ಸಹೋದರ 'ಅಭಿ' ಸಿನಿಮಾ 'ಅಮರ್' ಯಶಸ್ವಿಯಾಗಲಿ: ನಿಖಿಲ್ ಕುಮಾರಸ್ವಾಮಿ ಶುಭ ಹಾರೈಕೆ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ ಕ್ಷೇತ್ರಗಳಲ್ಲಿ ಒಂದು ಮಂಡ್ಯ...
ಅಭಿಷೇಕ್, ಅಂಬರೀಷ್, ನಿಖಿಲ್ ಕುಮಾರಸ್ವಾಮಿ(ಸಂಗ್ರಹ ಚಿತ್ರ)
ಅಭಿಷೇಕ್, ಅಂಬರೀಷ್, ನಿಖಿಲ್ ಕುಮಾರಸ್ವಾಮಿ(ಸಂಗ್ರಹ ಚಿತ್ರ)
ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ ಕ್ಷೇತ್ರಗಳಲ್ಲಿ ಒಂದು ಮಂಡ್ಯ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾರ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಇಡೀ ಇಂಡಿಯಾದಲ್ಲಿಯೇ ಸುದ್ದಿಯಾಗಿತ್ತು.
ನಂತರ ಸುಮಲತಾ ಅವರು ಚುನಾವಣೆಯಲ್ಲಿ ಗೆದ್ದು ಬಂದರು.ಆದರೂ ಮಂಡ್ಯದ ಬಗ್ಗೆ ಇನ್ನೂ ಸುದ್ದಿ ಕಡಿಮೆಯಾಗಿಲ್ಲ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನಿಖಿಲ್ ಕುಮಾರಸ್ವಾಮಿ ಇಷ್ಟು ದಿನ ಪ್ರತಿಕ್ರಿಯಿಸಿರಲಿಲ್ಲ. ಆದರೆ, ನಿನ್ನೆ (ಬುಧವಾರ) ದಿವಂಗತ ಅಂಬರೀಶ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಅವರು, ಇಂದು ಅಭಿಷೇಕ್ ಅಂಬರೀಶ್ ಗೆ ವಿಶ್ ಮಾಡಿದ್ದಾರೆ. ಅಂಬರೀಶ್ ಹುಟ್ಟುಹಬ್ಬ ಹಾಗೂ ಅಭಿಷೇಕ್ ಅವರ 'ಅಮರ್' ಸಿನಿಮಾ ನಾಳೆ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಶುಭ ಹಾರೈಸಿರುವ ನಿಖಿಲ್ ಮಂಡ್ಯ ಚುನಾವಣಾ ಫಲಿತಾಂಶದ ಬಗ್ಗೆ ಮತ್ತು ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕೂಡ ಬರೆದಿದ್ದಾರೆ.
ನಾಳೆ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಮೊದಲ ಸಿನಿಮಾ 'ಅಮರ್' ಭಾರಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸುತ್ತಿದ್ದೇನೆ. ದಯವಿಟ್ಟು ಚಿತ್ರಮಂದಿರಗಳಿಗೆ ಹೋಗಿ ಆ ಸಿನಿಮಾವನ್ನು ನೋಡಿ. ಅಭಿ ಚೆನ್ನಾಗಿ ನಟಿಸಿರುತ್ತಾನೆ ಎನ್ನುವ ಭರವಸೆ ಇದೆ.'' ಎಂದು ತಮ್ಮ ಮಾತು ಶುರು ಮಾಡಿರುವ ನಿಖಿಲ್ ಮುಂದೆ ಚುನಾವಣೆ ಬಗ್ಗೆ ಬರೆದುಕೊಂಡಿದ್ದಾರೆ.
''ಇದು ಕೇವಲ ತೋರ್ಪಡಿಕೆಗಾಗಿ ಶುಭ ಕೋರುತ್ತಿದ್ದೇನೆ ಎಂದು ತಿಳಿದುಕೊಳ್ಳುವವರಿಗೆ ನಾನು ಏನು ಹೇಳಲು ಬಯಸುತ್ತಿದ್ದೇನೆಂದರೆ, ನಾನು ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುತ್ತೇನೆ. ಇದನ್ನೇ ನಾನು ಚುನಾವಣಾ ಪ್ರಚಾರದ ಸಮಯದಲ್ಲಿಯೂ ಒತ್ತಿ ಹೇಳುತ್ತಿದ್ದೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದಕ್ಕೆ ಶುಭ ಕೋರುತ್ತೇನೆ. ಯಾರನ್ನು ಟೀಕಿಸುವುದು ಬೇಡ, ಮಂಡ್ಯದ ಅಭಿವೃದ್ದಿಗಾಗಿ ನಾನು ಯಾರ ಜೊತೆಗಾದರೂ ಕೈ ಜೋಡಿಸಲು ಸಿದ್ಧ. ಈ ಚುನಾವಣೆಯ ಫಲಿತಾಂಶದ ಹೊಣೆಯನ್ನು ನಾನೇ ಹೊರುತ್ತೇನೆ. ಏನೇ ಟೀಕಿಸುವುದು ಇದ್ದರೂ ನನ್ನನ್ನೇ ಟೀಕಿಸಿ. ಎಮ್ ಎಲ್ ಎ, ಎಮ್ ಎಲ್ ಸಿ, ಕಾರ್ಯಕರ್ತರು, ಮುಖ್ಯಮಂತ್ರಿ ಹಾಗೂ ದೇವೇಗೌಡರನ್ನು ಟೀಕಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಗೆ  ಮುಖ್ಯಮಂತ್ರಿಗಳು 8,671 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಆ ಕೆಲಸಗಳು ಸರಿಯಾಗಿ ನಡೆಯುತ್ತಿವೆಯೇ ಎಂದು ಖಾತರಿಪಡಿಸಿಕೊಳ್ಳುತ್ತೇನೆ. ಏಕೆಂದರೆ, ಅದು ನಮ್ಮ ಕರ್ತವ್ಯ. ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದ 5 ಲಕ್ಷದ 76 ಸಾವಿರ 400 ಜನರಿಗೆ ಧನ್ಯವಾದ. ಮುಂದಿನ ದಿನದಲ್ಲಿ ಇನ್ನುಳಿದ ಮತದಾರರ ನಂಬಿಕೆ ಗಳಿಸಲು ಪ್ರಯತ್ನ ಮಾಡುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com