ಪೇಜಾವರ ವಿಶ್ವೇಶ ತೀರ್ಥಶ್ರೀಗಳ ನಿಧನಕ್ಕೆ ಸ್ಯಾಂಡಲ್ ವುಡ್ ತಾರೆಯರ ಸಂತಾಪ

ಭಾನುವಾರ(ಡಿಸೆಂಬರ್ 29) ರಂದು ವಿಧಿವಶರಾದ ಪೇಜಾವರ ಮಠದ ಹಿರಿಯ ಯತಿಶ್ರೀಗಳು ವಿಶ್ವೇಶ ತೀರ್ಥ ಶ್ರೀಗಳ ನಿಧನಕ್ಕೆ ಸ್ಯಾಂಡಲ್ ವುಡ್ ನಟ ನಟಿಯರು, ನಿರ್ಮಾಪಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪೇಜಾವರ ಶ್ರೀಗಳೊಡನೆ ನವರಸ ನಾಯಕ ಜಗ್ಗೇಶ್
ಪೇಜಾವರ ಶ್ರೀಗಳೊಡನೆ ನವರಸ ನಾಯಕ ಜಗ್ಗೇಶ್

ಭಾನುವಾರ(ಡಿಸೆಂಬರ್ 29) ರಂದು ವಿಧಿವಶರಾದ ಪೇಜಾವರ ಮಠದ ಹಿರಿಯ ಯತಿಶ್ರೀಗಳು ವಿಶ್ವೇಶ ತೀರ್ಥ ಶ್ರೀಗಳ ನಿಧನಕ್ಕೆ ಸ್ಯಾಂಡಲ್ ವುಡ್ ನಟ ನಟಿಯರು, ನಿರ್ಮಾಪಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪೇಜಾವರ ಶ್ರೀಗಳ ನಿಧನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್,  ರಿಯಲ್ ಸ್ಟಾರ್ ಉಪೇಂದ್ರ, ಸಂಸದೆ ಸುಮಲತಾ ಅಂಬರೀಶ್, ನವರಸ ನಾಯಕ ಜಗ್ಗೇಶ್ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

"ಪೇಜಾವರ ಶ್ರೀಗಳು ಎಂದೆಂದೂ ಅಮರ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ನಟ, ನಿರ್ದೇಶಕ, ಪ್ರಜಾಕೀಯ ನಾಯಕರಾದ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

"ಅನೇಕ ಬಾರಿ ಕುಟುಂಬ ಸಮೇತ ಬೇಟಿಯಾಗಿ ವಿಶ್ವೇಶತೀರ್ಥರ ಆಶೀರ್ವಾದ ಪಡೆದವರು ನಾವು!ನನ್ನ ಮಿತ್ರರು ಸನ್ಮಾನ್ಯ ಅನಂತು ತಿರುಪತಿ ದೇವಸ್ಥಾನದ ಸದಸ್ಯರು ಗುರುಗಳ ವಿಷಮಸ್ಥಿತಿ ಆರೋಗ್ಯದ ಬಗ್ಗೆ ಹೇಳಿದಾಗ ದಿಘ್ಬ್ರಾಂತನಾದೆ!
ನನಗೆ ತಿಳಿದದ್ದು ಒಂದೆ ನಿಮ್ಮ ಜೊತೆ ದೇವರಿದ್ದಾನೆ!ನಮಗೆ ನೀವು ದೇವರ ಪ್ರತಿರೂಪ..ಗುರುಭ್ಯೋನಮಃ..

"ದೇಹಕ್ಕೆ ಅಂತ್ಯವುಂಟು ಆತ್ಮಕ್ಕಲ್ಲಾ ಎಂದ ಕೃಷ್ಣನ ಬಳಿ ನೇರವಾಗಿ ಅರ್ಜುನನಂತೆ  ಭಗವದ್ಗೀತೆ ಉವಾಚ ಅರಿಯಲು ಹೋದರು ಶ್ರೇಷ್ಟ ಸಂತ ಶ್ರೀ ವಿಶ್ವೇಶ್ವರ ತೀರ್ಥರು..ನಿಮ್ಮ ಬಳಿ ಅನೇಕಬಾರಿ ಆಶೀರ್ವಾದ ಪಡೆದ ನಾನೆ ಧನ್ಯ ಅನ್ನಿಸಿತು.. ಓಂಶಾಂತಿ.." ಎಂದು ನವರಸ ನಾಯಕ ಜಗ್ಗೇಶ್ ತಮ್ಮ ಎರಡು ಟ್ವೀಟ್ ಗಳ ಮೂಲಕ ಅಗಲಿದ ಶ್ರೀಗಳನ್ನು ಸ್ಮರಿಸಿದ್ದಾರೆ.

ಇನ್ನು ಸಂಸದೆ ಸುಮಲತಾ ಅಂಬರೀಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೇಜಾವರ ಶ್ರೀಗಳನ್ನು ಸ್ಮರಿಸಿಕೊಂಡಿದ್ದು 

"ವಾಮನ ಮೂರ್ತಿ - ತ್ರಿವಿಕ್ರಮ ಕೀರ್ತಿ, ಗುರುವರ್ಯ ಇಂದು ನಮ್ಮನ್ನು ಅಗಲಿ ಭಗವಂತನಲ್ಲಿ ಲೀನರಾದ ಶ್ರೀ ಶ್ರೀ ವಿಶ್ವೇಶ್ವರ ತೀರ್ಥ ಪೇಜಾವರ ಶ್ರೀಗಳಿಗೆ ಕೋಟಿ ಕೋಟಿ ನಮನಗಳು.

ಸುಪ್ರಸಿದ್ಧ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿ, ನಾಡಿನ ಹಿರಿಯ ವಿದ್ವಾಂಸರಾಗಿ, ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರಾಗಿ, ಅಪಾರ ವಿದ್ವತ್ತು, ಅಪ್ರತಿಮ ಸಾಧನೆ, ಅಪೂರ್ವ ಸಾಮಾಜಿಕ ಸೇವೆ, ಧಾರ್ಮಿಕ ಹೋರಾಟ, ಸಾಮಾಜಿಕ ಕರ್ತವ್ಯ ನಿರ್ವಹಣೆ ಮೂಲಕ ರಾಷ್ಟ್ರ ಮಾತ್ರವಲ್ಲ ವಿಶ್ವಮಾನ್ಯತೆ ಗಳಿಸಿದವರು ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು.

ಮಾಧ್ವ ತತ್ವ-ಭಕ್ತಿ ಪ್ರಚಾರ, ಹಿಂದೂ ಧರ್ಮ ಪ್ರಚಾರ, ಮತಾಂತರ ತಡೆ, ದಲಿತರ ಕೇರಿಗಳಿಗೆ ಭೇಟಿ, ನೆರೆಪೀಡಿತರಿಗೆ ಮನೆ - ಹೀಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಜನತಾ ಜನಾರ್ದನರ ಸೇವೆಗೆ ಧಾವಿಸಿದವರು. ಸಾಮಾಜಿಕ ಜವಾಬ್ದಾರಿ ಅರಿತು ಹಕ್ಕು ಚಲಾಯಿಸಿದ್ದಾರೆ, ಕರ್ತವ್ಯ ನಿಭಾಯಿಸಿದ್ದಾರೆ. ಅಖಿಲ ಭಾರತ ಮಾಧ್ವ ಮಂಡಲ ಸ್ಥಾಪನೆ, ಪೂರ್ಣಪ್ರಜ್ಞ ವಿದ್ಯಾಪೀಠ, ಶ್ರೀಕೃಷ್ಣ ಬಾಲನಿಕೇತನ, ಶ್ರೀಕೃಷ್ಣ ಸೇವಾಧಾಮ ಉಚಿತ ಆಸ್ಪತ್ರೆ, ಅನಾಥಾಶ್ರಮ, ದೇಶದ ನಾನಾ ಭಾಗಗಳಲ್ಲಿ ಶ್ರೀಮಠದ ಶಾಖೆಗಳ ಸ್ಥಾಪನೆ ಮಾಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ವಿದ್ಯಾರ್ಥಿನಿಲಯಗಳು, ಪ್ರವಾಹ, ಭೂಕಂಪ ಪೀಡಿತರಿಗೆ ಉಚಿತ ವಸತಿ ಬಡಾವಣೆ ಸಹಿತ ನೂರಾರು ಶಾಶ್ವತ ಯೋಜನೆಗಳ ಮೂಲಕ ದೀನ-ದಲಿತರ ಪರ ತಮಗಿರುವ ಸಹಾನುಭೂತಿ, ಮಾನವೀಯ ಮುಖಗಳಿಂದ ಜನಜನಿತರಾಗಿದ್ದರು.

ಧರ್ಮ-ಕರ್ಮಗಳ ಸಮನ್ವಯ ಮೂರ್ತಿಯಾಗಿ ಕಂಗೊಳಿಸಿದ್ದಾರೆ. ಯುವಜನಾಂಗದ ಮನೋಧರ್ಮ ಅರಿತ ಪೀಠಾಧಿಪತಿ. ಊರೂರು ಸುತ್ತಿ ಕೇರಿಕೇರಿಗೆ ತೆರಳಿ ನವಜಾಗರಣೆಯ ಕಹಳೆ ಊದಿದ ಧಾರ್ಮಿಕ ನೇತಾರ.
ಶ್ರೀಪಾದರು ತಮ್ಮನ್ನು ಸಾರ್ವಜನಿಕವಾಗಿ ತೊಡಗಿಸಿಕೊಂಡರೂ ಯತಿ ಧರ್ಮದ ಯಾವ ನಿಯಮವನ್ನೂ ಕೈ ಬಿಟ್ಟವರಲ್ಲ. ಅಖಂಡವಾದ ಬ್ರಹ್ಮಚರ್ಯೆ, ನಿತ್ಯವೂ ಪ್ರಣವ ಜಪ, ಸಂಸ್ಥಾನದ ಮೂರ್ತಿಗಳ ಪೂಜೆ, ವಿದಾರ್ಥಿಗಳಿಗೆ ವೇದಾಂತ ಗ್ರಂಥಗಳ ಪಾಠ ಪ್ರವಚನ – ಅವರ ಜೀವನದ ಅವಿಭಾಜ್ಯ ಅಂಗಗಳಾಗಿ ನಿರಂತರ ನಡೆಯುತ್ತಿದ್ದವು.

ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಹೀಗೆಯೇ ಸಾವಿರಾರು ಮಂದಿ ಬೀದಿಯಲ್ಲಿ ನಿಂತಾಗ, ಪೇಜಾವರ ಶ್ರೀಪಾದರು ಪ್ರಕೃತಿಯ ಕೋಪಕ್ಕೆ ಬಲಿಯಾದವರ ನೆರವಿಗೆ ನಿಂತರು. ಪೀಠಾಧಿಪತಿ ಸಾಮಾಜಿಕವಾಗಿ ಹೇಗೆ ಸ್ಪಂದಿಸಬೇಕು ಎನ್ನುವುದಕ್ಕೆ ಮಾದರಿಯಾದರು.

ನಕ್ಸಲ್‌ಪೀಡಿತ ಪ್ರದೇಶದ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಳಿಲ ಸೇವೆಯನ್ನೂ ಆರಂಭಿಸಿದರು. ನೈಜ ಪರಿವ್ರಾಜಕನಂತೆ ಸಮಾಜದ ಏಳಿಗೆಗಾಗಿ ಜೋಳಿಗೆ ಹಿಡಿದ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸ್ವಂತ ಜೀವನದಲ್ಲಿ ಅತ್ಯಂತ ನಿಸ್ಪೃಹರು. ನಿರಾಡಂಬರಿಗಳು.

ಸಂಪ್ರದಾಯವಾದಿಗಳ ಪಾಲಿಗೆ ಕ್ರಾಂತಿಕಾರಿಯಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರದ್ದು ವಾಮನಮೂರ್ತಿ, ಆದರೆ ತ್ರಿವಿಕ್ರಮ ಕೀರ್ತಿ. ಚುರುಕು ವ್ಯಕ್ತಿತ್ವದ ಶ್ರೀಪಾದರಿಗೆ ಇಳಿವಯಸ್ಸಿನಲ್ಲೂ ಯುವಜನರೂ ನಾಚುವಂತಹ ಚಟುವಟಿಕೆ. ಇಂದು ನಮ್ಮನ್ನು ಅಗಲಿದ್ದು ಈ ನಾಡಿಗೆ ತುಂಬ ಲಾಗದ ನಷ್ಟ.

ಭಗವಂತನು ಸದ್ಗತಿ ಕರುಣಿಸಲಿ." ಎಂದಿದ್ದಾರೆ

ಸ್ಯಾಂಡಲ್ ವುಡ್ ಸಂಗೀತ ಮಾತ್ರಿಕ ನಾದಬ್ರಹ್ಮ ಹಂಸಲೇಖ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದು ಕೊಪ್ಪಳದ  ಕಿಡದಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ "ಸಮಾಜದ ಎಲ್ಲಾ ವರ್ಗದ ಜನರು ಸಾಮರಸ್ಯದಿಂದ ಬಾಳಬೇಕೆನ್ನುವುದು ಶ್ರೀಗಳ ಕನಸಾಗಿತ್ತು. ಮುಂದಿನ ದಿನಗಳಲ್ಲಿ ಆ ಕನಸು ಈಡೇರಲಿದೆ. ಉಡುಪಿಯಂತಹಾ ಸಾಂಸ್ಕೃತಿಕ ಕ್ಷೇತ್ರದಲ್ಲಿದ್ದು ನಾಡಿನೆಲ್ಲೆಡೆ ಸಾಮರಸ್ಯ ತರುವ ಕೆಲಸ ಮಾಡಿದ್ದ ಶ್ರೀಗಳು ಧರ್ಮ ಹಾಗೂ ರಾಜಕಾರಣವನ್ನು ಅತ್ಯಂತ ಸನಿಹಕ್ಕೆ ತಂದ ಶ್ರೇಷ್ಠ ಸಂತ. ಅವರನ್ನು ಕಳೆದುಕೊಂಡ ನಾಡು ಬಡವಾಗಿದೆ. ಆ ಹಿರಿಯ ಸಂತರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ  ಎಂದು ಆಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com