ಪರಭಾಷಾ ಸ್ಟಾರ್ ಗಳೇ ಎಲ್ಲಿದ್ದೀರಾ...?: ಕರ್ನಾಟಕ ಪ್ರವಾಹದ ಕುರಿತು ಯುವರಾಜ್ ಕುಮಾರ್ ಪೋಸ್ಟ್ ವೈರಲ್

ಕರ್ನಾಟಕ ಪ್ರವಾಹಕ್ಕೆ ಸಂಬಂಧಿಸಿದಂತೆ ರಾಜ್ ಕುಟುಂಬದ ಕುಡಿ ನಟ ಯುವರಾಜ್ ಕುಮಾರ್ ಅವರು ಮಾಡಿರುವ ಫೇಸ್ ಬುಕ್ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗಿದೆ.

Published: 16th August 2019 01:18 AM  |   Last Updated: 16th August 2019 01:59 AM   |  A+A-


YuvaRajkumar

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ಬೆಂಗಳೂರು: ಕರ್ನಾಟಕ ಪ್ರವಾಹಕ್ಕೆ ಸಂಬಂಧಿಸಿದಂತೆ ರಾಜ್ ಕುಟುಂಬದ ಕುಡಿ ನಟ ಯುವರಾಜ್ ಕುಮಾರ್ ಅವರು ಮಾಡಿರುವ ಫೇಸ್ ಬುಕ್ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗಿದೆ.

ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಭಾರಿ ಅವಾಂತರ ಸೃಷ್ಟಿ ಮಾಡಿರುವ ಭೀಕರ ಪ್ರವಾಹದಿಂದಾಗಿ ರಾಜ್ಯದ ಲಕ್ಷಾಂತರ ಮಂದಿಯ ಬದುಕು ಬೀದಿಗೆ ಬಿದ್ದಿದ್ದು, ಪ್ರವಾಹ ಸಂತ್ರಸ್ಥರಿಗೆ ನೆರವಿನ ಹಸ್ತ ಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಯಿಂದಲೇ ಲಕ್ಷಾಂತರ ಮಂದಿ ತಮ್ಮ ಕೈಲಾದ ಮಟ್ಟಿಗೆ ನೆರವು ನೀಡುತ್ತಿದ್ದಾರೆ. ಆದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ ಕುಟುಂಬದ ಕುಡಿ ಯುವ ರಾಜ್ ಕುಮಾರ್ ಸಿಟ್ಟಿಗೆದ್ದಿದ್ದಾರೆ.

ಹೌದು.. ಈ ಹಿಂದೆ ತಮಿಳುನಾಡು ಮತ್ತು ಕೇರಳದಲ್ಲಿ ಪ್ರವಾಹ ಉಂಟಾದಾಗ ಕರ್ನಾಟಕದಿಂದ ಸಾಕಷ್ಟು ಮಂದಿ ನೆರವಿಗೆ ಧಾವಿಸಿದ್ದರು. ಆದರೆ ಕರ್ನಾಟಕದಲ್ಲೇ ಭೀಕರ ಪ್ರವಾಹ ಉಂಟಾಗಿದ್ದು, ಪರಭಾಷಾ ನಟರು ಈ ಕುರಿತಂತೆ ಸೊಲ್ಲೆತ್ತಿಲ್ಲ ಎಂದು ಯುವರಾಜ್ ಕುಮಾರ್ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಈ ಕುರಿತಂತೆ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಯುವ ರಾಜ್​ಕುಮಾರ್​, ನನ್ನದೊಂದು ಆಲೋಚನೆ, ನಮ್ಮ ಕರ್ನಾಟಕದ ಎಷ್ಟೋ ಜಿಲ್ಲೆಗಳಲ್ಲಿ ಜಲಪ್ರಳಯದ ಪರಿಣಾಮ ಲಕ್ಷಾಂತರ ಜನರು ನಷ್ಟದಲ್ಲಿದಾರೆ. ಅವರಲ್ಲಿ ನೂರಾರು ಜನರು ನಿರಾಶ್ರಿತರಾಗಿದ್ದಾರೆ. ಆಹಾರವಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ನಾವು ಕನ್ನಡಿಗರು, ಇಲ್ಲಿನ ಸಂಘ ಸಂಸ್ಥೆಗಳು, ಸೇನಾ ದಳಗಳು ಹಾಗೂ ಕರ್ನಾಟಕ ಸರ್ಕಾರ ಎಲ್ಲರೂ ಒಂದಾಗಿ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ. ಆದರೆ ಬೇರೆಯವರು ಎಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಎಲ್ಲಾ ಹೊರಗಿನ ಸೆಲೆಬ್ರಿಟಿಗಳು, ಸ್ಟಾರ್‌ಗಳು, ರಾಜಕಾರಣಿಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು, ಬ್ರಾಂಡ್ ಅನ್ನು ಉತ್ತೇಜಿಸಲು, ತಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು, ಮತ ಕೇಳಲು ಕರ್ನಾಟಕಕ್ಕೆ ಬರುತ್ತಾರೆ. ಆದರೆ, ಈಗ ಅವರೆಲ್ಲಾ ಎಲ್ಲಿದ್ದಾರೆ? ಇಲ್ಲಿ ಬರೋದು, ಸಹಾಯ ಮಾಡೋದು ಇರಲಿ, ನನಗೆ ಯಾರ ಟ್ವೀಟ್, ಪೋಸ್ಟ್ ನೋಡಿದ ನೆನಪು ಆಗುತ್ತಿಲ್ಲ ಎಂದು ಕಿಡಿಕಾರಿರುವ ಯುವರಾಜ್​, ನಾನು ಏನಾದರೂ ತಪ್ಪು ಹೇಳುತ್ತಿದ್ದೇನೆಯೇ? ತಪ್ಪಿದರೆ ಕ್ಷಮೆ ಇರಲಿ, ಯಾರೇ ಬರಲಿ, ಬಿಡಲಿ ನಮ್ಮವರ ಜತೆ, ಎಲ್ಲರ ಜತೆ ನಾವು ಇರೋಣ ಎಂದು ಕರೆ ನೀಡಿದ್ದಾರೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಉಂಟಾಗಿ ಬಹಳಷ್ಟು ಹಾನಿ ಉಂಟಾಗಿದೆ. ಆದರೆ, ಈವರೆಗೂ ಪರಭಾಷೆಯ ಯಾವ ನಟರು ಕಳವಳ ವ್ಯಕ್ತಪಡಿಸಿಲ್ಲ. ಆದರೆ, ತಮಿಳುನಾಡಿನ ಚೆನ್ನೈನಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ನಮ್ಮ ರಾಜ್ಯವೇ ಅವರ ನೋವಿಗೆ ಸ್ಪಂದಿಸಿತ್ತು. ಇದೀಗ ಯುವರಾಜ್​ ಕುಮಾರ್​ ಮಾಡಿರುವ ಪೋಸ್ಟ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp