ಅಣ್ಣಾಮಲೈ ಜೀವನಾಧಾರಿತ ಚಿತ್ರಕ್ಕೆ ಸದ್ಯದಲ್ಲೇ 'ಟೈಟಲ್' ರಿಜಿಸ್ಟರ್

ಕರ್ನಾಟಕದ ಸಿಂಗಂ ಖ್ಯಾತಿಯ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ರಾಜೀನಾಮೆ ನಿರ್ಧಾರವನ್ನು ಬದಲಾಯಿಸಿಕೊಳ್ಳುವಂತೆ ಅವರ ಅಭಿಮಾನಿಗಳು ಒತ್ತಡ ಹೇರುತ್ತಿರುವ ಬೆನ್ನಲ್ಲೇ ಅವರ ಜೀವನಾಧಾರಿತ ಚಿತ್ರದ ಮಾತುಗಳು ಕೇಳಿಬರುತ್ತಿವೆ.
ಅಣ್ಣಾಮಲೈ
ಅಣ್ಣಾಮಲೈ

ಶಿವಮೊಗ್ಗ : ಕರ್ನಾಟಕದ ಸಿಂಗಂ ಖ್ಯಾತಿಯ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ರಾಜೀನಾಮೆ ನಿರ್ಧಾರವನ್ನು ಬದಲಾಯಿಸಿಕೊಳ್ಳುವಂತೆ ಅವರ ಅಭಿಮಾನಿಗಳು ಒತ್ತಡ ಹೇರುತ್ತಿರುವ ಬೆನ್ನಲ್ಲೇ  ಅವರ ಜೀವನಾಧಾರಿತ  ಚಿತ್ರದ ಮಾತುಗಳು ಕೇಳಿಬರುತ್ತಿವೆ.

ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಕಳೆದ ಕೆಲ ವರ್ಷಗಳಲ್ಲಿ ಮಾಡಿರುವ ಕೆಲಸಗಳನ್ನು ಆಧಾರವಾಗಿಟ್ಟುಕೊಂಡು ಅವರ ಕೆಲ ಸಹೋದ್ಯೋಗಿಗಳು ಚಿಂತನೆ ನಡೆಸಿದ್ದಾರೆ.

ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿ ಎಂ.ಎಚ್. ಉಮಾಶಂಕರ್ ಅಣ್ಣಾಮಲೈ ಕುರಿತ ಗೀತೆಯೊಂದನ್ನು ಬರೆದಿದ್ದಾರೆ. ಅಣ್ಣಾಮಲೈ ಅವರ ರಾಜೀನಾಮೆ ನಿರ್ಧಾರ ಕೇಳಿ ಆಘಾತವಾಯಿತು.ಅಂತಹ ಅಧಿಕಾರಿ ಕುರಿತ ಚಿತ್ರ ನಿರ್ಮಾಣಕ್ಕೆ ಟೈಟಲ್  ನೋಂದಾಯಿಸಲು ಚಿಂತಿಸಿದ್ದೇವೆ.ಇದಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಕೋರಲು ಚಿಂತನೆ ನಡೆಸಿರುವುದಾಗಿ ಅವರು ತಿಳಿಸಿದರು.

ಉಮಾಶಂಕರ್ ಈಗಾಗಲೇ ಹಲವು ಕನ್ನಡ ಸಿನಿಮಾಗಳಲ್ಲಿ ಗೀತೆಗಳನ್ನು ಬರೆದಿದ್ದಾರೆ. ಅಣ್ಣಾಮಲೈ ಬಗ್ಗೆ ಗೀತೆ ರಚಿಸುವಂತೆ ಹಿರಿಯ ಅಧಿಕಾರಿಗಳು ಕೇಳಿದ ಹಿನ್ನೆಲೆಯಲ್ಲಿ ಉಮಾಶಂಕರ್, ಅಣ್ಣಾಮಲೈ ಅವರ ಕುರಿತ ಗೀತೆ ಬರೆದಿದ್ದು, ಅದಕ್ಕೆ ಅಣ್ಣಾಮಲೈ ಅವರ ಚಿತ್ರ , ಸಂಗೀತ ಸಂಯೋಜಿಸಿ ಯೂ ಟ್ಯೂಬ್ ನಲ್ಲಿ ಹಾಕಿದ್ದಾರೆ. ಇದನ್ನು ನೂರಾರು ಜನರು ಮೆಚ್ಚಿಕೊಂಡಿದ್ದಾರೆ.

ಕರಾವಳಿ ಜಿಲ್ಲೆಯಲ್ಲಿ ಅನೇಕ ಯುವಕರು ಅಣ್ಣಾಮಲೈ ಅವರನ್ನು ರೋಲ್ ಮಾಡೆಲ್ ಆಗಿ  ಅನುಕರಿಸುತ್ತಿದ್ದು,  ಉಡುಪಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಅಣ್ಣಾಮಲೈ ಮಾಡಿದ್ದಂತಹ ಡ್ರಗ್ಸ್ ಮಾಫಿಯಾ ನಿಯಂತ್ರಣ, ಮಾದಕ ವಸ್ತು ಸೇವನೆ  ಬಳಸದಂತೆ ವಿದ್ಯಾರ್ಥಿಗಳಲ್ಲಿ ಅರಿವು ಮತ್ತಿತರ ವಿಚಾರಗಳನ್ನಿಟ್ಟುಕೊಂಡು ಕಥೆ ಮಾಡಬಹುದು ಎಂದು ಉಡುಪಿಯ ಡಾ. ಪ್ರಭಾತ್ ಕಲ್ಕೂರಾ ವಿವರಿಸಿದ್ದಾರೆ.

ಅಣ್ಣಾಮಲೈ ಅವರ ಜೀವನವೇ ಪ್ರೇರಣೆಯನ್ನುಂಟಮಾಡುತ್ತದೆ. ಉದ್ಯಮಿಯ ಮಗನಾಗಿದ್ದರೂ ಯಾವಾಗಲೂ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಪಬ್ಲಿಕ್ ರಿಲೇಷನ್ ನಲ್ಲಿ ಎಂಬಿಎ ಜೊತೆಗೆ  ಎಂಜಿನಿಯರಿಂಗ್ ಮುಗಿಸಿರುವ ಅಣ್ಣಾಮಲೈ, ನಗರ ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿಗಳ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ. ಅವರ ಕಥೆ ಅನೇಕರಿಗೆ ಪ್ರಭಾವ ಬೀರಲಿದೆ ಎಂದು ಅವರು ತಿಳಿಸಿದ್ದಾರೆ.

ಸಾಂಗ್ಲಿಯಾನ ನಂತರ ಅಂತಹ ಚಿತ್ರಗಳು ಕನ್ನಡ ಚಿತ್ರಗಳಲ್ಲಿ ಬಂದಿಲ್ಲ ಎಂದ ಅವರು, ಮತ್ತೋರ್ವ ಐಪಿಎಸ್ ಅಧಿಕಾರಿ ರವಿಚೆನ್ನಣ್ಣನವರ್ ಕುರಿತಾದ ಚಿತ್ರ ಮಾಡುವ ಬಗ್ಗೆಯೂ ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com