ಶಾಕಿಂಗ್ ನ್ಯೂಸ್: ಸಾವಿರ ಕೋಟಿ ರೂ ಬಜೆಟ್, ಬಹು ನಿರೀಕ್ಷಿತ 'ಮಹಾಭಾರತ' ಚಿತ್ರ ಸ್ಥಗಿತ

ತನ್ನ ಬಜೆಟ್ ಮೂಲಕವೇ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರ 'ಮಹಾಭಾರತ' ಚಿತ್ರ ಸ್ಥಗಿತವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಚ್ಚಿ: ತನ್ನ ಬಜೆಟ್ ಮೂಲಕವೇ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರ 'ಮಹಾಭಾರತ' ಚಿತ್ರ ಸ್ಥಗಿತವಾಗಿದೆ.
ಹೌದು.. ಅಘಾತವಾದರೂ ಇದು ನಿಜ.. ಕರ್ನಾಟಕ ಮೂಲದ ಖ್ಯಾತ ಉದ್ಯಮಿ ಬಿಆರ್ ಶೆಟ್ಟಿ ನಿರ್ಮಾಣದ ಹೊಣೆ ಹೊತ್ತಿದ್ದ ಬಿಗ್ ಬಜೆಟ್ ಚಿತ್ರ 'ಮಹಾಭಾರತ'ಸ್ಥಗಿತಗೊಂಡಿದೆ. ತೆಲುಗಿನ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಬಾಹುಬಲಿ ಸಕ್ಸಸ್ ಬಳಿಕ ತಾವು ಮಹಾಭಾರತ ಚಿತ್ರ ನಿರ್ದೇಶನ ಮಾಡುವ ಆಸೆ ವ್ಯಕ್ತಪಡಿಸಿದ್ದರು. ಇಂತಹುದೇ ಬೃಹತ್ ಕನಸಿನೊಂದಿಗೆ ಮಲಯಾಳಂನಲ್ಲಿ ಸೂಪರ್ ಸ್ಚಾರ್ ಮೋಹನ್ ಲಾಲ್ ಮತ್ತು ಖ್ಯಾತ ನಿರ್ದೇಶಕ ಶ್ರೀಕುಮಾರ್​ ಮೆನನ್ ಜೋಡಿ ಮಹಾಭಾರತ ಚಿತ್ರ ನಿರ್ಮಾಣಕ್ಕೆ ಮುಂದಾಗಿತ್ತು. ಈ ಚಿತ್ರ ತನ್ನ ಬಜೆಟ್ ಮೂಲಕವೇ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿತ್ತು.
ಈ ಚಿತ್ರಕ್ಕೆ ಖ್ಯಾತ ಉದ್ಯಮಿ ಬಿಆರ್ ಶೆಟ್ಟಿ ನಿರ್ಮಾಣದ ಹೊಣೆ ಹೊರುವ ಮೂಲಕ ಚಿತ್ರಕ್ಕೆ ಕನ್ನಡದ ನಂಟು ಬೆಸೆದುಕೊಂಡಿತು. ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ಈ ಚಿತ್ರವನ್ನುತೆರೆಗೆ ತರುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು.  ಈ ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಚಾರ್ ನಟ ಮೋಹನ್​ಲಾಲ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದು, ಶ್ರೀಕುಮಾರ್​ ಮೆನನ್​ ಈ ಚಿತ್ರದ ನಿರ್ದೇಶನ ಮಾಡಲಿದ್ದಾರೆ ಎಂದೂ ಹೇಳಲಾಗುತ್ತಿತ್ತು. ಜ್ಞಾನಪೀಠ ಪ್ರಶಸ್ತಿ ವಿಜೇತ ವಾಸುದೇವ ನಾಯರ್​ ಅವರ 'ರಂಡಮೂಲ' ಎಂಬ ಕಾದಂಬರಿ ಆಧಾರಿಸಿ, ಈ ಸಿನಿಮಾ ಮಾಡಲು ನಿರ್ಧರಿಸಲಾಗಿತ್ತು.
ಈ ಸಿನಿಮಾ ಚಿತ್ರೀಕರಣದ ಆರಂಭದಲ್ಲೇ ಚಿತ್ರದ ನಿರ್ದೇಶಕ ಶ್ರೀಕುಮಾರ್​ ಮೆನನ್​ ಹಾಗೂ ಕಾದಂಬರಿಕಾರ ವಾಸುದೇವ ನಾಯರ್​ ಅವರ ನಡುವೆ ಭಿನ್ನಾಭಿಪ್ರಾಯ ಬಂದ ಕಾರಣದಿಂದಾಗಿ ಈ ಸಿನಿಮಾ ಚಿತ್ರೀಕರಣವನ್ನು ನಿಲ್ಲಿಸುತ್ತಿರುವುದಾಗಿ ನಿರ್ಮಾಪಕ ಬಿ.ಆರ್. ಶೆಟ್ಟಿ ಹೇಳಿದ್ದಾರೆ. ​ಚಿತ್ರಕಥೆ ಮತ್ತು ಮೂಲಕಥೆಗೆ ಸಂಬಂಧಿಸಿದಂತೆ ನಿರ್ದೇಶಕ ಶ್ರೀಕುಮಾರ್​ ಮೆನನ್​ ಹಾಗೂ ಕಾದಂಬರಿಕಾರ ವಾಸುದೇವ ನಾಯರ್ ನಡುವೆ ಭಿನ್ನಾಭಿಪ್ರಾಯ ಮನೆ ಮಾಡಿದ್ದು, ಇದೇ ಕಾರಣಕ್ಕೆ ಕಥೆಗಾರ ವಾಸುದೇವ ನಾಯರ್ ಚಿತ್ರದಿಂದ ಹೊರಬಂದಿದ್ದಾರೆ.
ಹೀಗಾಗಿ ಚಿತ್ರಕಾರ್ಯಗಳು ಸ್ಥಗಿತಗೊಂಡಿದ್ದು, ಸದ್ಯ ಈ ಸಿನಿಮಾಗಾಗಿ ಮತ್ತೊಬ್ಬ ಕಥೆಗಾರರಿಗಾಗಿ ಹುಟುಕಾಟ ನಡೆಯುತ್ತಿದೆ. ಕಥೆಗಾರರು ಸಿಕ್ಕ ಕೂಡಲೇ ಮತ್ತೆ ಚಿತ್ರೀಕರಣ ಆರಂಭವಾಗಲಿದೆ ಎಂದು ಬಿಆರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ದೇಶದಲ್ಲೇ ಹೆಸರು ಮಾಡಿರುವ ನಟರನ್ನು ಮೇರು ನಟರನ್ನು ಈ ಸಿನಿಮಾದಲ್ಲಿ ಅಭಿನಯಿಸುವಂತೆ ಕೋರಲಾಗಿದ್ದು, ಅದಕ್ಕಾಗಿ ಅಗತ್ಯ ಕೆಲಸಗಳನ್ನು ಆರಂಭಿಸಲಾಗಿದೆ. ಶೀಘ್ರ ಚಿತ್ರದ ಕುರಿತ ಮಾಹಿತಿ ನೀಡುತ್ತೇನೆ ಎಂದು ಬಿಆರ್ ಶೆಟ್ಟಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com