'ನಾತಿಚರಾಮಿ'ಗೆ 5 ರಾಷ್ಟ್ರಪ್ರಶಸ್ತಿ: ನಿರ್ಮಾಪಕ ಲಿಂಗದೇವರು ವಿರುದ್ಧ ಶೀಘ್ರ ತನಿಖೆಗೆ ಹೈಕೋರ್ಟ್ ಆದೇಶ

ಕನ್ನಡದ ‘ನಾತಿಚರಾಮಿ’ ಚಲನಚಿತ್ರಕ್ಕೆ 2018ನೇ ಸಾಲಿನಲ್ಲಿ 5 ರಾಷ್ಟ್ರ ಪ್ರಶಸ್ತಿ ದೊರೆತ ವಿವಾದಕ್ಕೆ ಸಂಬಂಧಿಸಿದಂತೆ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬಿ.ಎಸ್‌.ಲಿಂಗದೇವರು ವಿರುದ್ಧದ ಆರೋಪಗಳ ಬಗ್ಗೆ  ಶೀಘ್ರದಲ್ಲೇ ವಿಚಾರಣೆ ಪೂರ್ಣಗೊಳಿಸಿ ಅಗತ್ಯ ಕ್ರಮ ಜರುಗಿಸುವಂತೆ ಚಲನಚಿತ್ರೋತ್ಸವ ನಿರ್ದೇಶನಾಲಯಕ್ಕೆ  ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.  
ನಾತಿಚರಾಮಿ
ನಾತಿಚರಾಮಿ

ಬೆಂಗಳೂರು: ಕನ್ನಡದ ‘ನಾತಿಚರಾಮಿ’ ಚಲನಚಿತ್ರಕ್ಕೆ 2018ನೇ ಸಾಲಿನಲ್ಲಿ 5 ರಾಷ್ಟ್ರ ಪ್ರಶಸ್ತಿ ದೊರೆತ ವಿವಾದಕ್ಕೆ ಸಂಬಂಧಿಸಿದಂತೆ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬಿ.ಎಸ್‌.ಲಿಂಗದೇವರು ವಿರುದ್ಧದ ಆರೋಪಗಳ ಬಗ್ಗೆ  ಶೀಘ್ರದಲ್ಲೇ ವಿಚಾರಣೆ ಪೂರ್ಣಗೊಳಿಸಿ ಅಗತ್ಯ ಕ್ರಮ ಜರುಗಿಸುವಂತೆ ಚಲನಚಿತ್ರೋತ್ಸವ ನಿರ್ದೇಶನಾಲಯಕ್ಕೆ  ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ. 

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ–2018ರ ಸದಸ್ಯರಾಗಿದ್ದ ಬಿ.ಎಸ್. ಲಿಂಗದೇವರು ಅವರು ನಾತಿ ಚರಾಮಿ ಚಿತ್ರದ ನಿರ್ಮಾಣ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಆಕ್ಷೇಪಿಸಿ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ‌.ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ  ಪೀಠ ಈ ನಿರ್ದೇಶನ ನೀಡಿ, ವಿಲೇವಾರಿ ಮಾಡಿದೆ. 

ಚಿತ್ರಕ್ಕೆ ಐದು ಪ್ರಶಸ್ತಿ ನೀಡಿರುವ ನಿರ್ಧಾರ ಏಕಪಕ್ಷೀಯವಾಗಿದೆ ಮತ್ತು ಈ ಕ್ರಮ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ  ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. 

ವಿಚಾರಣೆ ವೇಳೆ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಂದ್ರ ಸರ್ಕಾರದ ಪರ ವಕೀಲರನ್ನು ಕೇಳಿದಾಗ ಅವರು, ಈಗಾಗಲೇ ವಿಚಾರಣೆ ಆರಂಭಗೊಂಡಿದೆ ಎಂದು ನವದೆಹಲಿಯ ಚಲನಚಿತ್ರೋತ್ಸವ ನಿರ್ದೇಶನಾಲಯದ ಕಾರ್ಯದರ್ಶಿ ಅವರ ಪ್ರಮಾಣ ಪತ್ರವನ್ನು ಸಲ್ಲಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿಯನ್ನು ವಿಲೇವಾರಿ ಮಾಡಿತು. 

ಪ್ರಕರಣವೇನು? ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಬಿ.ಎಸ್.ಲಿಂಗದೇವರು ಅವರು ನಾತಿಚರಾಮಿ ಚಿತ್ರದ ಸಂಕಲನಕ್ಕೆ ನೆರವಾದ ಅಕ್ಕ ಕಮ್ಯುನಿಕೇಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ನಿರ್ದೇಶಕರಾಗಿದ್ದಾರೆ. ಈ ಮೂಲಕ ಲಿಂಗದೇವರು ನಾತಿಚರಾಮಿ ಚಿತ್ರದ ನಿರ್ಮಾಣದಲ್ಲಿ ನೇರ ಪಾತ್ರ ವಹಿಸಿದ್ದಾರೆ. ಆದರೆ, ಈ ವಿಷಯವನ್ನು ಆಯ್ಕೆ ಸಮಿತಿಯಿಂದ ಮುಚ್ಚಿಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com