ಹಾಸ್ಯಕ್ಕೆ ಕಾಶಿನಾಥ್ ರ ಮಾದರಿಯ ಕಥೆಗಳೇ ಬೆಸ್ಟ್: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ನಿರ್ದೇಶಕ ಸುಜಯ್ ಶಾಸ್ತ್ರಿ

ಹಾಸ್ಯಭರಿತ ಚಿತ್ರಗಳಿಗೆ ನಿರ್ದೇಶಕ ಕಾಶಿನಾಥ್ ರ ಮಾದರಿಯ ಕಥೆಗಳೇ ಉತ್ತಮ ಎಂದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ನಿರ್ದೇಶಕ ಸುಜಯ್ ಶಾಸ್ತ್ರಿ ಹೇಳಿದ್ದಾರೆ.
ಸುಜಯ್ ಶಾಸ್ತ್ರಿ
ಸುಜಯ್ ಶಾಸ್ತ್ರಿ

ಬೆಂಗಳೂರು: ಹಾಸ್ಯಭರಿತ ಚಿತ್ರಗಳಿಗೆ ನಿರ್ದೇಶಕ ಕಾಶಿನಾಥ್ ರ ಮಾದರಿಯ ಕಥೆಗಳೇ ಉತ್ತಮ ಎಂದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ನಿರ್ದೇಶಕ ಸುಜಯ್ ಶಾಸ್ತ್ರಿ ಹೇಳಿದ್ದಾರೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಕುರಿತು ಮಾತನಾಡಿರುವ ಅವರು, ಮೊದಲ ಬಾರಿಗೆ ಈ ಚಿತ್ರದ ಅವಕಾಶ ನನಗೆ ಬಂದಾಗ ಎರಡೂ ಕೈಗಳಿಂದ ನಾನು ಸ್ವೀಕರಿಸಿದೆ. ಭಯ ಎಂಬುದು ಉತ್ತಮ ಕೆಲಸಗಳನ್ನು ತೆಗೆಯುತ್ತದೆ ಎಂಬುದು ನನ್ನ ನಂಬಿಕೆ. ಚಿತ್ರ ನಿರ್ಮಾಣ ಸಂದರ್ಭದಲ್ಲೂ ನನಗೆ ಇದೇ ಭಯವಿತ್ತು. ಚಿತ್ರದ ಚಿತ್ರೀಕರಣದಲ್ಲಿ ಒಂಥರಾ ಭಯವಿದ್ದರೆ, ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಮತ್ತೊಂದು ರೀತಿಯ ಭಯ. ಒಂದು ರೀತಿಯಲ್ಲಿ ಪರೀಕ್ಷೆಗೆ ಸಿದ್ಧವಾಗುವ ಮತ್ತು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುವ ವಿದ್ಯಾರ್ಥಿಯಂತಾಗಿದೆ ನನ್ನ ಪರಿಸ್ಥಿತಿ ಎಂದು ಸುಜಯ್ ಹೇಳಿದ್ದಾರೆ.

ರಂಗಭೂಮಿ ಹಿನ್ನಲೆಯಿಂದ ಬೆಳ್ಳಿತೆರೆಗೆ ಬಂದಿರುವ ಸುಜಯ್ ಬಹುಮುಖ ಪ್ರತಿಭೆಯಾಗಿದ್ದು, ಸಂಗೀತ, ನೃತ್ಯ, ಗಾಯನ, ನಟನೆ, ಆರ್ ಜೆ ಮತ್ತು ವೀಕ್ಷಕ ವಿವರಣೆಯಲ್ಲೂ ಅನುಭವ ಹೊಂದಿದ್ದಾರೆ. ಅಲ್ಲದೆ 10-12 ಸಂಗೀತ ವಾದ್ಯಗಳನ್ನು ನುಡಿಸಬಲ್ಲ ಸಾಮರ್ಥ್ಯವನ್ನೂ ಹೊಂದಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು,  ನಾನು ಉತ್ತಮ ಗಾಯಕನಾಗಬೇಕು ಎಂದು ಕೊಂಡಿದ್ದೆ. ಈಗಲೂ ನನಗೆ ಆ ತುಡಿತವಿದೆ. ಆದರೆ ನನ್ನ ಆ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗಲೂ ನನ್ನ ತಾಯಿ ನನ್ನನು ಓರ್ವ ಎಂಜಿನಿಯರ್, ಅಥವಾ ಓರ್ವ ವೈದ್ಯನಾಗಿ ನೋಡಬಯಸುತ್ತಾರೆ. ನಮ್ಮ ತಂದೆ ದೇಗುಲದ ಪೂಜಾರಿ.  ಆದರೆ ಯಾವಾಗಲೂ ನನ್ನ ಸಿನಿಮಾ ವೃತ್ತಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ.  ನನ್ನ ಭವಿಷ್ಯದ ಕುರಿತು ಇಬ್ಬರೂ ನಾನಾ ಕನಸುಗಳನ್ನು ಹೊಂದಿದ್ದಾರೆ. ಆದರೆ ನನ್ನ ಪತ್ನಿ ನಾನು ಏನೇ ಮಾಡಿದರೂ ಅದನ್ನು ನಿಖರವಾಗಿ ಮಾಡುತ್ತೇನೆ ಎಂದು ನಂಬಿದ್ದಾಳೆ. ನಾನು ಯಾವ ವೃತ್ತಿಯನ್ನು ಆಯ್ಕೆ ಮಾಡುತ್ತೇನೆಯೋ ಅದಕ್ಕೆ ಅವಳ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಹೇಳಿದ್ದಾರೆ.

ಇನ್ನು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ಸುಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಮೊದಲ ಚಿತ್ರವೇ ಸಾಕಷ್ಟು ಭರವಸೆ ಮೂಡಿಸಿದೆ. ಧಾರಾವಾಹಿ, ಸಿನಿಮಾಗಳಲ್ಲಿನ ಪಾತ್ರಗಳು ಸುಜಯ್ ಅವರನ್ನು ಈ ವರೆಗೂ ತಂದು ನಿಲ್ಲಿಸಿದ್ದು, ಸಿಕ್ಕ ಸಣ್ಣ ಪುಟ್ಟ ಅವಕಾಶಗಳಲ್ಲೇ ಸುಜಯ್ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿ, ಇದೀಗ ನಿರ್ದೇಶನದ ಸಾಹಸಕ್ಕೆ ಕೈಹಾಕಿದ್ದಾರೆ. 

ತಮ್ಮ ಚಿತ್ರದ ಕುರಿತು ಮಾತನಾಡಿರುವ ಸುಜಯ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹಾಸ್ಯಮಯ ಚಿತ್ರವಾಗಿದೆ. ಸಾಮಾನ್ಯವಾಗಿ ಎಲ್ಲ ಹಾಸ್ಯ ಪ್ರಧಾನ ಚಿತ್ರಗಳು ಕೇವಲ ಮನರಂಜನೆ ಮತ್ತು ನಗಿಸುವಿಕೆಯನ್ನೇ ಕೇಂದ್ರೀಕೃತ ಮಾಡಿಕೊಂಡಿರುತ್ತವೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಇದಕ್ಕಿಂತ ಭಿನ್ನ ಎಂದು ಹೇಳಬಹುದು. ಹಾಸ್ಯದ ಸರಿಯಾದ ನಿಯಂತ್ರಣವಿಲ್ಲದಿದ್ದರೆ ಅದು ಅಭಾಸವಾಗುತ್ತದೆ. ಹೀಗಾಗಿ ಕಾಶಿನಾಥ್ ಅವರ ಮಾದರಿಯ ಕಥೆಗಳೇ ನನಗೆ ಸ್ಪೂರ್ತಿ. ಇದೇ ಕಾರಣಕ್ಕೆ ಕಾಶಿನಾಥ್ ಅವರು ಖ್ಯಾತಿಯ ಉತ್ತುಂಗಕ್ಕೇರಿದ್ದು.  ನಾನು ಕೂಡ ಅವರ ಒಂದು ಮಾದರಿಯನ್ನು ಗುಬ್ಬಿ ಮೇಲೆ ಬ್ರಹ್ಮಾಸ್ತ್ರದ ಮೂಲಕ ಪ್ರಯೋಗಿಸಿದ್ದೇನೆ ಎಂದು ಸುಜಯ್ ಶಾಸ್ತ್ರಿ ಹೇಳಿದ್ದಾರೆ.

ಈ ಹಿಂದೆ ರಾಜ್ ಬಿ ಶೆಟ್ಟಿ ನಿರ್ದೇಶನದ ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಸುಜಯ್ ಶಾಸ್ತ್ರಿ ನೆರವಾಗಿದ್ದರು. ಇದೀಗ ಮತ್ತೆ ಈ ಜೋಡಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. 

ಸುಜಯ್‌ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ಕವಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಎನ್ನುವುದನ್ನು ಟ್ರೇಲರ್‌ ಹೇಳುತ್ತಿದೆ. ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಾಫ್ಟ್‌ವೇರ್‌ ಯುವಕನಾಗಿ ರಾಜ್‌ ಬಿ.ಶೆಟ್ಟಿ ನಟಿಸಿದ್ದು, ನಾಲ್ವರು ಸ್ನೇಹಿತರ ಸ್ಟೋರಿ ಚಿತ್ರದಲ್ಲಿದೆ. ವಿಭಿನ್ನ ಗೆಟಪ್‌ಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ.  ಪ್ರಮೋದ್ ಶೆಟ್ಟಿ, ಮಂಜುನಾಥ್ ಹೆಗೆ, ಅರುಣ ಬಾಲ್ ರಾಜ್ ಮತ್ತಿತರರ ತಾರಾಗಣವಿದೆ ಎಂದು  ತಿಳಿಸಿದರು. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿರುವ ಈ ಚಿತ್ರ ಮೇ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಸುಮಿತ್ ಹಲಗೇರಿ ಕ್ಯಾಮರ್  ವರ್ಕ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com