ಪ್ರಸಿದ್ದ ರಂಗಕರ್ಮಿ, ನಿರ್ದೇಶಕ ಟಿಎಸ್ ರಂಗಾ ಇನ್ನಿಲ್ಲ

ಹಿರಿಯ ನಿರ್ದೇಶಕ, ರಂಗಕರ್ಮಿ ಟಿ.ಎಸ್‌. ರಂಗಾ (69) ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ವಿಧಿವಶರಾಗಿದ್ದಾರೆ.
ಟಿಎಸ್ ರಂಗಾ
ಟಿಎಸ್ ರಂಗಾ
ಬೆಂಗಳೂರು: ಹಿರಿಯ ನಿರ್ದೇಶಕ, ರಂಗಕರ್ಮಿ ಟಿ.ಎಸ್‌. ರಂಗಾ (69) ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ವಿಧಿವಶರಾಗಿದ್ದಾರೆ.
ಕೆಲವು ಕಾಲದಿಂಡ ಅನಾರೋಗ್ಯಕ್ಕೆ ತುತ್ತಾಗಿದ್ದ ರಂಗಾ ಪತ್ನಿ, ಮಗಳು, ಅಳಿಯ ಸೇರಿ ಅಪಾರ ಶಿಷ್ಯರನ್ನು ಅಗಲಿದ್ದಾರೆ.
ರಂಗಭೂಮಿಯ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ರಂಗಾ ಬಿ.ವಿ.ಕಾರಂತ್‌ ಅವರಿಂದ ತರಬೇತಿ ಹೊಂದಿದ್ದರು. ಹಯವದನ, ಸತ್ತವರ ನೆರಳು, ಇನ್ನೂ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದ ರಂಗಾ ಪ್ರಯೋಗ ಎನ್ನುವ ಹೆಸರಲ್ಲಿ ತಮ್ಮದೇ ರಂಗತಂಡವನ್ನು ಮುನ್ನೆಡೆಸಿದ್ದರು.
‘ಗೀಜಗನ ಗೂಡು’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ರಂಗಾ ತಮ್ಮ ಪ್ರಥಮ ಚಿತ್ರದಲ್ಲಿಯೇ ಉತ್ತಮ ಹೆಸರು ಗಳಿಸಿದ್ದರು. ಉತ್ತರ ಕರ್ನಾಟಕದ ಕಥೆಯನ್ನಾಧರಿಸಿದ್ದ ಈ ಚಿತ್ರಭಾರತೀಯ ಪನೋರಮಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಮೊದಲ ಚಿತ್ರ ಎನ್ನುವ ಖ್ಯಾತಿ ಗಳಿಸಿತ್ತು.
ಮುಂದೆ ’ಸಾವಿತ್ರಿ' ಚಿತ್ರದ ಮುಖೇನ ಹಳ್ಳಿಗರ ಜೀವನ ಪದ್ದತಿಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದರು. 
ಕನ್ನಡ ಮಾತ್ರವಲ್ಲ ಹಿಂದಿಯಲ್ಲಿಯೂ ಚಿತ್ರ ತಯಾರಿಸಿದ್ದ ರಂಗಾ ಹಿಂದಿಯಲ್ಲಿ ‘ಗಿದ್ದ್‌’ ಚಿತ್ರವನ್ನು ನಿರ್ದೇಶಿಸಿದ್ದರು ಇದರಲ್ಲಿ ಬಾಲಿವುಡ್ ನ ಖ್ಯಾತ ನಟರಾದ  ಓಂ ಪುರಿ, ನಾನಾ ಪಾಟೇಕರ್‌, ಸ್ಮಿತಾ ಇನ್ನೂ ಮೊದಲಾದವರು ಅಭಿನಯಿಸಿದ್ದರು.
1982ರಲ್ಲಿ ಗದಗ ಸುತ್ತಮುತ್ತ ಪರಿಶಿಷ್ಟ ಜಾತಿ–ಪಂಗಡದವರ ಕುರಿತು ‘ನೊಂದವರ ಹಾಡು’ ಸಾಕ್ಯ್ಷಚಿತ್ರದ ಮೂಲಕ ಉಮಾಶ್ರೀ ಅವರನ್ನು ಮೊಟ್ಟ ಮೊದಲ ಬಾರಿಗೆ ಕ್ಯಾಮೆರಾ ಎದುರು ನಿಲ್ಲಿಸಿದ ಅಗ್ಗಳಿಕೆ ರಂಗಾ ಅವರದ್ದಾಗಿತ್ತು.
 ಟಿ.ಎಸ್‌.ನಾಗಾಭರಣ ನಿರ್ದೇಶನದ, 'ಗ್ರಹಣ’ (1978) ಚಿತ್ರದ ಚಿತ್ರಕಥೆಗಾಗಿ ರಂಗಾ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು. 
ನಿರ್ದೇಶಕ ನಾಗಾಭರಣ, ನಟರಾದ ಸುಂದರ್ ರಾಜ್ ಸೇರಿ ಹಲವು ಗಣ್ಯರು ನಿಧನರಾದ ರಂಗಾ ಅವರ ಅಂತಿಮ ದರ್ಶನ ಪಡೆದರು.ಭಾನುವಾರ ಸಂಜೆ ರಂಗಾ ಅವರ ಅಂತ್ಯ ಸಂಸ್ಕಾರ ಸಹ ಜರುಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com