'ಕೆಂಪೇಗೌಡ' ಕೋಮಲ್ ಮೇಲೆ ದಾದಾಗಿರಿ ನಡೆಸಿರುವ ಪುಂಡರಿಗೆ ತಕ್ಕ ಶಾಸ್ತಿಯಾಗಬೇಕು: ಜಗ್ಗೇಶ್ ಕಿಡಿ

ನಟ ಕೋಮಲ್ ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ದಾದಾಗಿರಿ ಮಾಡಿದವರನ್ನು ಖಂಡಿತಾ ಸುಮ್ಮನೆ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಕೋಮಲ್-ಜಗ್ಗೇಶ್
ಕೋಮಲ್-ಜಗ್ಗೇಶ್

ಬೆಂಗಳೂರು: ನಟ ಕೋಮಲ್ ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ದಾದಾಗಿರಿ ಮಾಡಿದವರನ್ನು ಖಂಡಿತಾ ಸುಮ್ಮನೆ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ನಟ ಕೋಮಲ್ ಅವರ ಕಾರು ಅಡ್ಡಗಟ್ಟಿದ ಹಲ್ಲೆ ನಡೆಸಿರುವ ಘಟನೆ ಮಲ್ಲೇಶ್ವರಂನ ಸಂಪಿಗೆ ಚಿತ್ರಮಂದಿರದ ರೈಲ್ವೇ ಕೆಳ ಸೇತುವೆ ಬಳಿ ಮಂಗಳವಾರ ನಡೆದಿದೆ. 

ಹಲ್ಲೆಯ ಕುರಿತು ಪ್ರತಿಕ್ರಿಯಿಸಿದ ಜಗ್ಗೇಶ್, ನನ್ನ ತಮ್ಮ ಕೋಮಲ್, ಮಗನನ್ನು ಟ್ಯೂಶನ್ ಗೆ ಬಿಡಲು ಹೋಗುತ್ತಿದ್ದ  ಶ್ರೀರಾಮಪುರ ರೈಲ್ವೇ ಅಂಡರ್ ಪಾಸ್ ಬಳಿ ಬರುತ್ತಿದಾಗ ಈ ಘಟನೆ ನಡೆದಿದೆ ನಾಲ್ಕು ಜನ ಬೈಕ್ ಸವಾರರು ಸೈಡ್ ಕೊಟ್ಟಿಲ್ಲ ಎನ್ನುವ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ  ಈ ವೇಳೆ ಮೂವರು ಕೋಮಲ್ ನನ್ನು ಹಿಡಿದುಕೊಂಡಿದ್ದಾರೆ ಇನ್ನೊಬ್ಬ ಹಲ್ಲೆ ಮಾಡಿದ್ದಾನೆ ನಾಲ್ವರೂ ಪಾನಮತ್ತರಾಗಿದ್ದರು ಎಂದು ತಿಳಿದುಬಂದಿದೆ ಈ ರೀತಿ ದಾದಾಗಿರಿ ಮಾಡುವವರನ್ನು ಪೊಲೀಸರು ಸುಮ್ಮನೆ ಬಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯಬಾರದು  ನನ್ನ ತಮ್ಮ ಅಥವಾ ನಟ ಮೇಲೆ ಹಲ್ಲೆ ನಡೆದಿದೆ ಎಂದು ಈ ಮಾತು ಹೇಳುತ್ತಿಲ್ಲ. ಯಾರಿಗೂ ಕೂಡ ಹೀಗಾಗಬಾರದು. ಕುಡಿದು, ಗಾಂಜಾ ಸೇವಿಸಿದ ಪುಂಡರು ನಶೆಯಲ್ಲಿ ಈ ರೀತಿ ಗಲಾಟೆ ಮಾಡಿದರೆ ಏನು ಅರ್ಥ? ಇದರ ಹಿಂದೆ ಯಾರಿದ್ದಾರೆ? ಇಂಡಸ್ಟ್ರಿಯವರು ಮಾಡಿದ್ದಾರಾ ಅಥವಾ ಬೇರೆಯವರು ಹಲ್ಲೆ ಮಾಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ನಾನು ಕಳೆದ ಮೂವತ್ತು ವರ್ಷದಿಂದ ಚಿತ್ರರಂಗದಲ್ಲಿದ್ದೇನೆ ನನಗೆ ಅವಾಚ್ಯ ಪದಗಳಲ್ಲಿ ಬೈಯಲು ಬರುತ್ತದೆ ಆದರೆ ಕೋಮಲ್ ಪಾಪದವನು, ಅವನಿಗೆ ಇವೆಲ್ಲಾ ತಿಳಿಯುವುದಿಲ್ಲ ಅಂತಹ ಅಮಾಯಕನ ಮೇಲೆ ಹಲ್ಲೆ ಮಾಡಿದವರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗಲೇಬೇಕು ಎಂದು ಹರಿಹಾಯ್ದಿದ್ದಾರೆ.

ಹಲ್ಲೆಯಿಂದಾಗಿ  ಕೋಮಲ್ ಮುಖ ಹಾಗೂ ಮೂಗಿಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಆದರೆ, ಹಲ್ಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದ್ಯ ಮಲ್ಲೇಶ್ವರಂ ಠಾಣಾ ಪೊಲೀಸರು ಹಲ್ಲೆ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟ ಕೋಮಲ್ ಅಭಿನಯದ ಕೆಂಪೇಗೌಡ 2 ಚಿತ್ರ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com