social_icon

ಪುಷ್ಪ ಸಿನಿಮಾಗಿಂತ ಕೆಜಿಎಫ್ ಯಾಕೆ ಬೆಸ್ಟು: 10 ಕಾರಣಗಳು

ಪುಷ್ಪಾ ಸಿನಿಮಾ, 10 ಕೆಜಿಎಫ್ ಸಿನಿಮಾಗಳಿಗೆ ಸಮ ಎನ್ನುವ ಮಾತು ತೆಲುಗು ನಿರ್ದೇಶಕರೊಬ್ಬರಿಂದ ಬಂದಿತ್ತು. ಇದೀಗ ಮೊದಲ ವಾರದ ಗಳಿಕೆಯಲ್ಲಿ ಪುಷ್ಪ ಸಿನಿಮಾ ಕೆಜಿಎಫ್ ಸಿನಿಮಾವನ್ನು ಮೀರಿಸಿದೆ ಎನ್ನುವ ವರದಿಗಳು ಪ್ರಕಟಗೊಳ್ಳುತ್ತಿವೆ. ಆದರೆ ಸಿನಿಮಾ ಎನ್ನುವುದು ಕಲೆಕ್ಷನ್ನಿಗೂ ಮಿಗಿಲಾದ ಎಮೋಷನ್ನು. 

Published: 14th January 2022 07:09 PM  |   Last Updated: 14th January 2022 07:12 PM   |  A+A-


ಸಾಂದರ್ಭಿಕ ಚಿತ್ರ

Posted By : Harshavardhan M
Source : Online Desk

ನಿರ್ಮಾಣ ಹಂತದಿಂದಲೂ ಸುಕುಮಾರ್ ನಿರ್ದೇಶನದ ತೆಲುಗು ಸಿನಿಮಾ ಪುಷ್ಪ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ ಜೊತೆ ಹೋಲಿಕೆಗಳು ನಡೆಯುತ್ತಿವೆ. ಎರಡೂ ಸಿನಿಮಾಗಳು ಎರಡು ಭಾಗವನ್ನು ಹೊಂದಿರುವ ಸಿನಿಮಾಗಳು. ಪುಷ್ಪಾ ಸಿನಿಮಾ, 10 ಕೆಜಿಎಫ್ ಸಿನಿಮಾಗಳಿಗೆ ಸಮ ಎನ್ನುವ ಮಾತು ತೆಲುಗು ನಿರ್ದೇಶಕರೊಬ್ಬರಿಂದ ಬಂದಿತ್ತು. ಇದೀಗ ಮೊದಲ ವಾರದ ಗಳಿಕೆಯಲ್ಲಿ ಪುಷ್ಪ ಸಿನಿಮಾ ಕೆಜಿಎಫ್ ಸಿನಿಮಾವನ್ನು ಮೀರಿಸಿದೆ ಎನ್ನುವ ವರದಿಗಳು ಪ್ರಕಟಗೊಳ್ಳುತ್ತಿವೆ. ಆದರೆ ಸಿನಿಮಾ ಎನ್ನುವುದು ಕಲೆಕ್ಷನ್ನಿಗೂ ಮಿಗಿಲಾದ ಒಂದು ಎಮೋಷನ್ನು. ಪುಷ್ಪಾ ಸಿನಿಮಾವನ್ನು ಮೀರಿಸುವ ಕೆಜಿಎಫ್ ಸಿನಿಮಾದ ಹತ್ತು ಅಂಶಗಳನ್ನು ಇಲ್ಲಿ ನೀಡಿದ್ದೇವೆ.

1. ಬಿಗ್ ಕ್ಯಾನ್ವಾಸ್

ಕೆಜಿಎಫ್ ಸಿನಿಮಾ ನಿಜಾರ್ಥದಲ್ಲಿ ದೊಡ್ಡ ಕ್ಯಾನ್ವಾಸ್ ಸಿನಿಮಾ. ಪಾತ್ರವರ್ಗದ ಸಂಖ್ಯೆ ಮಾತ್ರವಲ್ಲದೆ ಲೊಕೇಶನ್ನುಗಳು ಬಿಗ್ ಕ್ಯಾನ್ವಾಸ್ ಸಿನಿಮಾದ ಅನುಭವ ನೀಡುತ್ತದೆ. ಪುಷ್ಪ ಸಿನಿಮಾ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ರಕ್ತಚಂದನ ಕಳ್ಳಸಾಗಣೆ ಕಥೆಯನ್ನು ಹೊಂದಿರುವ ಕಾರಣಕ್ಕೋ ಏನೋ ಬಿಗ್ ಕ್ಯಾನ್ವಾಸ್ ಅನುಭವ ನೀಡುವುದಿಲ್ಲ.  


2. ಬ್ಯಾಕ್ ಗ್ರೌಂಡ್ ಸ್ಕೋರ್ 

ಕೆಜಿಎಫ್ ಸಿನಿಮಾದ ಯಶಸ್ಸಿನಲ್ಲಿ, ಆ ಸಿನಿಮಾ ಕಟ್ಟಿಕೊಟ್ಟ ಅನುಭವದಲ್ಲಿ ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತದ ಪಾಲು ಮಹತ್ತರವಾದುದು. ಮೈನವಿರೇಳಿಸುವ ಎಪಿಕ್ ಪ್ರಕಾರದ ಸಂಗೀತವನ್ನು ಕೆ.ಜಿ.ಎಫ್ ಸಿನಿಮಾ ಹೊಂದಿದೆ. ಸ್ಟಾರ್ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ನೀಡಿರುವ ಪುಷ್ಪಾ ಸಿನಿಮಾದ ಹಾಡುಗಳು ಗಮನ ಸೆಳೆಯುವಂತಿದ್ದರೂ ಪ್ರೇಕ್ಷಕನನ್ನು ಸಿನಿಮಾದ ಗುಂಗಿನಲ್ಲಿ ಇರಿಸುವಲ್ಲಿ ಸೋಲುತ್ತದೆ. ತಾಯಿ ಸೆಂಟಿಮೆಂಟ್ ಇರಬಹುದು, ಮನದೆನ್ನೆಯ ಸಾಂಗತ್ಯ ಇರಬಹುದು, ರೊಚ್ಚಿಗೇಳುವ ಕ್ಷಣದಲ್ಲೇ ಆಗಿರಬಹುದು ದೃಶ್ಯದ ಭಾವನೆಗೆ ತಕ್ಕಂತೆ ಕೆಜಿಎಫ್ ರವಿ ಬಸ್ರೂರ್ ಸಂಗೀತ ಮನಮಿಡಿಯುವಂತಿದೆ.

3. ಕಾರ್ಟೂನ್ ಮುನ್ನುಡಿ

ಯಾವುದೇ ಬೆಸ್ಟ್ ಸಿನಿಮಾದ ಆರಂಭಕ್ಕೆ ಸಿನಿಮಾದ ಪ್ರಾರಂಭಿಕ ದೃಶ್ಯಗಳು ಮುನ್ನುಡಿ ಬರೆಯುತ್ತವೆ. ಪುಷ್ಪ ಸಿನಿಮಾದಲ್ಲಿ ಸಿನಿಮಾದ ಕಾಂಟೆಕ್ಸ್ಟ್, ಕಥೆ ನಡೆಯುವ ಹಿನ್ನೆಲೆ ಪರಿಸರವನ್ನು ಪ್ರೇಕ್ಷಕರಿಗೆ ತಿಳಿಸಲು ಕಾರ್ಟೂನಿನ ಮೊರೆ ಹೋಗಿದೆ. ಗಂಭೀರ ಕಥೆಯನ್ನು ಆಸ್ವಾದಿಸಲು ಕಾತರರಾಗಿರುವ ಪ್ರೇಕ್ಷಕರಿಗೆ ಈ ಬಗೆಯ ಓಪನಿಂಗ್ ಇಷ್ಟವಾಗುವುದು ಅನುಮಾನ. ಸಿನಿಮಾದ ಸೀರಿಯಸ್ ನೆಸ್ ಅನ್ನು ಪುಷ್ಪ ಸಿನಿಮಾದ ಆರಂಭಿಕ ಕಾರ್ಟೂನ್ ದೃಶ್ಯಾವಳಿ ಪೇಲವಗೊಳಿಸುತ್ತದೆ.  

4. ಡಯಲಾಗ್ ದರ್ಬಾರ್

ಕೆಜಿಎಫ್ ಸಿನಿಮಾದಲ್ಲಿನ ಡಯಲಾಗುಗಳು ಸರಳವಾಗಿದ್ದರೂ ಎದುರಾಳಿಗೆ ಮುಟ್ಟಿ ನೋಡಿಕೊಳ್ಳುವಂಥ ಏಟು ಕೊಡುವಂತಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಕ್ಷಕರು ಸಿನಿಮಾ ಮುಗಿದ ನಂತರವೂ ಗುನುಗುವಂತಿದ್ದವು. ಸಿನಿಮಾದುದ್ದಕ್ಕೂ ಪಂಚಿಂಗ್ ಡಯಲಾಗುಗಳನ್ನು ಕೆಜಿಎಫ್ ಹೊಂದಿತ್ತು. ಪುಷ್ಪಾದಲ್ಲಿ ಪಂಚಿಂಗ್ ಡಯಲಾಗು ಇಲ್ಲವೆಂದಿಲ್ಲ, ಪುಷ್ಪಾ ಅಂದರೆ ಫ್ಲವರ್ ಅಲ್ಲ, ಫಯರು ಸೇರಿದಂತೆ ಬೆರಳೆಣಿಕೆಯಷ್ಟು ಡಯಲಾಗುಗಳು ಇದ್ದರೂ ಅವುಗಳಿಗೆ ಚಿತ್ರಮಂದಿರಗಳಲ್ಲಿ ಕೇಳಿ ಬರುವ ವಿಷಲ್ಲುಗಳ ಪ್ರಮಾಣ ಕಡಿಮೆಯೇ.  

5. ಅಶ್ಲೀಲತೆಯ ಟಚ್

ಕೆಜಿಎಫ್ ಸಿನಿಮಾಗೆ ಅಶ್ಲೀಲತೆಯ ನೆರಳು ಸೋಕಿಲ್ಲ. ಸಿನಿಮಾದ ಕಥಾನಾಯಕಿ ಬೋಲ್ಡ್ ಅಂಡ್ ಬ್ಯೂಟಿಫುಲ್. ಪೊಗರು ತೋರಿಸುವಾಗಲೂ, ನಾಯಕನ ಪ್ರಭಾವಳಿಗೆ ಒಳಗಾಗಿ ಅವನ ಪ್ರೇಮಪಾಶಕ್ಕೆ ಬೀಳುವಾಗಲೂ ನಿಧಿ ಶೆಟ್ಟಿ ಅಭಿನಯ ಕೃತಕ ಎನಿಸುವುದಿಲ್ಲ. ನಾಯಕಿಯನ್ನು ವೈಭವೀಕರಿಸಲು ಅಶ್ಲೀಲತೆಯ ಮೊರೆ ಹೋಗದೇ ಇರುವುದು ಕೆಜಿಎಫ್ ಹೆಗ್ಗಳಿಕೆ. 

ಸಿಂಪಲ್ಲಾಗೊಂದ್ ಲವ್ ಸ್ಟೋರಿ ಸಿನಿಮಾದಲ್ಲಿ ಕೈಬಿಡುವುದಕ್ಕೆ ಸಂಬಂಧಿಸಿದಂತೆ ಡಬಲ್ ಮೀನಿಂಗ್ ಸಂಭಾಷಣೆ ಇದ್ದಿದ್ದು, ಆಗಿನ ಸಮಯದಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಆ ಸಂಭಾಷಣೆಯ ದೃಶ್ಯರೂಪವನ್ನು ಪುಷ್ಪ ಸಿನಿಮಾದಲ್ಲಿ ತೋರಿಸಲಾಗಿದೆ. ಅದೆಷ್ಟು ಸಹನೀಯ ಎನ್ನುವುದು ಪ್ರೇಕ್ಷಕರಿಗೆ ಬಿಟ್ಟ ವಿಚಾರ. ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರ ಪಾತ್ರ ಈ ಬಗೆಯ 'ತೋರಿಕೆ'ಗಾಗಿಯೇ ಮೀಸಲು ಎನ್ನುವ ಅನುಮಾನ ಬರುವುದಕ್ಕೆ ಹಲವು ದೃಶ್ಯಗಳು ಸಾಕ್ಷ್ಯ ನುಡಿಯುತ್ತವೆ.

6. ಅತ್ಯದ್ಭುತ ಟ್ರೇಲರ್

ಯಾವುದೇ ಯಶಸ್ವಿ ಸಿನಿಮಾದ ಪಯಣ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಪ್ರಾರಂಭವಾಗುವುದಿಲ್ಲ. ಸಿನಿಮಾದ ಟ್ರೇಲರ್ ಲಾಂಚ್ ಆದ ದಿನದಿಂದಲೇ ಪ್ರಾರಂಭವಾಗುತ್ತದೆ. ಈ ಮಾತು ಕೆಜಿಎಫ್ ಸಿನಿಮಾಗೆ ಬಹಳ ಚೆನ್ನಾಗಿ ಅನ್ವಯಿಸುತ್ತದೆ. ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ದೇಶಾದ್ಯಂತ ಸೃಷ್ಟಿಯಾದ ಅದರ ಹವಾ ಯಾರೂ ಮರೆಯುವಂತಿಲ್ಲ. ಕೆಜಿಎಫ್ ಸಿನಿಮಾ ಟ್ರೇಲರ್ ಕುರಿತಾಗಿ ದೇಶ ವಿದೇಶಗಳ ಅಸಂಖ್ಯ ಯೂಟ್ಯೂಬ್ ರಿಯಾಕ್ಷನ್ ಚಾನಲ್ಲುಗಳು ಪ್ರತಿಕ್ರಿಯೆ ನೀಡಿದ್ದವು. ಆ ಮಟ್ಟಿನ ಬಝ್ ಅನ್ನು ಪುಷ್ಪಾ ಟ್ರೇಲರ್ ಕೂಡಾ ಸೃಷ್ಟಿಸಿರಲಿಲ್ಲ.

7. ಕ್ಲೈಮ್ಯಾಕ್ಸ್ ಹುಕ್

ಬಾಹುಬಲಿ ಸಿನಿಮಾದ ಮೊದಲ ಭಾಗ ಬಿಡುಗಡೆಯಾದಾಗ ಅದು ಸೃಷ್ಟಿಸಿದ  ಕುತೂಹಲ ಅಷ್ಟಿಷ್ಟಲ್ಲ. ಜೀವ ಕೊಟ್ಟು ಕಾಪಾಡಬೇಕಾಗಿದ್ದ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎನ್ನುವ ಹುಕ್ ಸಿನಿಮಾಸಕ್ತರನ್ನು ಕಾಡಿತ್ತು. ಸಿನಿಮಾದ ಎರಡನೇ ಭಾಗ ಬಿಡುಗಡೆಯಾಗುವವರೆಗೆ ಆ ಹುಕ್ ಸಿನಿಮಾಸಕ್ತರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಅಂಥದ್ದೇ ಕುತೂಹಲವನ್ನು ಕೆಜಿಎಫ್ ಸಿನಿಮಾದ ಮೊದಲ ಭಾಗದ ಕ್ಲೈಮ್ಯಾಕ್ಸ್ನ್ ಹೊಂದಿದೆ. ಗುರಿ ಸಾಧನೆಗೆ ರಾಕ್ಷಸರ ಕೋಟೆ ಒಳಹೊಕ್ಕಿರುವ ನಾಯಕ ತನ್ನ ಕಾರ್ಯದಲ್ಲಿ ಯಶಸ್ವಿಯಾಗುವನೇ, ಎದುರಾಳಿಗಳನ್ನು ಬಗ್ಗು ಬಡಿಯುವನೇ ಎನ್ನುವ ಕುತೂಹಲ ಕೆಜಿಎಫ್ ಸಿನಿಮಾ ನೋಡಿದವರ ತಲೆಯಲ್ಲಿ ಜೀವಂತವಾಗಿದೆ.  

8. ವಿಲನ್ನುಗಳೆಂಬ ಹೀರೋಗಳು

ರಾಕ್ಷಸ ಕುಲವೇ ತುಂಬಿರುವ ಕೆಜಿಎಫ್ ನ ಕೋಟೆ ಕೊತ್ತಲದಲ್ಲಿರುವ ಖೂಳರು, ಖದೀಮರು ಒಮ್ಮೆ ಎದೆಯಲ್ಲಿ ಭೀತಿ ಹುಟ್ಟಿಸುತ್ತಾರೆ. ಕೇಡಿತನದಲ್ಲಿ ಒಬ್ಬರನ್ನು ಒಬ್ಬರು ಮೀರಿಸಬಲ್ಲರು. ಅದರಲ್ಲೂ ಮೊದಲ ಭಾಗದ ಮುಖ್ಯ ವಿಲನ್ ಗರುಡ ಎಲ್ಲಾ ವಿಧಗಳಲ್ಲಿ ರಾಕಿಯನ್ನು ಮೀರಿಸುವಂತೆ ತೋರಿಸಲ್ಪಟ್ಟಿದ್ದರು. ಅಷ್ಟೊಂದು ಶಕ್ತಿಶಾಲಿಯಾದ ವಿಲನ್ ಅನ್ನು ಹೊಡೆದುಹಾಕುವುದು ಸಾಧ್ಯವೇ ಇಲ್ಲ ಎನ್ನುವಂತೆ ಸಿನಿಮಾದಲ್ಲಿ ಬಿಂಬಿಸಲಾಗಿತ್ತು. ವಿಲನ್ನುಗಳು ಎಷ್ಟು ಶಕ್ತಿಶಾಲಿಯಾಗಿರುತ್ತಾರೋ ಸಿನಿಮಾ ಅಷ್ಟೇ ಎತ್ತರಕ್ಕೆ ಹೋಗುತ್ತದೆ. ಆ ಲೆಕ್ಕದಲ್ಲಿ ಕೆಜಿಎಫ್ ವಿಲನ್ನುಗಳು ಪ್ರೇಕ್ಷಕರನ್ನು ಸಿನಿಮಾದ ಚೌಕಟ್ಟಿನಿಂದ ಅತ್ತಿತ್ತ ಸುಳಿದಾಡಲು ಬಿಡಲೊಲ್ಲರು. 

9. ಸ್ಟೈಲಿಶ್ ಕಥಾ ನಾಯಕ

ಸ್ಟೈಲಿಶ್ ಸ್ಟಾರ್ ಎಂದೇ ಹೆಸರಾದ ಅಲ್ಲು ಅರ್ಜುನ್ ಕೂಡಾ ನಾಚುವಷ್ಟು ಸ್ಟೈಲಿಶ್ ಆಗಿ ಯಶ್ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮದೇ ಮ್ಯಾನರಿಸಂ ಮತ್ತು ಡಯಲಾಗ್ ಡೆಲಿವರಿ ಶೈಲಿಯಿಂದ ಯಶ್ ಮಾಸ್ ಆಡಿಯೆನ್ಸ್ ಹೃದಯಕೋಟೆಗೆ ಲಗ್ಗೆಯಿಡುತ್ತಾರೆ. ಪುಷ್ಪಾ ಸಿನಿಮಾದ ಕಥಾ ನಾಯಕ ಗ್ರಾಮೀಣ ಭಾಗದ ಕಳ್ಳಸಾಗಣೆದಾರನಾಗಿರುವುದರಿಂದ ಆತನನ್ನು ಹೆಚ್ಚು ಸ್ಟೈಲಿಶ್ ಆಗಿ ತೋರಿಸುವುದು ಕೃತಕವಾಗುತ್ತದೆ. ಆ ಕಾರಣಕ್ಕೋ ಏನೋ ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಎಂದಿನ ಸ್ಟೈಲಿಶ್ ಚಾರ್ಮ್ ಕಾಣಸಿಗುವುದಿಲ್ಲ.   

10. ಪ್ಯಾನ್ ಇಂಡಿಯಾ ವಾರ್

ಇತ್ತೀಚಿಗಷ್ಟೆ ಬಾಹುಬಲಿ ನಿರ್ದೇಶಕ ರಾಜಮೌಳಿ 'ಎಲ್ಲಾ ಭಾಷೆಯ ಚಿತ್ರರಂಗಗಳಿಂದ ಕಲಾವಿದರನ್ನು ಹಾಕಿಕೊಂಡ ಮಾತ್ರಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಅಗೋದಿಲ್ಲ' ಎಂದು ಹೇಳಿದ್ದು ಈ ಸಂದರ್ಭದಲ್ಲಿ ಪ್ರಸ್ತುತ. ಪುಷ್ಪಾ ಸಿನಿಮಾದಲ್ಲಿ ವಿವಿಧ ಭಾಷೆಯ ಕಲಾವಿದರಿದ್ದಾರೆ ಎನ್ನುವುದು ಗಮನಾರ್ಹ.   

ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಲೇಬಲ್ ಪಟ್ಟಿ ಜನಪ್ರಿಯತೆ ಪಡೆದಿದ್ದು ಕೆಜಿಎಫ್ ಚಿತ್ರದಿಂದ ಎಂದು ಖಾತರಿಯಿಂದ ಹೇಳಬಹುದು. ಪ್ರೇಕ್ಷಕರ ಪಾಯಿಂಟ್ ಆಫ್ ವ್ಯೂನಿಂದ ಹೇಳುವುದಾದರೆ ಭಾರತದ ಯಾವುದೇ ರಾಜ್ಯದ ಸಿನಿಮಾ ಪ್ರೇಕ್ಷಕ ಕನೆಕ್ಟ್ ಮಾಡಿಕೊಳ್ಳಬಹುದಾದ ಅಂಶಗಳು ಕೆಜಿಎಫ್ ಸಿನಿಮಾದಲ್ಲಿ ಎನ್ನುವುದಂತೂ ನಿಜ. ಸಿನಿಮಾದ ಕಥಾ ನಾಯಕ ರಾಕಿ ಬೆಳೆಯುವುದು ಮುಂಬೈನಲ್ಲಿ, ಆತನಿಗೆ ಆಶ್ರಯ ನೀಡುವವನು ಒಬ್ಬ ಮುಸಲ್ಮಾನ ಚಾಚಾ. ಅಲ್ಲದೆ ಲೋಕಲ್ ನಲ್ಲಿ ಹೆಸರು ಮಾಡಿದ್ದ ರಾಕಿಗೆ ದೊಡ್ಡ ಡೀಲ್ ನೀಡುವವನು ಒಬ್ಬ ಕ್ರಿಶ್ಚಿಯನ್ ಗ್ಯಾಂಗ್ ಸ್ಟರ್. ರಾಕಿ ತನ್ನ ಗುರಿ ಸಾಧನೆಗೆ ಬಂದಿದ್ದರೂ ಆ ಹಾದಿಯಲ್ಲಿ ಅಸಹಾಯಕರ ಸಹಾಯಕ್ಕೆ ನಿಲ್ಲುತ್ತಾನೆ. ಹೀಗೆ ಅನೇಕ ವಿಧಗಳಲ್ಲಿ ಕೆಜಿಎಫ್, ಒಂದು ಪರ್ಫೆಕ್ಟ್ ಪ್ಯಾನ್ ಇಂಡಿಯಾ ಸಿನಿಮಾ. 


Stay up to date on all the latest ಸಿನಿಮಾ ಲೇಖನ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp