ಮೇರು ನಟಿ ಬಿ.ಸರೋಜಾದೇವಿಗೆ ತೆಲುಗು ಅಭಿಮಾನಿಗಳಿಂದ “ವಿಶ್ವ ನಟ ಸಾಮ್ರಾಜ್ಞಿ” ಪ್ರಶಸ್ತಿ

ಹಿರಿಯ ನಟಿ ಬಿ.ಸರೋಜಾ ದೇವಿ ಅವರಿಗೆ ಮಾರ್ಚ್ 4ರಂದು ವಿಶಾಖಪಟ್ಟಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ‘ವಿಶ್ವ ನಟ ಸಾಮ್ರಾಜ್ಞಿ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದ್ರಾಬಾದ್:  ದಕ್ಷಿಣ ಭಾರತ ಚಿತ್ರರಂಗದ ಸುಪ್ರಸಿದ್ಧ ಹಿರಿಯ ನಟಿ ಬಿ.ಸರೋಜಾ ದೇವಿ ಅವರಿಗೆ ಮಾರ್ಚ್ 4ರಂದು  ವಿಶಾಖಪಟ್ಟಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ‘ವಿಶ್ವ ನಟ ಸಾಮ್ರಾಜ್ಞಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಹಾಗೂ ಚಲನಚಿತ್ರ ನಿರ್ಮಾಪಕ ಟಿ. ಸುಬ್ಬರಾಮಿರೆಡ್ಡಿ ಪ್ರಕಟಿಸಿದ್ದಾರೆ.
ಮಹಾಶಿವರಾತ್ರಿಯ ಅಂಗವಾಗಿ ವಿಶಾಖಪಟ್ಟಣದ  ರಾಮಕೃಷ್ಣ ಕಡಲ ಕಿನಾರೆಯಲ್ಲಿ ಟಿಎಸ್ ಆರ್ ಕಲಾಪರಿಷತ್ ಆಯೋಜಿಸಿರುವ ವಿಶೇಷ  ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬಿ. ಸರೋಜಾದೇವಿ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ನಟಿಯರಾದ ಜಮುನ, ವಾಣಿಶ್ರೀ, ಗೀತಾಂಜಲಿ, ಮೀನಾ, ಗಾಯಕಿ ಪಿ.ಸುಶೀಲಾ  ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಕನ್ನಡ ನಾಡಿನ ಈ ಕಲಾವಿದೆ ತೆಲುಗು ಪ್ರೇಕ್ಷಕರ  ಹೃದಯಗಳಲ್ಲಿ ಮನೆ ಮಾಡಿದ್ದಾರೆ ಎಂದು ಹೇಳಿದ್ದಾರೆ,
ಎನ್ ಟಿ ರಾಮರಾವ್ ನಟಿಸಿರುವ ಪಾಂಡುರಂಗ ಮಹಾತ್ಯಂ ಚಿತ್ರದ ಮೂಲಕ  ತೆಲುಗು ಚಿತ್ರರಂಗ ಪ್ರವೇಶಿಸಿದ ಸರೋಜಾದೇವಿ, ನಂತರ ಎನ್ ಟಿಆರ್ ಅವರೊಂದಿಗೆ ಸೀತರಾಮ ಕಲ್ಯಾಣಂ, ಜಗದೇಕವೀರುನಿ ಕಥ, ಧಾನ ಶೂರ ವೀರ ಕರ್ಣ ಚಿತ್ರಗಳಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು.
ಅಕ್ಕಿನೇನಿ ನಾಗೇಶ್ವರರಾವ್ ಅವರೊಂದಿಗೆ ಪೆಳ್ಳಿಕಾನುಕ, ಆತ್ಮಬಲಂ, ಅಮರಶಿಲ್ಪಿ ಜಕ್ಕನ್ನ ನಂತಹ ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದರು. ಮಾತೃಭಾಷೆ ಕನ್ನಡವಲ್ಲದೆ, ತಮಿಳು, ಮಲೆಯಾಳಂ, ಹಿಂದಿ ಚಿತ್ರಗಳಲ್ಲೂ ನಟಿಸಿದ್ದರು ಸರೋಜಾ ದೇವಿ ಪದ್ಮಶ್ರೀ, ಪದ್ಮ ವಿಭೂಷಣ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com