'ಜೋಡೆತ್ತು' ಸಿನಿಮಾದಲ್ಲಿ ಅಭಿನಯಿಸಲ್ಲ: ಮಂಡ್ಯದಲ್ಲಿ ರಾಕಿಂಗ್ ಸ್ಟಾರ್ ಸ್ಪಷ್ಟನೆ

ಲೋಕಾಸಭೆ ಚುನಾವಣೆ ಸಮಯ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕಿಳಿದಿದ್ದ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತು ರಾಜಕೀಯ ನಾಯಕರು....
ಯಶ್
ಯಶ್
ಮಂಡ್ಯ: ಲೋಕಾಸಭೆ ಚುನಾವಣೆ ಸಮಯ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕಿಳಿದಿದ್ದ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತು ರಾಜಕೀಯ ನಾಯಕರು "ಜೋಡೆತ್ತು", "ಕಳ್ಳೆತ್ತು" ಎಂಬೆಲ್ಲಾ ಟೀಕಿಸಿದ್ದದ್ದನ್ನು ನೀವು ಕೇಳಿದ್ದೀರಿ. ಇದೀಗ ಅದೇ ಹೆಸರನ್ನಿಟ್ತು ಸಿನಿಮಾ ತಯಾರಿಸಲು ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಸಾಲಾಗಿ ನಿಂತಿದ್ದಾರೆ. ಈ ನಡುವೆ ರಾಕಿ ಬಾಯ್ ಯಶ್ ಮಾತ್ರ ತಾವು "ಜೋಡೆತ್ತು" ಶೀರ್ಷಿಕೆಯ ಚಿತ್ರದಲ್ಲಿ ನಟಿಸಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಅಭಿಮಾನಿಯೊಬ್ಬರ ಗೃಹಪ್ರವೇಶಕ್ಕೆ ಆಗಮಿಸಿದ್ದ ಯಶ್ ಸುಮಲತಾ ಪರ ನಾವು ಪ್ರಚಾರ ನಡೆಸಿದ್ದೇವೆ, ಮಂಡ್ಯ ಚುನಾವಣೆ ಮುಗಿದ ನಂತರ ನಾವು ಈ ಕಡೆ ತಲೆ ಹಾಕಿಲ್ಲ ಎಂಬ ಆರೋಪ ಸುಳ್ಳು. ಇಷ್ಟಕ್ಕೂ ನಾವೇನೂ ಇಲ್ಲಿನ ಅಭ್ಯರ್ಥಿಯಲ್ಲ. ಸುಮಲತಾ ಅಂಬರೀಶ್ ಇಲ್ಲಿನ ಅಭ್ಯರ್ಥಿ. ಅವರ ಪರ ಪ್ರಚಾರಕ್ಕೆ ಬಂದವರು ನಾವು. ಹಾಗಾಗಿ ಅಭ್ಯರ್ಥಿ ಸುಮಲತಾ ಈ ಕ್ಷೇತ್ರದಲ್ಲಿರುವುದು ಮುಖ್ಯ ಎಂದು ಹೇಳಿದ್ದಾರೆ. ಅಲ್ಲದೆ ತಾನು ಸಹ ಮತದಾನ ಮುಗಿದ ನಂತರ ಮೂರು-ನಾಲ್ಕು ಬಾರಿ ಈ ಕ್ಷೇತ್ರಕ್ಕೆ ಬಂದಿದ್ದಾಗಿ ಯಶ್ ಹೇಳಿದ್ದಾರೆ.
ಇನ್ನು ಮಂಡ್ಯ ಚುನಾವಣೆ ಫಲಿತಾಂಶದ ಕುರಿತು ಕೇಳಲಾಗಿ "ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಸುಮಕ್ಕ ಗೆಲುವಿಗೆ ಒಳ್ಳೆ ವಾತಾವರಣ ಇದೆ. ಅವರು ಗೆದ್ದರೆ ಜನರಿಗಾಗಿ ಉತ್ತಮ ಕೆಲಸ ಮಾಡಲಿದ್ದಾರೆ" ಎಂದು ಯಶ್ ಹೇಳಿದ್ದಾರೆ.
"ಜೋಡೆತ್ತು ಸಿನಿಮಾದಲ್ಲಿ ನಾನು ಅಭಿನಯಿಸುತ್ತಿಲ್ಲ. ದರ್ಶನ್ ನಂತಹಾ ದೊಡ್ಡ ಸ್ಟಾರ್ ನಟರೊಡನೆ ಸಿನಿಮಾ ಮಾಡಬೇಕಾದರೆ ಉತ್ತಮ ಕಥೆ ಸಿಕ್ಕಬೇಕು. ಒಳ್ಳೆ ಕಥೆ ಸಿಕ್ಕರೆ ನಾವಿಬ್ಬರೂ ಒಟ್ಟಾಗಿ ನಟಿಸಲು ಸಿದ್ದ " ರಾಕಿಬಾಯ್ ನುಡಿದರು.
ಇದಲ್ಲದೆ ಮಂಡ್ಯ ಮೈತ್ರಿ ಅಭ್ಯರ್ಥಿ ಸಿಎಂ ಪುತ್ರ ನಿಖಿಲ್ ಕುಮಾರ್ ಅವರಬಗ್ಗೆ ಟ್ರೋಲ್ ಆಗಿರುವ "ನಿಖಿಲ್ ಎಲ್ಲಿದ್ದಿಯಪ್ಪ" ಎಂಬ ನುಡಿಗಟ್ಟು ಸಹ ಈಗ ಸಿನಿಮಾ ಆಗಲು ತಯಾರಾಗಿದೆ. ಯಶ್ ಈ ಬಗ್ಗೆ ಮಾತನಾಡಿದ್ದು "ನಿಖಿಲ್ ಎಲ್ಲಿದ್ದಿಯಪ್ಪಾ ಸಿನಿಮಾಗೆ ಶುಭವಾಗಲಿ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com