಿಗೆ ಕನ್ನಡ ಕಲಿಸಲು ಕಾಲೇಜು ಕನ್ನಡ ಮೇಷ್ಟ್ರನ್ನೂ ನೇಮಿಸಿದ್ದೆವು. ಈ ಬಗೆಯ ಟೀಮ್ ಎಫರ್ಟ್ ನಿಂದಲೇ ಸಿನಿಮಾ ಚೆನ್ನಾಗಿ ಮೂಡಿಬಂದಿರುವುದು.

ರವಿಚಂದ್ರನ್ ಅವರು ಸಿನಿಮಾ ಮಾಡುವಾಗ ಟಿಪ್ಸ್ ಕೊಡುತ್ತಿದ್ದರಾ?

ಇಲ್ಲ. ನನ್ನ ಮೇಲೆ ನಂಬಿಕೆ ಇರಿಸಿ ಸಿನಿಮಾ ನಿರ್ಮಾಣದ ಹೊಣೆಯನ್ನು ಅವರು ನನಗೇ ವಹಿಸಿಬಿಟ್ಟಿದ್ದರು. ಅವರು ಯಾವುದೇ ವಿಚಾರದಲ್ಲೂ ಇಂಟರ್ ಫಿಯರ್ ಆಗಲಿಲ್ಲ. ಆ ವಿಚಾರದಲ್ಲಿ ಅವರು ನಿಜಕ್ಕೂ ಗ್ರೇಟ್. ಸಿನಿಮಾ ಸಿದ್ಧವಾದ ನಂತರವೂ ಅವರು ಥಿಯೇಟರ್ ನಲ್ಲಿಯೇ ಸಿನಿಮಾ ನೋಡುತ್ತೇನೆ ಎಂದರು.

ಸಿನಿಮಾ ನೋಡಿ ರವಿಚಂದ್ರನ್ ಹೇಳಿದ ಮೊದಲ ಮಾತೇನು?

ರವಿಚಂದ್ರನ್ ಸರ್, ಮಗನಿಗೆ ತಕ್ಕಂಥ ಸಿನಿಮಾ ಮಾಡಿದ್ದೀಯ. ಕೆಲವೊಂದು ಕಡೆ ಇನ್ನಷ್ಟು ಚೆನ್ನಾಗಿ ಬರಬಹುದಿತ್ತು. ಓವರ್ ಆಲ್, ಈ ಸಿನಿಮಾದಿಂದ ಮನು ಸ್ಟಾರ್ ಆಗುತ್ತಾನೆ ಎನ್ನುವ ನಂಬಿಕೆ ಬಂದಿದೆ. ನನ್ನ ನಂಬಿಕೇನಾ ಉಳಿಸಿಕೊಂಡಿದ್ದೀಯಾ ಎಂದರು. ಸಿನಿಮಾಗೆ ಅವಾರ್ಡ್ ಬರುತ್ತೋ ಬಿಡುತ್ತೋ ನನಗೆ ಗೊತ್ತಿಲ್ಲ ಆದರೆ ರವಿಚಂದ್ರನ್ ಅವರ ಈ ಮಾತಿನ ಮುಂದೆ ಇನ್ನೇನೂ ಬೇಕು ಅನ್ನಿಸಲಿಲ್ಲ.

ಮುಂದೆ?

ಅಡಚಣೆಗಾಗಿ ಕ್ಷಮಿಸಿ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಪ್ರಕಾರದ ಸಿನಿಮಾ ಆಗಿತ್ತು. ಮುಗಿಲ್ ಪೇಟೆ ರೊಮ್ಯಾಂಟಿಕ್- ಫ್ಯಾಮಿಲಿ ಡ್ರಾಮಾ ಸಿನಿಮಾ. ಒಮ್ಮೆ ಮಾಡಿದ ಬಗೆಯ ಸಿನಿಮಾವನ್ನೇ ಮಾಡಲು ಆಸಕ್ತಿಯಿಲ್ಲ. ಮುಂದಿನ ಸಿನಿಮಾ ನನ್ನ ಈ ಎರಡೂ ಸಿನಿಮಾಗಳಿಗಿಂತ ಭಿನ್ನವಾಗಿರುತ್ತದೆ ಎಂದಷ್ಟೇ ಹೇಳಬಲ್ಲೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com