ಕೊರೋನಾ ಲಾಕ್'ಡೌನ್'ನಿಂದ ಸಂಕಷ್ಟದಲ್ಲಿ ಚಿತ್ರರಂಗ: ಭಾರೀ ನಷ್ಟದತ್ತ ಸ್ಯಾಂಡಲ್ವುಡ್

ಕೊರೋನಾ ಭೀತಿ, ಲಾಕ್'ಡೌನ್ ಸಂಕಷ್ಟದಿಂದ ಎಲ್ಲಾ ಕ್ಷೇತ್ರಗಳಂತೆಯೇ ಚಿತ್ರರಂಗದಲ್ಲೂ ಆರ್ಥಿಕ ಕುಸಿತ ದೊಡ್ಡ ಮಟ್ಟದಲ್ಲಿಯೇ ಆಗಿದೆ. ಚಿತ್ರರಂಗ ಎಂದಿನಂತೆ ಚೇತರಿಸಿಕೊಳ್ಳುವುದಕ್ಕೆ ಕನಿಷ್ಟ ಎರಡು ವರ್ಷಗಳಾದರೂ ಬೇಕು. ಲಾಕ್'ಡೌನ್ ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಪೆಟ್ಟು ನೇರವಾಗಿ ನಿರ್ಮಾಪಕರ ಮೇಲೆ ಬಿದ್ದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಭೀತಿ, ಲಾಕ್'ಡೌನ್ ಸಂಕಷ್ಟದಿಂದ ಎಲ್ಲಾ ಕ್ಷೇತ್ರಗಳಂತೆಯೇ ಚಿತ್ರರಂಗದಲ್ಲೂ ಆರ್ಥಿಕ ಕುಸಿತ ದೊಡ್ಡ ಮಟ್ಟದಲ್ಲಿಯೇ ಆಗಿದೆ. ಚಿತ್ರರಂಗ ಎಂದಿನಂತೆ ಚೇತರಿಸಿಕೊಳ್ಳುವುದಕ್ಕೆ ಕನಿಷ್ಟ ಎರಡು ವರ್ಷಗಳಾದರೂ ಬೇಕು. ಲಾಕ್'ಡೌನ್ ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಪೆಟ್ಟು ನೇರವಾಗಿ ನಿರ್ಮಾಪಕರ ಮೇಲೆ ಬಿದ್ದಿದೆ. 

ಲಾಕ್'ಡೌನ್ ಪರಿಣಾಮ ನಿರ್ಮಾಣ ಹಂತದಲ್ಲಿದ್ದ 100ಕ್ಕೂ ಹೆಚ್ಚು ಸಿನಿಮಾಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಬಿಗ್ ಬಜೆಟ್ ಚಿತ್ರಗಳೆಂದು ಹೇಳಲಾಗುತ್ತಿದ್ದ, ರಾಜ ವೀರ ಮದಕರಿ ನಾಯಕ, ಕೋಟಿಗೊಬ್ಬ 3, ರಾಬರ್ಟ್ ಹಾಗೂ ಯುವರರತ್ನ ಚಿತ್ರಗಳ ಮೇಲೆ ಲಾಕ್'ಡೌನ್ ಗಂಭೀರ ಪರಿಣಾಮ ಬೀರಿದೆ. 

ಲಾಕ್'ಡೌನ್ ನಿಂದ ಚಿತ್ರರಂಗಕ್ಕೆ ನೂರಾರು ಕೋಟಿಯಷ್ಟು ನಷ್ಟ ಎದುರಾಗಿದೆ. ಪೈರಸಿ ಹಾಗೂ ಚಿತ್ರಗಳು ಸೋರಿಕೆಯಾಗದಂತೆ ನೋಡಿಕೊಳ್ಳುವುದೇ ಇದೀಗ ನಿರ್ಮಾಪಕರಿಗೆ ಎದುರಾಗಿರುವ ದೊಡ್ಡ ಸವಾಲಾಗಿದೆ ಎಂದು ನಿರ್ಮಾಪಕ ಲಾಕ್ಲೈನ್ ವೆಂಕಟೇಶ್ ಹೇಳಿದ್ದಾರೆ. 

ಲಾಕ್'ಡೌನ್ ಅಂತ್ಯಗೊಂಡ ಬಳಿಕ ಕೂಡ ಪರಿಸ್ಥಿತಿ ಸುಧಾರಿಸಲು ಕಾಲಾವಕಾಶ ಬೇಕಾಗುತ್ತದೆ. ಚಿತ್ರ ನೋಡಲು ಜನರ ಬಳಿಯೇ ಹಣವಿಲ್ಲ. ಪರಿಸ್ಥಿತಿ ಸುಧಾರಿಸಿದರೂ ಜನರು ಸಿನಿಮಾ ಹಾಲ್'ಗೆ ಬಂದು ಹೆಚ್ಚೆಚ್ಚು ಜನರೊಂದಿಗೆ ಇದ್ದು ಸಿನಿಮಾ ನೋಡಲು ಬಯಸುತ್ತಾರೆಯೇ ಎಂಬುದು ಕೂಡ ಇದೀಗ ಪ್ರಶ್ನೆಯಾಗಿ ಉಳಿದಿದೆ. ತೆರಿಗೆ ಹಾಗೂ ಜಿಎಸ್'ಟಿ ಗಳು ಚಿತ್ರಗಳ ಮೇಲೆ ಭಾರೀ ಪ್ರಮಾಣದಲ್ಲಿ ಬಿದ್ದಿದ್ದೇ ಆದರೆ, ಶೇ.80-90ರಷ್ಟು ಚಿತ್ರರಂಗ ಮುಚ್ಚಿ ಹೋಗುತ್ತದೆ. ಪ್ರಸ್ತುತ ಜನರ ಮನಸ್ಸಿನಲ್ಲಿ ಆರೋಗ್ಯವಾಗಿರುವುದು, ಜೀವ ಉಳಿಸಿಕೊಳ್ಳುವುದಷ್ಟೇ ಇದೆ, ಆಸ್ತಿ ಹಾಗೂ ಹಣದ ಬಗ್ಗೆ ಚಿಂತೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. 
 
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಾಣಾಕರ್ ಮಾತನಾಡಿ, ಲಾಕ್'ಡೌನ್ ನಿಂದಾಗಿ ಚಿತ್ರರಂಗಕ್ಕೆ ರೂ.1000 ಕೋಟಿ ನಷ್ಟ ಎದುರಾಗಿದೆ. ವೈರಸ್ ಇಡೀ ದೇಶಕ್ಕೆ ಕಂಟಕವಾಗಿ ಪರಿಣಮಿಸಿದೆ. ಮುಂದೆ ಏನು ಮಾಡಬೇಕೆಂಬುದು ನಮಗೆ ಅರ್ಥವಾಗುತ್ತಿಲ್ಲ. ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com