ಸ್ಯಾಂಡಲ್‍ವುಡ್ ಐಟಿ ದಾಳಿ: 11 ಕೋಟಿ ರು. ಆಸ್ತಿ ಜಪ್ತಿ, 109 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆ

ಸ್ಯಾಂಡಲ್‌ಪುಡ್‌ ನಾಲ್ವರು ಖ್ಯಾತ ನಟರ ಹಾಗೂ ನಿರ್ಮಾಪಕರ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ....
ಯಶ್‌, ಸುದೀಪ್‌, ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌
ಯಶ್‌, ಸುದೀಪ್‌, ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌
ಬೆಂಗಳೂರು: ಸ್ಯಾಂಡಲ್‌ಪುಡ್‌ ನಾಲ್ವರು ಖ್ಯಾತ ನಟರ ಹಾಗೂ ನಿರ್ಮಾಪಕರ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ  2.85 ಕೋಟಿ ರುಪಾಯಿ ನಗದು ಸೇರಿದಂತೆ ಒಟ್ಟು 11 ಕೋಟಿ ರುಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಅಲ್ಲದೆ 109 ಕೋಟಿ ರುಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ. 
ದಾಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಇಂದು ಅಧಿಕೃತ ಪ್ರಕಟಣೆ ನೀಡಿದ್ದು,  ಒಟ್ಟು 21 ಕಡೆ ಏಕ ಕಾಲಕ್ಕೆ ನಡೆಸಿದ ದಾಳಿಯಲ್ಲಿ 2.85 ಕೋಟಿ ನಗದು,  25.3 ಕೆ.ಜಿ ಚಿನ್ನಾಭರಣ ಸೇರಿ 11 ಕೋಟಿ ರುಪಾಯಿ ಮೌಲ್ಯದ ಜಪ್ತಿ ಮಾಡಲಾಗಿದೆ ಮತ್ತು 109 ಕೋಟಿ ರುಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಇದು ನಟರು, ನಿರ್ಮಾಪಕರು ಒಪ್ಪಿರುವ ಅಘೋಷಿತ ಆಸ್ತಿಯಾಗಿದೆ. ಆದಾಯದ ಜತೆಗೆ ಇನ್ನಷ್ಟು ಪ್ರಮುಖ ದಾಖಲೆಗಳು ಪತ್ತೆಯಾಗಿವೆ. ಅವುಗಳು ಅಘೋಷಿತ ಆಸ್ತಿ ಎಂದು ಒಪ್ಪಿಕೊಂಡಿಲ್ಲ. ಅದೂ ಸೇರಿದರೆ ಅಘೋಷಿತ ಆಸ್ತಿ ಮೌಲ್ಯ ಇನ್ನು ಬಹಳ ದೊಡ್ಡದಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 
ಜಾರಿ ನಿರ್ದೇಶನಾಲಯಕ್ಕೂ ಐಟಿ ಇಲಾಖೆ ಮಾಹಿತಿ ರವಾನೆ ಮಾಡಿದ್ದು ಪ್ರಕರಣ ವರ್ಗಾವಣೆ ಆದರೆ ಸ್ಯಾಂಡಲ್‌ವುಡ್‌ ದಿಗ್ಗಜರಿಗೆ ಸಂಕಷ್ಟ ಎದುರಾಗಬಹುದು. 
ಮೂರು ತಿಂಗಳ ಕಾಲ ಗೌಪ್ಯ ತನಿಖೆ ನಡೆಸಿ ಈ ದಾಳಿ ನಡೆಸಲಾಗಿದ್ದು, ತೆರಿಗೆ ವಂಚನೆ ಅವ್ಯವಹಾರದ ಕುರಿತು ಶೀಘ್ರದಲ್ಲೇ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರಮಂದಿರದಲ್ಲಿ ದಾಖಲೆ ರಹಿತವಾಗಿ ಸಂಗ್ರಹಿಸಿದ ನಗದು,ಆಡಿಯೋ ಹಕ್ಕು, ಡಿಜಿಟಲ್‌ ಹಕ್ಕುಗಳ ಮೂಲದ ಅವ್ಯವಹಾರ ನಡೆಸಿದ ಹಣ  ಇದಾಗಿದೆ ಎಂದು ಐಟಿ ಇಲಾಖೆ ಹೇಳಿದೆ. ಆದರೆ ದಾಳಿಯಲ್ಲಿ ವೈಯಕ್ತಿಕವಾಗಿ ಯಾರ ಬಳಿ ಎಷ್ಟು ಸಂಪತ್ತು ಪತ್ತೆಯಾಗಿದೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸದೆ ಜಾಣತನ ತೋರಿದ್ದಾರೆ. 
ಪ್ರಖ್ಯಾತ ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌ ಮತ್ತು ಯಶ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌,ಸಿ.ಆರ್‌.ಮನೋಹರ್‌, ವಿಜಯ್‌ ಕಿರಗಂದೂರು ಮತ್ತು  ಜಯಣ್ಣ ಅವರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿ 2 ದಿನಗಳ ಕಾಲ ನಿರಂತರ ದಾಖಲೆಗಳ ಪರಿಶೀಲನೆ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com