ಸಂಸ್ಮರಣೆ: ಭಾರತೀಯ ಸಿನೆಮಾಗಳಿಗೆ ನಾಂದಿ ಹಾಡಿದ ದಾದಾಸಾಹೇಬ್ ಫಾಲ್ಕೆ
ಭಾರತೀಯ ಚಿತ್ರರಂಗದ ಆರಂಭಿಕ ಕತೃ ಎಂದೇ ದಾದಾಸಾಹೇಬ್ ಫಾಲ್ಕೆ ಕರೆಯಲ್ಪಡುತ್ತಾರೆ. ಇಂದು ಅವರ ಸಂಸ್ಮರಣಾ ದಿನ ( ಏಪ್ರಿಲ್ 30, 1870 ರಿಂದ ಫೆಬ್ರವರಿ 16, 1944) ಅವರ ಪೂರ್ಣ ಹೆಸರು ಧುಂಡಿರಾಜ್ ಗೋವಿಂದ್ ಫಾಲ್ಕೆ. ಮೂಲತಃ ಮಹಾರಾಷ್ಟ್ರದ ನಾಸಿಕ್ ನವರು.
Published: 16th February 2022 03:51 PM | Last Updated: 16th February 2022 04:08 PM | A+A A-

ದಾದಾಸಾಹೇಬ್ ಫಾಲ್ಕೆ
ಭಾರತೀಯ ಚಿತ್ರರಂಗದ ಆರಂಭಿಕ ಕತೃ ಎಂದೇ ದಾದಾಸಾಹೇಬ್ ಫಾಲ್ಕೆ ಕರೆಯಲ್ಪಡುತ್ತಾರೆ. ಇಂದು ಅವರ ಸಂಸ್ಮರಣಾ ದಿನ ( ಏಪ್ರಿಲ್ 30, 1870 ರಿಂದ ಫೆಬ್ರವರಿ 16, 1944) ಅವರ ಪೂರ್ಣ ಹೆಸರು ಧುಂಡಿರಾಜ್ ಗೋವಿಂದ್ ಫಾಲ್ಕೆ. ಮೂಲತಃ ಮಹಾರಾಷ್ಟ್ರದ ನಾಸಿಕ್ ನವರು.
ಶ್ರದ್ಧೆಗೆ ಮತ್ತೊಂದು ಹೆಸರೇ ದಾದಾ ಸಾಹೇಬ್ ಫಾಲ್ಕೆ ಎಂದರೆ ಅತಿಶಯೋಕ್ತಿಯಲ್ಲ. ಅವರು ಬಹು ಜನತನದಿಂದ ನಿರ್ಮಿಸಿದ ಚಿತ್ರ ಮುಂದೆ ಭಾರತದಲ್ಲಿ ಚಲನಚಿತ್ರಗಳ ಮಹೋನ್ನತ ಸರಣಿಗೆ ನಾಂದಿ ಹಾಡಿತು. ಬಾಲ್ಯದಲ್ಲಿಯೇ ಅವರಿಗೆ ಸೃಜನಶೀಲ ಕಲೆಗಳಲ್ಲಿ ಆಸಕ್ತಿ. ಬೆಳೆದಂತೆ ಆ ಆಸಕ್ತಿಯೂ ಹೆಮ್ಮರವಾಗಿ ಬೆಳೆಯಿತು. ಇದರಿಂದಲೇ ಮುಂದೆ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್, ಬಾಂಬೆ ಸೇರಿದರು. ಛಾಯಾಗ್ರಹಣ, ಲಿಥೋಗ್ರಫಿ, ಆರ್ಕಿಟೆಕ್ಚರ್ ಪ್ರಕಾರಗಳನ್ನು ಅಧ್ಯಯನ ಮಾಡಿದರು. ಭಾರತದಲ್ಲಿ ಸಾಂಪ್ರದಾಯಿಕ ನಾಟಕ ಪರಂಪರೆ ಬಹು ದೊಡ್ಡ ಹೆಸರು ಮಾಡಿದ್ದರೂ ಅವರು ಹವ್ಯಾಸಿ ನಾಟಕಗಳತ್ತ ಒಲವು ಬೆಳೆಸಿಕೊಂಡರು.
ವರ್ಣಚಿತ್ರಕಾರರಾಗಿ, ರಂಗಭೂಮಿಯ ವಿನ್ಯಾಸಕಾರರಾಗಿ ಮತ್ತು ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. ಪ್ರಸಿದ್ಧ ವರ್ಣಚಿತ್ರಕಾರ ರವಿವರ್ಮಾ ಅವರ ಲಿಥೋಗ್ರಫಿ ಮುದ್ರಣಾಲಯದಲ್ಲಿ ಕೆಲಸ ಮಾಡುವಾಗ, ಫಾಲ್ಕೆ ಅವರು ಹಿಂದೂ ದೇವರುಗಳ ವರ್ಮಾ ಅವರ ವರ್ಣಚಿತ್ರಗಳ ಸರಣಿಯಿಂದ ಗಮನಾರ್ಹವಾಗಿ ಪ್ರಭಾವಿತರಾದರು. ಇದು ಫಾಲ್ಕೆಯವರು ನಂತರ ಮಾಡಿದ ಪೌರಾಣಿಕ ಚಲನಚಿತ್ರಗಳಲ್ಲಿ ವಿವಿಧ ದೇವರು ಮತ್ತು ದೇವತೆಗಳ ಚಿತ್ರಣದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ದ ಲೈಫ್ ಆಫ್ ಕ್ರೈಸ್ಟ್(1910) ಎಂಬ ಮೂಕಿ ಚಲನಚಿತ್ರವನ್ನು ಫಾಲ್ಕೆಯವರು ವೀಕ್ಷಿಸಿದ್ದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು. ಈ ಸಿನೆಮಾದಿಂದ ಬಹು ಪ್ರಭಾವಿತರಾದ ಫಾಲ್ಕೆ ಅವರು ಭಾರತೀಯ ವಿಷಯಗಳನ್ನು ಪರದೆಯ ಮೇಲೆ ಚಲಿಸುವ ಚಿತ್ರಗಳಾಗಿ ತರಬೇಕೆಂದು ಕನಸು ಕಂಡರು. ಅವರು ಕನಸು ಕಾಣುತ್ತಾ ಕೂರಲಿಲ್ಲ. ಅದನ್ನು ನನಸಾಗಿ ಮಾಡುವತ್ತ ಶ್ರಮಿಸಿದರು.
ಬ್ರಿಟಿಷ್ ಚಲನಚಿತ್ರ ನಿರ್ಮಾಪಕ ಸೆಸಿಲ್ ಹೆಪ್ವರ್ತ್ ಅವರಿಂದ ಸಿನೆಮಾ ಕಲೆಯಲು ಕಲಿಯಲು 1912 ರಲ್ಲಿ ಲಂಡನ್ಗೆ ಹೋದರು. 1913 ರಲ್ಲಿ ಅವರು ಭಾರತದ ಮೊದಲ ಮೂಕಿ ಚಿತ್ರ, ರಾಜಾ ಹರಿಶ್ಚಂದ್ರ, ಲೋಕಾರ್ಪಣೆ ಮಾಡಿದರು. ಚಿತ್ರ, ಚಿತ್ರಕಥೆ, ನಿರ್ಮಾಣ, ನಿರ್ದೇಶನ ಮತ್ತು ವಿತರಣೆ ಜವಾಬ್ದಾರಿ ಹೊತ್ತುಕೊಂಡರು. ಎಲ್ಲ ವಿಭಾಗಗಳಲ್ಲಿ ಯಶಸ್ವಿಯೂ ಆದರು. ಈ ಸಿನೆಮಾ ಅಭೂತಪೂರ್ವ ಎನ್ನುವ ಯಶಸ್ಸು ಕಂಡಿತು.
ಭಾರತೀಯ ರಂಗಭೂಮಿಯಲ್ಲಿ ಪುರುಷರೇ ಮಹಿಳೆಯರ ಪಾತ್ರಗಳನ್ನು ವಹಿಸುತ್ತಿದ್ದರು (ಇಂದಿಗೂ ಈ ಪರಂಪರೆ ಮರೆಯಾಗಿಲ್ಲ) ನಟಿಸುವುದು ಸ್ತ್ರೀಯರಿಗೆ ತಕ್ಕುದ್ದಲ್ಲ ಎಂಬ ಭಾವನೆಯಿದ್ದ ಕಾಲಘಟ್ಟದಲ್ಲಿ ಫಾಲ್ಕೆ ಅವರು ತಾವು ನಿರ್ಮಿಸಿದ ಚಲನಚಿತ್ರ ಭಸ್ಮಾಸುರ ಮೋಹಿನಿ (1913) ಯಲ್ಲಿ ಮಹಿಳಾ ಕಲಾವಿದೆಗೆ ಅವಕಾಶ ನೀಡಿದರು. ಇದೊಂದು ಕ್ರಾಂತಿಕಾರಕ ನಿರ್ಧಾರವೇ ಆಗಿತ್ತು.
ಫಾಲ್ಕೆ ಅವರು ಹಲವಾರು ಪಾಲುದಾರರ ಸಹಾಯದಿಂದ 1917 ರಲ್ಲಿ ಹಿಂದೂಸ್ತಾನ್ ಫಿಲ್ಮ್ ಕಂಪನಿ ಸ್ಥಾಪಿಸಿದರು. ಚಲನಚಿತ್ರಗಳ ಸರಣೀಯನ್ನೇ ನಿರ್ಮಿಸಲು ಶುರು ಮಾಡಿದರು. ತಂತ್ರಜ್ಞರೂ ಆಗಿದ್ದ ಫಾಲ್ಕೆ ವಿಶೇಷ ಸಿನೆ ಪರಿಣಾಮಗಳ ಪ್ರಯೋಗಗಳನ್ನು ಮಾಡಿದರು. ಇವುಗಳು ಭಾರತೀಯ ಪ್ರೇಕ್ಷಕರನ್ನು ಮೋಡಿ ಮಾಡಿದವು.
ಯಶಸ್ವಿ ಚಲನಚಿತ್ರಗಳಾದ ಲಂಕಾ ದಹನ್ (1917), ಶ್ರೀ ಕೃಷ್ಣ ಜನ್ಮ (1918), ಸೈರಂದರಿ (1920), ಮತ್ತು ಶಕುಂತಲಾ (1920) ಇವುಗಳು ಟಾಕಿಚಿತ್ರಗಳಾಗಿ ತೆರೆಕಂಡವು. ಈ ನಂತರ ಫಾಲ್ಕೆ ಅವರ ಸಿನೆಮಾಗಳಿಗೆ ಬೇಡಿಕೆ ಇಲ್ಲವಾಯಿತು. 1930 ರ ದಶಕದಲ್ಲಿ ಚಲನಚಿತ್ರ ನಿರ್ಮಾಣ ತೊರೆದರು. ಏಕಾಂಗಿಯಾಗಿ, ದುಃಖಿತರಾಗಿ ಮತ್ತು ಅನಾರೋಗ್ಯದಿಂದ ನಿಧನರಾದರು.
ಭಾರತೀಯ ಚಿತ್ರರಂಗಕ್ಕೆ ಫಾಲ್ಕೆಯವರ ಕೊಡುಗೆಯನ್ನು ಗುರುತಿಸಿ, ಭಾರತ ಸರ್ಕಾರ 1969 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ಥಾಪಿಸಿತು. ಭಾರತೀಯ ಚಿತ್ರರಂಗಕ್ಕೆ ನೀಡಿದ ಜೀವಮಾನದ ಕೊಡುಗೆಗಾಗಿ ಇದನ್ನು ಪ್ರತಿವರ್ಷ ಆಯ್ದ ಓರ್ವಸಾಧಕರಿಗೆ ನೀಡಲಾಗುತ್ತದೆ.