ನನ್ನ ಮಗಳ ಮದುವೆ ಅದ್ಭುತವಾಗಿ, ಅದ್ಧೂರಿಯಾಗಿ ನಡೆಯಲಿದೆ: ರವಿಚಂದ್ರನ್

ಕ್ರೇಜಿಸ್ಟಾರ್ ರವಿಚಂದ್ರನ್ ಅಂದ್ರೆ ವಿಶೇಷ. ಚಿತ್ರಗಳ ಮೂಲಕ ಇದನ್ನು ಅವರು ಸಾಬೀತುಪಡಿಸಿದ್ದಾರೆ ಕೂಡ. ಹೀಗಿರುವಾಗ ಅವರ ಮಗಳು ಮದುವೆಯಾಗುವ ...
ರವಿಚಂದ್ರನ್ ಪುತ್ರಿ ಗೀತಾಂಜಲಿ
ರವಿಚಂದ್ರನ್ ಪುತ್ರಿ ಗೀತಾಂಜಲಿ
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಂದ್ರೆ ವಿಶೇಷ. ಚಿತ್ರಗಳ ಮೂಲಕ ಇದನ್ನು ಅವರು ಸಾಬೀತುಪಡಿಸಿದ್ದಾರೆ ಕೂಡ. ಹೀಗಿರುವಾಗ ಅವರ ಮಗಳು ಮದುವೆಯಾಗುವ ವೇದಿಕೆ, ಆಕೆಯ ವಸ್ತ್ರವಿನ್ಯಾಸ ಮೊದಲಾದ ಸಿದ್ಧತೆಗಳು ಕೂಡ ವಿಶೇಷವಾಗಿಯೇ ಇರಬೇಕಲ್ಲವೇ? 
ರವಿಚಂದ್ರನ್ ಮುದ್ದಿನ ಪುತ್ರಿ ಗೀತಾಂಜಲಿ ವಿವಾಹ ಇದೇ ತಿಂಗಳ 28, 29 ರಂದು ನಡೆಯಲಿದ್ದು, ಉದ್ಯಮಿ ಅಜಯ್ ಮಡದಿಯಾಗಲಿದ್ದಾರೆ. “ಮಗಳ ಮದುವೆ ಅದ್ದೂರಿಯಾಗಿ ನಡೆಯಲಿದೆ” ಎಂದು ರವಿಚಂದ್ರನ್ ತಿಳಿಸಿದ್ದಾರೆ. 
ಮಗಳ ಮದುವೆ ಕುರಿತಂತೆ ಮನದಾಳದ ಮಾತನ್ನು ಹಂಚಿಕೊಂಡಿರುವ ರವಿಚಂದ್ರನ್​“ಈ ಹಿಂದೆ ಯಾರೂ ಮಾಡಿರದ ರೀತಿಯಲ್ಲಿ ನನ್ನ ಮಗಳ ಮದುವೆಯನ್ನು ಅದ್ಭುತವಾಗಿ ಮಾಡುತ್ತೇನೆ. ಇದಕ್ಕಾಗಿ ವಿಶೇಷವಾದ ಗಾಜಿನ ವೇದಿಕೆ ಸಿದ್ಧವಾಗುತ್ತಿದ್ದು, ಕರಕುಶಲ ವಸ್ತುಗಳ ಮೂಲಕ ಶೃಂಗರಿಸಲಾಗುತ್ತದೆ. ವೇದಿಕೆ ನೋಡಿದಾಕ್ಷಣ ದಂಗಾಗುವಂತಿರುತ್ತದೆ” ಎಂದಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿಯಲ್ಲಿ ಮೇ 28ರಂದು ಆರತಕ್ಷತೆ ಹಾಗೂ ಮೇ 29ರಂದು ವಿವಾಹ ಮಹೋತ್ಸವ ಜರುಗಲಿದೆ. ಸಿನೆಮಾಗಳಲ್ಲಿ ಭರ್ಜರಿಯಾಗಿ ಸೆಟ್ ಹಾಕಿಸುವ ರವಿಚಂದ್ರನ್ ತಮ್ಮ ಮಗಳ ಮದುವೆಗೆ ಸುಮಾರು 40 ಕ್ಯಾಮೆರಾ ಸೆಟ್ ಅಪ್ ಮತ್ತು 10 ಸಾವಿರ ಜನ ಸೋಫಾದ ಮೇಲೆ ಕುಳಿತು ಆರಾಮವಾಗಿ ಮದುವೆ ನೋಡುವ ವ್ಯವಸ್ಥೆ ಮಾಡಿಸುತ್ತಿದ್ದಾರೆ.
ಮದುವೆಯ ಮನೆಯಲ್ಲಿ ನಾದಬ್ರಹ್ಮ ಹಂಸಲೇಖ ಮತ್ತು ಅವರ ತಂಡದಿಂದ ಸಂಗೀತ ಕಾರ್ಯಕ್ರಮವನ್ನು ಕೂಡ ಏರ್ಪಾಡು ಮಾಡಲಾಗಿದೆ, ಗೀತಾಂಜಲಿಗೆ ಬೇಕಾದುದೆಲ್ಲವನ್ನೂ ಕೊಡಿಸಿದ್ದೇನೆ.  ಅವುಗಳಿಗೆ ಇಷ್ಟಿಷ್ಟು ಖರ್ಚಾಗಿದೆ ಎಂದು ಹೇಳಿ ಬೆಲೆ ಕಟ್ಟುವುದು ನನಗಿಷ್ಟವಿಲ್ಲ. ಅದರೆ ಆನಂದಭಾಷ್ಪವೇ ಅವಳಿಗೆ ನೀಡುತ್ತಿರುವ ಅತ್ಯಮೂಲ್ಯ ಗಿಫ್ಟ್ ಎಂದು ರವಿಚಂದ್ರನ್ ಹೇಳಿದ್ದಾರೆ.
ಇಷ್ಟು ವರ್ಷ ನಮ್ಮ ಮನೆಯ ಮಹಾಲಕ್ಷ್ಮಿಯಂತಿದ್ದ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿದ್ದಾಳೆ ಎನಿಸಿದಾಗ, ನೋವು ಹಾಗೂ ಸಂತೋಷ ಒಟ್ಟೊಟ್ಟಿಗೆ ಧುತ್ತನೆ ಉದ್ಭವಿಸುತ್ತದೆ.  ಈ ಆಲೋಚನೆಯಲ್ಲಿಯೇ ತಂದೆ ಮತ್ತು ಮಗಳ ಬಾಂಧವ್ಯಕ್ಕೆ ಹಾಡೊಂದನ್ನು ಬರೆದು ರಾಗ ಸಂಯೋಜಿಸಿ ಮಗಳಿಗೆ ನೀಡುತ್ತಿದ್ದಾರೆ. “ಹಾಡನ್ನು ಕೇಳಿದ ಮಗಳು ನನ್ನೆದುರು ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. ಆದರೆ ನಾನಿಲ್ಲದಾಗ ಗಳಗಳನೆ ಕಣ್ಣೀರು ಸುರಿಸಿದಳಂತೆ. ಆದರೆ ನನ್ನ ಪತ್ನಿ ಮಾತ್ರ ಹಾಡು ಕೇಳಿ ಭಾವೋದ್ವೇಗಕ್ಕೆ ಒಳಗಾದರು ಎಂದು ರವಿಚಂದ್ರನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com