ಹರಿಹರನಿಗೆ ಸಂಗೀತದಾಭಿಷೇಕ: 'ಗರುಡ ಗಮನ ವೃಷಭ ವಾಹನ' ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಸಂದರ್ಶನ

ಸಿನಿಮಾದಲ್ಲಿ ಕೇಳಿಬರುವ ಒಂದು ನಿಟ್ಟುಸಿರು ಕೂಡಾ ಸಿನಿಮಾ ಕಟ್ಟಿಕೊಡುವ ವಿನೂತನ ಅನುಭವದ ಭಾಗವೇ ಆಗಿದೆ. ಹೀಗಾಗಿ ಹಿನ್ನೆಲೆ ಸಂಗೀತ ಎನ್ನುವುದು ಸಿನಿಮಾದ ಕಥೆಯಿಂದಲೇ ಪ್ರಭಾವಕ್ಕೊಳಪಡುತ್ತದೆ.
ಡೀಮನ್ ಇನ್ ಮಿ(Demon in me) ಹಾಡಿನಲ್ಲಿ ಸಂಗೀತ ನಿರ್ದೇಶಕ ಮಿದುನ್ ಮುಕುಂದನ್
ಡೀಮನ್ ಇನ್ ಮಿ(Demon in me) ಹಾಡಿನಲ್ಲಿ ಸಂಗೀತ ನಿರ್ದೇಶಕ ಮಿದುನ್ ಮುಕುಂದನ್

ಸಂದರ್ಶನ: ಹರ್ಷವರ್ಧನ್ ಸುಳ್ಯ

ದೃಶ್ಯದಂತೆಯೇ ಶಬ್ದ ಕೂಡಾ ಕಥೆ ಹೇಳಲು ಬಳಕೆಯಾಗುವ ಪರಿಣಾಮಕಾರಿ ಮಾಧ್ಯಮ. ಗರುಡ ಗಮನ ವೃಷಭ ವಾಹನ ಸಿನಿಮಾದ ಸೌಂಡನ್ನು, ಧ್ವನಿಯನ್ನು ಪ್ರಭಾವಿಸಿದ್ದು ಏನು?   

ಮತ್ತೇನೂ ಅಲ್ಲ, ಸಿನಿಮಾದ ಕಥೆ ಒಂದೇ. ಸಿನಿಮಾದಲ್ಲಿ ಕೇಳಿಬರುವ ಒಂದು ನಿಟ್ಟುಸಿರು ಕೂಡಾ ಸಿನಿಮಾ ಕಟ್ಟಿಕೊಡುವ ವಿನೂತನ ಅನುಭವದ ಭಾಗವೇ ಆಗಿದೆ. ಹೀಗಾಗಿ ಸಂಗೀತ ಮಾತ್ರವಲ್ಲದೆ ಸಿನಿಮಾದಲ್ಲಿನ ಪ್ರತಿಯೊಂದು ವಿಭಾಗ ಕೂಡಾ ಸಿನಿಮಾದ ಕಥೆಯಿಂದಲೇ ಪ್ರಭಾವಕ್ಕೊಳಪಡುತ್ತದೆ.

<strong>ಮಿದುನ್ ಮುಕುಂದನ್</strong>
ಮಿದುನ್ ಮುಕುಂದನ್

ಈ ಸಿನಿಮಾಗೆ ಸಂಗೀತ ನೀಡುವುದಕ್ಕೂ ಮುನ್ನ ನಿರ್ದೇಶಕ ರಾಜ್ ಶೆಟ್ಟಿ ಸೂಚನೆಗಳೇನಿದ್ದವು?

ಕಥೆ ಬರೆದು, ನಟಿಸಿ, ನಿರ್ದೇಶನ ಜವಾಬ್ದಾರಿ ಹೊತ್ತುಕೊಂಡ ರಾಜ್ ಬಿ. ಶೆಟ್ಟಿ ಸಂಗೀತಕ್ಕೆ ಬಂದಾಗ ನಿರ್ದಿಷ್ಟ ಸೂಚನೆಗಳೇನನ್ನೂ ನೀಡಿರಲಿಲ್ಲ. ಅವರಿಗೆ ಯಾವ ಸೀನ್ ಯಾವ ಬಗೆಯ ಭಾವನೆಯನ್ನು, ಫೀಲ್ ಅನ್ನು ಪ್ರೇಕ್ಷಕರಲ್ಲಿ ಹುಟ್ಟಿಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇತ್ತು. ಅದನ್ನು ನನ್ನಲ್ಲಿ ಹಂಚಿಕೊಳ್ಳುತ್ತಿದ್ದರು. ಅಂಥದ್ದೇ ಫೀಲ್ ಅನ್ನು ಕೊಡುವ ಕೆಲಸ ನಾನು ಮಾಡಿದ್ದೇನೆ. ಇಂಥದ್ದೇ ಹಾಡು, ಇಂಥಾ ಪ್ರಕಾರದ ಸಂಗೀತ, ಇಂಥಾ ವಾದ್ಯಗಳೇ ಇರಬೇಕು ಎಂಬಿತ್ಯಾದಿ ಸೂಚನೆಗಳನ್ನು ನೀಡಿದ್ದೇ ಇಲ್ಲ. ಏನು ಮಾಡಿದರೂ, ಹೇಗೆ ಮಾಡಿದರೂ ಸರಿಯೇ ಒಟ್ಟಿನಲ್ಲಿ ಸಂಗೀತ ಪ್ರೇಕ್ಷಕನಲ್ಲಿ ಅವರು ಅಂದುಕೊಂಡ ಫೀಲ್ ನೀಡಿದರೆ ಅವರಿಗೆ ಅಷ್ಟೇ ಸಾಕು. ಸೀನ್ ಧ್ವನಿಸುತ್ತಿದ್ದ ಸಂದೇಶ ಸಂಗೀತದಲ್ಲಿ ಕೇಳಿಬರಬೇಕು ಎಂದಷ್ಟೇ ಅವರು ಆಶಿಸುತ್ತಿದ್ದರು.

ಸಿನಿಮಾದ ಬ್ಯಾಕ್ ಗ್ರೌಂಡ್ ಸ್ಕೋರಿನಲ್ಲಿ ಕೇಳಿಬರುವ ಹಮ್ಮಿಂಗ್ ದನಿ ಎಂಥವರ ಎದೆಯಲ್ಲೂ ಒಂದು ಕ್ಷಣ ಭೀತಿ ಹುಟ್ಟಿಸುವಂತಿದೆ. ಅಷ್ಟು haunting ಆಗಿದೆ. ಅದರ ಹುಟ್ಟು ಹೇಗಾಯ್ತು?

ಸಿನಿಮಾದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಬ್ರಹ್ಮಯ್ಯನ ಮೇಲೆ ದಾಳಿಯಾಗುವ ದೃಶ್ಯ ಬರುತ್ತದೆ. ಅದರಲ್ಲಿ ಒಂದು ಕಡೆ ಸೈಲೆನ್ಸ್ ಇತ್ತು. ಆ ಖಾಲಿ ಜಾಗವನ್ನು ತುಂಬಲು ಸಂಗೀತ ತುಣುಕು ಬೇಕಿತ್ತು. ಆ ತುಣುಕು ಇಡೀ ಸಿನಿಮಾದ ಫೀಲ್ ಅನ್ನು ಧ್ವನಿಸಬೇಕು, ನಮ್ಮೊಳಗಿಂದ ಒಬ್ಬ ಮಾನ್ ಸ್ಟರ್(ರಾಕ್ಷಸ) ಹೊರಬಂದಾಗ ಕೇಳಿಬರುವ ಸದ್ದಿನಂತಿರಬೇಕು ಎಂದು ರಾಜ್ ಶೆಟ್ಟಿ ಹೇಳಿದರು. ನಾನು ಅದೇ ಗುಂಗಿನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಬಾಯಲ್ಲಿ ಒಂದು ಟ್ಯೂನ್ ಅನ್ನು ಗುನುಗುನಿಸಿದೆ. ತುಂಬಾ ನ್ಯಾಚುರಲ್ ಆಗಿ ಬಂದ ಟ್ಯೂನ್ ಅದು. ಕೂಡಲೆ ಅದನ್ನು ರೆಕಾರ್ಡ್ ಮಾಡಿ ನಮ್ಮ ಸೌಂಡ್ ಎಂಜಿನಿಯರ್ ಗೆ ಕಳಿಸಿದೆ. ಆತ ಅದನ್ನು ಲೇಯರ್ ಗಳನ್ನಾಗಿ ಕೂರಿಸಿ ರಿವರ್ಬ್ ಎಫೆಕ್ಟ್ ಕೊಟ್ಟು ಮತ್ತೆ ನನಗೆ ಕಳಿಸಿದೆ. ನನಗೆ ಲೈಕಾಗಿ ಅದನ್ನೇ ರಾಜ್ ಅವರಿಗೆ ಕಳಿಸಿದೆ. ಅವರದನ್ನು ಕೇಳಿದ ಕ್ಷಣವೇ ಇಷ್ಟಪಟ್ಟು ಅದನ್ನೇ ಇಟ್ಟುಕೊಳ್ಳೋಣ ಎಂದರು.

ಸೋಜುಗದ ಸೂಜು ಮಲ್ಲಿಗೆ ಹಾಡು ಚಿತ್ರದಲ್ಲಿ ಬಳಕೆ ಮಾಡಬೇಕೆಂಬುದು ಯಾರ ಐಡಿಯಾ? ಆ ಹಾಡಿನ ಜನಪ್ರಿಯತೆಯ ಲಾಭ ಪಡೆಯಲು ಅದನ್ನು ಚಿತ್ರದಲ್ಲಿ ಬಳಸಿಕೊಂಡಿದ್ದೀರಾ? 

ಆ ಹಾಡನ್ನು ಬಳಸಿಕೊಳ್ಳಬೇಕೆನ್ನುವುದು ರಾಜ್ ಶೆಟ್ಟಿ ಐಡಿಯಾ. ಖಂಡಿತವಾಗಿಯೂ ಜನಪ್ರಿಯತೆಯ ಕಾರಣಕ್ಕೆ ಆ ಹಾಡನ್ನು ಬಳಸಿಕೊಂಡಿಲ್ಲ. ಹಾಗಿದ್ದಿದ್ದರೆ ಸಿನಿಮಾ ಬಿಡುಗಡೆಗೂ ಮುನ್ನ ಆ ಹಾಡಿನ ಸಿನಿಮಾ ಆವೃತ್ತಿಯನ್ನು ಬಿಡುಗಡೆಗೊಳಿಸುತ್ತಿದ್ದವು. ಆದರೆ ಹಾಗೆ ಮಾಡಲಿಲ್ಲ. ಏಕೆಂದರೆ ಸಿನಿಮಾದಲ್ಲಿ ಕಥಾನಾಯಕ ಶಿವ ಹುಲಿ ನೃತ್ಯ ಮಾಡುವ ದೃಶ್ಯ ಕಟ್ಟಿಕೊಡಬೇಕಿದ್ದ ಫೀಲ್ ಅನ್ನು ಸೋಜುಗದ ಸೂಜು ಮಲ್ಲಿಗೆ ಹಾಡು ಕಟ್ಟಿಕೊಡುತ್ತಿತ್ತು. ಇಟ್ ವಾಸ್ ಪರ್ಫೆಕ್ಟ್ ಫಿಟ್. ಇಂದು ಸಿನಿಮಾ ನೋಡಿದ ಪ್ರೇಕ್ಷಕರೆಲ್ಲರೂ ಆ ದೃಶ್ಯದ ಕುರಿತು ಮಾತನಾಡುತ್ತಿದ್ದಾರೆ. ಆ ದೃಶ್ಯ ಪರದೆ ಮೇಲೆ ಬಂದಾಗ ಅದರ ವಿಡಿಯೊ ಮಾಡಿ ಶೇರ್ ಮಾಡುತ್ತಿದ್ದಾರೆ. ಆ ಹಾಡು ದೃಶ್ಯದ ಅನುಭವವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಿದೆ. ದೃಶ್ಯದಲ್ಲಿ ರೌದ್ರಾವತಾರ ತಾಳಿರುವ ಶಿವನ ಕೋಪ ಶಮನ ಮಾಡುವ ರೀತಿಯಲ್ಲಿಯೂ ಕೆಲಸ ಮಾಡುತ್ತದೆ. ಹೀಗೆ ನಾನಾ ಅರ್ಥಗಳನ್ನು ಕಲ್ಪಿಸಬಹುದು. 

ಸಿನಿಮಾದ ಬ್ಯಾಕ್ ಗ್ರೌಂಡ್ ಸ್ಕೋರ್ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಈ ಬಗ್ಗೆ ಏನನ್ನಿಸುತ್ತೆ? 

ಸಿನಿಮಾದ ಸಂಗೀತಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಅಭಿಮಾನದಿಂದ ಕುಗ್ಗಿಹೋಗಿದ್ದೇನೆ. ಅದರ ಎಲ್ಲಾ ಕ್ರೆಡಿಟ್ ಇಡೀ ಸಿನಿಮಾ ತಂಡಕ್ಕೆ ಸಲ್ಲಬೇಕು. ನನಗೆ ಯಾರಾದರೂ ಹಾಗೆ ಸುಮ್ಮನೆ ಬಂದು ಒಂದು ಲವ್ ಸಾಂಗ್ ಮಾಡಿಕೊಡು ಎಂದು ಕೇಳಿದರೆ ನಾನು ತಬ್ಬಿಬ್ಬಾಗುತ್ತೇನೆ. ನನ್ನಿಂದ ಅದು ಸಾಧ್ಯವಿಲ್ಲ. ಪ್ರತಿಯೊಬ್ಬ ಕ್ರಿಯೇಟಿವ್ ವ್ಯಕ್ತಿಯಂತೆ ನನಗೂ ಪ್ರೇರಣೆ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ನನಗೆ ಆ ಪ್ರೇರಣೆ ದೊರೆಯುವುದು ನಿರ್ದೇಶಕ ಹೇಳುವ ಸಿನಿಮಾದ ಕಥೆಯಿಂದ. ಅದರಲ್ಲಿನ ದೃಶ್ಯಗಳು ಕಟ್ಟಿಕೊಡುವ ಅನುಭವಗಳೇ ನನ್ನ ಸಂಗೀತಕ್ಕೆ ಪ್ರೇರಣೆ. ಇಂದಿನ ಪ್ರೇಕ್ಷಕರು ಸಿನಿಮಾದ ಪ್ರತಿಯೊಂದು ವಿಭಾಗದ ಕುರಿತು ತಿಳಿವಳಿಕೆ ಹೊಂದಿದ್ದಾರೆ. ಇದರಿಂದ ಒಂದು ವಿಚಾರ ಸ್ಪಷ್ಟ. ಸಿನಿಮಾ ತಂತ್ರಜ್ಞರ ಜವಾಬ್ದಾರಿ ಹೆಚ್ಚಿದೆ.

ಸಿನಿಮಾ ಪ್ರಾರಂಭದಲ್ಲಿ ಜೇಮ್ಸ್ ಬಾಂಡ್ ಸಿನಿಮಾಗಳಂತೆ ಹಾಡಿನ ಮೂಲಕ ಕ್ರೆಡಿಟ್ಸ್ ರೋಲ್ ಮಾಡಲಾಗಿದೆ. ಅದರಲ್ಲಿ ನೀವು ಕೂಡಾ ಕಾಣಿಸಿಕೊಂಡಿದ್ದೀರಿ..

(ನಗು) ಅದು ಪೂರ್ವನಿರ್ಧರಿತವಲ್ಲ. ಪ್ರಾರಂಭದಲ್ಲಿ ಬ್ಯಾಕ್ ಗ್ರೌಂಡ್ ಸಂಗೀತದ ಮೂಲಕ ಕ್ರೆಡಿಟ್ಸ್ ರೋಲ್ ಮಾಡುವುದು ಎಂದಿತ್ತು. ನಂತರ ಒಂದು ಹಾಡಿನ ಜೊತೆ ಕ್ರೆಡಿಟ್ಸ್ ರೋಲ್ ಮಾಡುವುದೆಂದು ರಾಜ್ ಶೆಟ್ಟಿ ನಿರ್ಧರಿಸಿದರು. ಆ ಹಾಡು ಡೀಮನ್ ಇನ್ ಮಿ (Demon in me) ಅರ್ಥಾತ್ ನನ್ನೊಳಗಿನ ರಾಕ್ಷಸ. ಅದರ ಲಿರಿಕಲ್ ವಿಡಿಯೊ ಮಾಡುತ್ತಿದ್ದಿದ್ದು ಪ್ರತೀಕ್ ಶೆಟ್ಟಿ ಎಂಬ ಓರ್ವ ಕ್ರಿಯೇಟಿವ್ ವ್ಯಕ್ತಿ. ಆತ ಹಾಡು ಕೇಳಿ ಇದನ್ನು ವಿಡಿಯೊ ಮಾಡಿದರೆ ಇನ್ನಷ್ಟು ಉತ್ತಮವಾಗಿ ಮೂಡಿ ಬರುತ್ತದೆ ಎಂದು ವಿಡಿಯೊ ಮಾಡಿದರು. ಆ ವಿಡಿಯೊ ರಾಜ್ ಶೆಟ್ಟಿಗೆ ಅವರಿಗೂ ಇಷ್ಟವಾಗಿ ಕ್ರೆಡಿಟ್ ರೋಲ್ ಆಗುವಾಗ ಬರಬೇಕು ಎಂದು ನಿರ್ಧರಿಸಿದರು.

ಗರುಡ ಗಮನ ವೃಷಭ ವಾಹನ ಸಿನಿಮಾ, ಕರಾವಳಿ ಭಾಗದಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಆ ದೃಷ್ಟಿಯಿಂದ ಕರಾವಳಿ ಭಾಗದ ಸಂಗೀತದ ಸೊಗಡನ್ನು, ಅಲ್ಲಿನ ಮ್ಯೂಸಿಕ್ ಸೀನನ್ನು ತಿಳಿಯುವ ಪ್ರಯತ್ನ ನಡೆಸಿದ್ದಿರಾ? 

ಇಲ್ಲ. ನಾನು ಮೂಲತಃ ಕೇರಳದ ಕಣ್ಣೂರಿನವನು. ನನ್ನೂರಿನ ಸೊಗಡಿಗೂ ಕರ್ನಾಟಕ ಕರಾವಳಿ ಭಾಗದ ಸೊಗಡಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಅದಕ್ಕೂ ಮಿಗಿಲಾಗಿ ನಾನು ಮಂಗಳೂರಿನಲ್ಲಿ ವಿದ್ಯಾಭ್ಯಾಸ ನಿಮಿತ್ತ 6 ವರ್ಷಗಳ ಕಾಲ ನೆಲೆಸಿದ್ದೆ. ಹೀಗಾಗಿ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವಾಗ ಹೆಚ್ಚು ಕಷ್ಟವಾಗಲಿಲ್ಲ. ಅಲ್ಲದೆ ಸಿನಿಮಾದಲ್ಲಿ ಸಿಂಕ್ ಸೌಂಡ್ ಬಳಕೆ ಮಾಡಿರುವುದರಿಂದ ಜಾತ್ರೆ, ಹುಲಿ ವೇಷ ದೃಶ್ಯಗಳಲ್ಲಿ ಅಲ್ಲಿನದೇ  ಸಂಗೀತ ಉಳಿಸಿಕೊಂಡಿದ್ದೇವೆ ಬದಲಾವಣೆ ಮಾಡಿಕೊಂಡಿದ್ದೇನೆ. ಹುಲಿ ವೇಷ ಸಂಗೀತ ರಕ್ಷಿತ್ ಶೆಟ್ಟಿ ಅವರ 'ಉಳಿದವರು ಕಂಡಂತೆ' ಸಿನಿಮಾದಿಂದ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಎಸ್ಟಾಬ್ಲಿಶ್ ಆಗಿದೆ. ಹೀಗಾಗಿ ಹುಲಿ ವೇಷದ ಸಂಗೀತದ ಬೇರೆ ಆವೃತ್ತಿ ಮಾಡಲು ಹೋಗಿಲ್ಲ.

ಲೋಕಲ್ ಸಿನಿಮಾದಲ್ಲಿ ಇಂಟರ್ ನ್ಯಾಷನಲ್ ಹಿಪ್ ಹಾಪ್ ಹಾಡಿನ ಥರವೇ ಇರುವ ಡೀಮನ್ ಇನ್ ಮಿ (Demon in me) ಹಾಡು ಸ್ಥಾನ ಪಡೆದುಕೊಂಡಿದ್ದು ಹೇಗೆ?

ಸಿನಿಮಾದ ಫರ್ಸ್ಟ್ ಕಟ್ ಸಿದ್ಧವಾದ ಸಮಯದಲ್ಲಿ ಒಂದು ಐಫೋನ್ ಜಾಹೀರಾತು ಆಗ ತಾನೇ ಬಿಡುಗಡೆಯಾಗಿತ್ತು. ಅದರಲ್ಲಿ ದೃಶ್ಯಾವಳಿಗೂ ಸಂಗೀತಕ್ಕೂ ತಾಳಮೇಳವೇ ಇರಲಿಲ್ಲ. ಎರಡೂ ತದ್ವಿರುದ್ಧವಾಗಿತ್ತು. ಆ ಕಾಂಟ್ರಾಸ್ಟ್, ವೈರುಧ್ಯ ರಾಜ್ ಶೆಟ್ಟಿಯವರನ್ನು ಸೆಳೆದಿತ್ತು. ತಮ್ಮ ಸಿನಿಮಾಗೂ ಕಾಂಟ್ರಾಸ್ಟ್ ಮಾದರಿಯ ಹಾಡೊಂದು ಬೇಕು ಎಂದು ಅವರಿಗೆ ಅನ್ನಿಸಿತು. ಅದನ್ನು ನನ್ನೊಡನೆ ಹಂಚಿಕೊಂಡರು. ಆಗ ಇಂಗ್ಲಿಷಿನಲ್ಲಿ, ಸಿನಿಮಾ ನೇಟಿವಿಟಿಗೆ ಸಂಬಂಧವೇ ಇಲ್ಲದಂತೆ ಹಾಡು ಸೃಷ್ಟಿಸುವ ಕೆಲಸ ಶುರುವಾಗಿದ್ದು. ಮಾನೆಕ್ ಡಿಸಿಲ್ವ ಅದಕ್ಕೆ ಇಂಗ್ಲಿಷ್ ಲಿರಿಕ್ಸ್ ಬರೆದರು. ಗಾಯಕಿಯರಾದ ಅಂಜಲಿ ಶಂಕರನ್ ಮತ್ತು ರಕ್ಷಿತಾ ರಾವ್ ದನಿಯಲ್ಲಿ ಅದನ್ನು ಹಾಡಿಸಿದೆ. ಡೀಮನ್ ಇನ್ ಮಿ ಹಾಡು ಪ್ರತ್ಯೇಕ ಅಸ್ತಿತ್ವ ಕಂಡುಕೊಳ್ಳುವಂತಿದ್ದರೂ ಗರುಡ ಗಮನ ವೃಷಭ ವಾಹನ ಸಿನಿಮಾ ಚೌಕಟ್ಟನ್ನು ವಿಸ್ತರಿಸುವಲ್ಲಿ ಸಹಾಯ ಮಾಡಿದೆ ಎಂದಂತೂ ಹೇಳಬಲ್ಲೆ. 

ಡೀಮನ್ ಇನ್ ಮಿ ಹಾಡಿನ ಕೊನೆಯಲ್ಲಿ ಗ್ಲಾಸ್ ಬ್ರೇಕ್ ಆಗುವ ಸದ್ದು ಕೇಳಿ ಬರುತ್ತದೆ. ಅದರ ಅರ್ಥ ಗಾಜಿನ ಬಾಟಲಿಯೊಳಗೆ ಟ್ರ್ಯಾಪ್ ಆಗಿದ್ದ ಆತ್ಮ ಬಾಟಲಿಯೊಡೆದು ಹೊರಬರುವಂತೆ ಒಳಗಿದ್ದ ರಾಕ್ಷಸ ಬಿಡುಗಡೆಯಾದ ಎಂದೇ?

(ನಗು) ನೀವು ತುಂಬಾ ಕ್ರಿಯೇಟಿವ್ ಹಾಗೂ ಅತ್ಯದ್ಭುತವಾದ ವಿವರಣೆ ಕೊಟ್ಟಿದ್ದೀರಾ. ಆಕ್ಚುವಲಿ ಸಿನಿಮಾದ ದೃಶ್ಯವೊಂದರಲ್ಲಿ ಗಾಜು ಒಡೆಯುವ ದೃಶ್ಯ ಬರುತ್ತದೆ. ಆ ಸದ್ದು ನನಗೆ ತುಂಬಾ ಇಷ್ಟವಾಗಿತ್ತು. ಗಾಜು ಒಡೆಯುವ ಸದ್ದಿನಲ್ಲಿ ಮನುಷ್ಯನನ್ನು ಕಲಕುವಂಥದ್ದೇನೋ ಇದೆ ಎನ್ನುವುದು ನನ್ನ ಭಾವನೆ. ಆ ಭಾವನೆ, ಡೀಮನ್ ಇನ್ ಮಿ ಹಾಡಿಗೆ ಕನೆಕ್ಟ್ ಆಗುತ್ತಿದ್ದುದರಿಂದ ಆ ಸದ್ದನ್ನು ಹಾಡಿನ ಅಂತ್ಯದಲ್ಲಿ ಬಳಸಿಕೊಂಡೆ. ಪ್ರತಿಯೊಬ್ಬರೂ ತಮ್ಮದೇ ಆದ ವಿವರಣೆ ಕೊಟ್ಟುಕೊಳ್ಳಬಲ್ಲರು. ಆಗಲೇ ನಮ್ಮ ಕೆಲಸ ಪರಿಧಿ ದಾಟುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com