ಸಾ ರಾ ಗೋವಿಂದು ಹಿಡಿತದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ: ಟೇಶಿ ವೆಂಕಟೇಶ್ ಆಕ್ರೋಶ

ಕನ್ನಡ ಚಿತ್ರರಂಗದ ಪ್ರತಿನಿಧಿಯಂತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಲ್ಲವೂ ಸರಿಯಿಲ್ಲ, ಬೂದಿ ಮುಚ್ಚಿದ ಕೆಂಡದಂತೆ ಸದಸ್ಯರು ಬೇಸರದಿಂದ ...
ಸಾ.ರಾ ಗೋವಿಂದ್.
ಸಾ.ರಾ ಗೋವಿಂದ್.
ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿನಿಧಿಯಂತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಲ್ಲವೂ ಸರಿಯಿಲ್ಲ, ಬೂದಿ ಮುಚ್ಚಿದ ಕೆಂಡದಂತೆ ಸದಸ್ಯರು ಬೇಸರದಿಂದ ಕುದಿಯುತ್ತಿದ್ದಾರೆ ಎಂಬುದು ಸಾಬೀತಾಗಿದೆ ವಾಣಿಜ್ಯ ಮಂಡಳಿಯ ಚುನಾವಣೆಯ ಹೊಸ್ತಿಲಲ್ಲಿ, ಮಂಡಳಿಯ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ವಿರುದ್ಧ ನಿರ್ಮಾಪಕರ ಆಕ್ರೋಶದ ಕಟ್ಟೆ ಒಡೆದಿದೆ
ವಾಣಿಜ್ಯ ಮಂಡಳಿಯ ನಿರ್ಮಾಪಕರ ವಲಯದ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿಯಾಗಿ 2019-20ನೇ ಸಾಲಿನ ಚುನಾವಣೆಗೆ ಸ್ಪರ್ಧಿಸಿರುವ ಟೇಶಿ ವೆಂಕಟೇಶ್ ಹಾಗೂ ಅವರ ಬೆಂಬಲಿಗರು ಬುಧವಾರದ ಸುದ್ದಿಗೋಷ್ಠಿಯಲ್ಲಿ ಸಾ ರಾ ಗೋವಿಂದು ವಿರುದ್ಧ ಹರಿಹಾಯ್ದಿದ್ದು, “ಕಳೆದ 10 ವರ್ಷಗಳಿಂದ ಚಿತ್ರರಂಗ ಸೊರಗುತ್ತಿದೆ. ಮಂಡಳಿಯಲ್ಲಿ ಗುಂಪುಗಾರಿಕೆಗೆ ಪ್ರಚೋದಿಸುತ್ತಿದ್ದು, ಹಿಟ್ಲರಿಸಂ ನಡೆಸುತ್ತಿದ್ದಾರೆ, ಅಭ್ಯರ್ಥಿಯ ಚುನಾವಣೆಯ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ” ಎಂದರು.
ಸುಮಾರು 50 ಸಾವಿರ ಕುಟುಂಬಗಳಿರುವ, 85 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರೋದ್ಯಮ ಎಂದೂ ಕಾಣದ ದುಸ್ಥಿತಿಗೆ ತಲುಪಿದೆ. ತಮ್ಮನ್ನು ತಾವು ಚಿತ್ರೋದ್ಯಮದ ಬ್ರಹ್ಮ ಎಂದು ಸ್ವಯಂ ಭಾವಿಸಿಕೊಂಡಿರುವ ಸಾ ರಾ ಗೋವಿಂದು, ಬದಲಾವಣೆಗೆ ಅವಕಾಶ ಕೊಡದೆ, ಮಂಡಳಿಯಲ್ಲಿ ಕುಟುಂಬ ರಾಜಕಾರಣಕ್ಕೆ ಯತ್ನಿಸಿದ್ದಾರೆ. ಕುಸಿಯುತ್ತಿರುವ ಚಿತ್ರರಂಗಕ್ಕೆ ಚೈತನ್ಯ ನೀಡಲು ಅಶಕ್ತರಾದವರನ್ನು ಕುರ್ಚಿಯಲ್ಲಿ ಕೂರಿಸುವ ಹುನ್ನಾರ ನಡೆಸಿದ್ದು, ಹೊಸ ಆಲೋಚನೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿಲ್ಲ” ಎಂದು ಕಿಡಿಕಾರಿದರು.
ಕನ್ನಡ ಪರ ಹೋರಾಟಗಾರ ಎಂದು ಗುರುತಿಸಿಕೊಂಡಿರುವ ಸಾ ರಾ ಗೋವಿಂದು ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಎಷ್ಟರಮಟ್ಟಿಗೆ ಹಿಡಿತ ಸಾಧಿಸಿದ್ದಾರೆಂದರೆ ಅವರೆದುರು ನಿಂತು ಮಾತನಾಡಲು ಬಹುತೇಕ ಸದಸ್ಯರು ಅಂಜುತ್ತಿದ್ದಾರೆ. ಒಂದು ವೇಳೆ ಮಾತನಾಡಿದರೆ ಅಂತಹವರು ಮಂಡಳಿಯಿಂದಷ್ಟೇ ಅಲ್ಲ, ಚಿತ್ರರಂಗದಿಂದಲೇ ಹೊರದಬ್ಬುವ ಕೆಲಸ ಮಾಡುತ್ತಿದ್ದಾರೆ ಎಂದ ಟೇಶಿ ವೆಂಕಟೇಶ್, “ಚಿತ್ರೋದ್ಯಮದ ಅಭಿವೃದ್ಧಿಗೆ ಯಾವುದೇ ಅಜೆಂಡಾ ಹೊಂದಿಲ್ಲದ, ಕೇವಲ ‘ಜೀ ಹುಜೂರ್’ ಎನ್ನುತ್ತ ತಮಗೆ ಪರಾಕು ಹೇಳುವವರನ್ನಷ್ಟೆ ಆರಿಸುವಂತೆ ಸಾ ರಾ ಗೋವಿಂದು ಒತ್ತಡ ಹೇರುತ್ತಿದ್ದಾರೆ” ಎಂದು ಹೇಳಿದರು.
“ಕಾರ್ಯದರ್ಶಿ ಸ್ಥಾನಕ್ಕೆ ಭಾ ಮಾ ಹರೀಶ್, ಭಾ ಮಾ ಗಿರೀಶ್, ಎನ್ ಎಲ್ ಸುರೇಶ್ ಒಂದು ಸ್ಥಾನದ ಬಳಿಕ ಇನ್ನೊಂದು ಸ್ಥಾನದಲ್ಲಿ ಕೂರುತ್ತ ಅಧಿಕಾರ ದಾಹ ತಣಿಸಿಕೊಳ್ಳುತ್ತಿದ್ದಾರೆ. ಕುಳಿತ ಕುರ್ಚಿಗೆ ಮರ್ಯಾದೆ ಇಲ್ಲದಂತೆ, ಚಿತ್ರರಂಗದ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗದೆ ನಿದ್ದೆ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲಿಸಲು ಸಾ ರಾ ಗೋವಿಂದು ಬಿಡುತ್ತಿಲ್ಲ. ವೈಯಕ್ತಿಕವಾಗಿ ಅವರನ್ನು ದೂಷಿಸುವ ಇಚ್ಛೆಯಿಲ್ಲ. ಆದರೆ ಅವರಿಂದಾಗಿ ಚಿತ್ರರಂಗ ಹಾಗೂ ಅದನ್ನೇ ನಂಬಿರುವ 50 ಸಾವಿರ ಕುಟುಂಬಗಳು ಬಡವಾಗುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು.
“ವಾಣಿಜ್ಯ ಮಂಡಳಿಯ ಬೈಲಾದಲ್ಲಿ ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗಬೇಕೆಂಬ ನಿಯಮವಿದ್ದರೂ, ನಿರಂತರ ಮೂರು ವರ್ಷ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರು. ಈ ಅವಧಿಯಲ್ಲಿ ಚಿತ್ರರಂಗ ಯಾವುದೇ ಏಳಿಗೆ ಕಾಣಲಿಲ್ಲ. ಕೇವಲ ಸ್ವಹಿತಕ್ಕಾಗಿ ಕುರ್ಚಿಯಲ್ಲಿ ಕುಳಿತು, ತಮಗೆ ಬೇಕಾದವರನ್ನು ಕಾರ್ಯದರ್ಶಿ ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಕೂರಿಸಿದರು” ಎಂದು ಟೇಶಿ ವೆಂಕಟೇಶ್ ದೂರಿದರು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com