ಲಾಕ್ ಡೌನ್ ನಿಂದ ಯಾರನ್ನೂ ಆಹ್ವಾನಿಸಲಾಗುತ್ತಿಲ್ಲ, ಕ್ಷಮೆಯಿರಲಿ ಎಂದ ಕುಮಾರಸ್ವಾಮಿ: ಇಂದು 'ನಿಖಿಲ್ ಕಲ್ಯಾಣ'

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ವಿವಾಹವನ್ನು ಅಂದುಕೊಂಡಂತೆ ನೆರವೇರಿಸಲು ಆಗುತ್ತಿಲ್ಲ. ಇದಕ್ಕಾಗಿ ಕುಮಾರಸ್ವಾಮಿಯವರು ಈಗಾಗಲೇ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.
ಅರಶಿನ ಶಾಸ್ತ್ರ ನೆರವೇರಿಸಿಕೊಂಡ ನಿಖಿಲ್ ಕುಮಾರಸ್ವಾಮಿ
ಅರಶಿನ ಶಾಸ್ತ್ರ ನೆರವೇರಿಸಿಕೊಂಡ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ವಿವಾಹವನ್ನು ಅಂದುಕೊಂಡಂತೆ ನೆರವೇರಿಸಲು ಆಗುತ್ತಿಲ್ಲ. ಇದಕ್ಕಾಗಿ ಕುಮಾರಸ್ವಾಮಿಯವರು ಈಗಾಗಲೇ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸದೆ ಅಭಿಮಾನಿಗಳು, ಬೆಂಬಲಿಗರು ಮನೆಯಿಂದಲೇ ತಮ್ಮ ಮಗನಿಗೆ ಹರಸಬೇಕೆಂದು ವಿಡಿಯೊ ಸಂದೇಶದ ಮೂಲಕ ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ.

ಮಾಜಿ ಸಚಿವ ಎಂ ಕೃಷ್ಣಪ್ಪ ಅವರ ಮೊಮ್ಮಗಳು ರೇವತಿಯನ್ನು ನಿಖಿಲ್ ಕುಮಾರಸ್ವಾಮಿ ಇಂದು ರಾಮನಗರದ ಅವರ ತೋಟದ ಮನೆಯಲ್ಲಿ ಎರಡೂ ಕುಟುಂಬಗಳ ಸುಮಾರು 50 ಜನರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ. ಕಳೆದ ರಾತ್ರಿ ಬೆಂಗಳೂರಿನಲ್ಲಿರುವ ಕುಮಾರಸ್ವಾಮಿ ಮನೆಯಲ್ಲಿ ಚಪ್ಪರದ ಪೂಜೆ ಅರಿಶಿನ ಶಾಸ್ತ್ರ ನೆರವೇರಿದ್ದು ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಮಗನಿಗೆ ಅರಿಶಿನದ ನೀರು ಹಾಕಿ ಶುಭ ಹಾರೈಸಿದ್ದಾರೆ.

ಅದ್ದೂರಿಯಾಗಿ ನೆರವೇರಿಸಲು ಆಯೋಜಿಸಿದ್ದ ನನ್ನ ಮಗನ ವಿವಾಹವನ್ನು ಸರಳವಾಗಿ 50-60 ಜನ ಆಪ್ತ ಬಂಧುಗಳ ಸಮ್ಮುಖದಲ್ಲಿ ಮಾಡುತ್ತಿದ್ದೇವೆ. ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಪಾಲಿಸುವುದು ನಮಗೆ ಸದ್ಯಕ್ಕೆ ಅನಿವಾರ್ಯವಾಗಿದೆ. ಅಭಿಮಾನಿಗಳು, ಬೆಂಬಲಿಗರು ಯಾರೂ ಬೇಸರ ಮಾಡಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

ಅವರಿಗೆ ಒಂದು ಖುಷಿಯ ವಿಚಾರವೆಂದರೆ ರಾಮನಗರ ಜಿಲ್ಲೆ ಕೊರೋನಾ ವೈರಸ್ ಗೆ ಹಸಿರು ವಲಯದಲ್ಲಿ ಬಂದಿರುವುದು. ಬೆಂಗಳೂರಿನ ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿರುವುದರಿಂದ ರಾಮನಗರ ತೋಟದ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಕೊರೋನಾ ವೈರಸ್ ಸಮಸ್ಯೆಯೆಲ್ಲ ಮುಗಿದ ಮೇಲೆ ಎಲ್ಲರನ್ನೂ ಆಹ್ವಾನಿಸಿ ದೊಡ್ಡ ಔತಣಕೂಟ ಏರ್ಪಡಿಸುತ್ತೇವೆ. ನಾವು ಬೇರೆಯವರಿಗೆ ಮಾದರಿಯಾಗಬೇಕು. ಈ ಹಿನ್ನೆಲೆಯಲ್ಲಿ ನಿಯಮವನ್ನು ಸರಿಯಾಗಿ ಪಾಲಿಸುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com