ಎರಡು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರ ಆಯ್ಕೆ!

ಗಿರೀಶ್ ಕಾಸರವಳ್ಳಿ ನಿರ್ದೇಶನದ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರವು ಎರಡು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಗಳಿಗೆ ಆಯ್ಕೆಯಾಗಿದೆ.

Published: 04th December 2020 05:46 PM  |   Last Updated: 04th December 2020 05:55 PM   |  A+A-


Girish Kasaravalli

ಗಿರೀಶ್ ಕಾಸರವಳ್ಳಿ

Posted By : Vishwanath S
Source : UNI

ಬೆಂಗಳೂರು: ಗಿರೀಶ್ ಕಾಸರವಳ್ಳಿ ನಿರ್ದೇಶನದ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರವು ಎರಡು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಗಳಿಗೆ ಆಯ್ಕೆಯಾಗಿದೆ.

ಖ್ಯಾತ ನಿರ್ಮಾಪಕ ಎಸ್.ವಿ ಶಿವಕುಮಾರ್ ಅವರು ಸಂಗಮ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ ಹೊಸವರ್ಷ 2021ರ ಜನವರಿ 16 ರಂದು ಢಾಕಾದಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಭಾಗವಹಿಸಲಿದೆ. ಜನವರಿಯಲ್ಲೇ ರೋಮ್ ನಲ್ಲಿ ನಡೆಯಲಿರುವ ಏಷ್ಯಾಟಿಕಾ ಚಲನ ಚಿತ್ರೋತ್ಸವದಲ್ಲಿಯೂ ಈ ಚಿತ್ರ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.

‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಬಹುಮುಖ ಪ್ರತಿಭೆಯ ಕವಿ, ಸಾಹಿತಿ, ನಾಟಕಕಾರ, ಜನಪ್ರಿಯ ಗೀತ ರಚನಕಾರ ಜಯಂತಕಾಯ್ಕಿಣಿಯವರ ‘ಹಾಲಿನ ಮೀಸೆ’ ಕಥೆಯನ್ನು ಆಧರಿಸಿದ್ದು. ಆ ಕಥೆಯಲ್ಲಿ ಬರುವ ಪಾತ್ರವೊಂದನ್ನು ಬೆಳೆಸಿ ಸಮಕಾಲೀನ ಸಾಮಾಜಿಕರ ಜ್ವಲಂತ ದ್ವಂದ್ವವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. 

ದಾಸಶ್ರೇಷ್ಠ ಪುರಂದರದಾಸರ ಹಾಡೊಂದರ ಶೀರ್ಷಿಕೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಈ ದ್ವಂದ್ವವನ್ನು ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತದೆ. ಸುಖವನ್ನು ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಶ್ಶಾಂತಿಗೆ ಎರವಾಗುತ್ತಿದೆಯೇ ಅನ್ನುವ ಈ ದಾಸರ ಪದದಲ್ಲಿ ವ್ಯಕ್ತವಾಗುವ ಆತಂಕವೂ ಚಿತ್ರದ ಸತ್ವವಾಗಿದೆ. 

ಬಾಲ್ಯದ ಹಳ್ಳಿಯ ವಾತಾವರಣ ತನ್ನ ಬೆಳವಣಿಗೆಗೆ ತೊಡಕಾಗಿದೆ ಎಂದು ಭಾವಿಸುವ ನಾಗರಾಜ ಸ್ಥಳಾಂತರವಾಗುವ ಕನಸು ಕಾಣುತ್ತಿರುತ್ತಾನೆ. ನಂತರ ದೊಡ್ಡವನಾಗಿ ನಗರ ಸೇರಿ ಗೃಹಸ್ಥನಾದ ನಾಗರಾಜ ಜೀವನದಲ್ಲಿ ಯಶಸ್ವಿಯಾಗುತ್ತಾ ಹೋದಂತೆ ಭವ ಜೀವನದ ಆಕರ್ಷಣೆ ಅವನನ್ನು ಬೇರೆಯೇ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ.

ದ್ವೀಪ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಹೆಚ್.ಎಂ.ರಾಮಚಂದ್ರ ಹಾಲ್ಕೆರೆ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಎಸ್.ಆರ್.ರಾಮಕೃಷ್ಣ ಅವರ ಸಂಗೀತವಿದೆ. ಎಸ್. ಗುಣ ಶೇಖರನ್ ಅವರ ಸಂಕಲನ ಇದ್ದು ಅಪೂರ್ವ ಕಾಸರವಳ್ಳಿ ಜಂಟಿ ನಿರ್ದೇಶನ ಇದೆ. ಅನನ್ಯ ಕಾಸರವಳ್ಳಿ ಅವರ ವಸ್ತ್ರ ವಿನ್ಯಾಸ, ಸಾವಂತ್, ಕಿರಣ್ ಕುಮಾರ್ ಹಾಗೂ ಯಶವಂತ ಯಾದವ್ ಅವರ ಸಹನಿರ್ದೇಶನ ಇದೆ. ಬಾಸುಮ ಕೊಡಗು ಅವರ ಕಲಾನಿರ್ದೇಶನ ರಮೇಶ್ ಬಾಬು ಅವರ ಪ್ರಸಾಧನ ಇವೆ. ತಾಂತ್ರಿಕ ನೆರವು ಮೋಹನ್ ಕಾಮಾಕ್ಷಿ ಯವರದು  ಮಕ್ಕಳ ಬದುಕಿನ ಮೂಲಕ ಅನಾವರಣಗೊಳ್ಳ್ಳುವ ಕಥಾ ಹಂದರದಲ್ಲಿ ನಾಲ್ಕು ಮಕ್ಕಳು ಹೃದಯಂಗಮವಾಗಿ ಅಭಿನಯಿಸಿದ್ದಾರೆ. 

ದೃಶಾ ಕೊಡಗು, ಆರಾಧ್ಯ, ಪ್ರವರ್ಥ ರಾಜು ಮತ್ತು ನಲ್ಮೆ. ಉಳಿದ ಮುಖ್ಯ ಪಾತ್ರಗಳಲ್ಲಿ ಪವಿತ್ರ, ಮಾಲತೇಶ್. ಕೆ.ಜಿ.ಕೃಷ್ಣಮೂರ್ತಿ, ಚೆಸ್ವಾ, ರಶ್ಮಿ, ಬಿ.ಎಂ,ವೆಂಕಟೇಶ್, ಪುಷ್ಪಾ ರಾಘವೇಂದ್ರ, ಸುಜಾತ ಶೆಟ್ಟಿ  ಮೊದಲಾದವರಿದ್ದಾರೆ. ಕರಾವಳಿಯ ಬದುಕನ್ನು ಕಟ್ಟಿಕೊಡುವ ಚಿತ್ರದ ಭಾಗವನ್ನು ಉಡುಪಿಯ ಸುತ್ತಮುತ್ತಲಿನ ಪರಿಸರದಲ್ಲೂ, ನಗರ ಜೀವನದ ಘಟನಾವಳಿಗಳನ್ನು ಬೆಂಗಳೂರಿನಲ್ಲೂ ಚಿತ್ರೀಕರಿಸಲಾಗಿದೆ.

2010 ರಲ್ಲಿ ತೆರೆಕಂಡ ಬಸಂತ ಕುಮಾರ್ ಪಾಟೀಲ್ ನಿರ್ಮಿಸಿದ ‘ಕೂರ್ಮಾವತಾರ’ ಚಿತ್ರದ ನಂತರ ಸಾಕ್ಷಚಿತ್ರಗಳ ನಿರ್ಮಾಣದತ್ತ ತೆರಳಿದ್ದ ಗಿರೀಶ ಕಾಸರವಳ್ಳಿಯವರು ಹತ್ತು ವರ್ಷಗಳ ನಂತರ ಪುನಃ ಕಥಾ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಇದು ಅವರ 15 ನೇ ಕಥಾ ಚಿತ್ರ. ಹಾಗೆಯೇ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸುತ್ತಾ ಬಂದಿರುವ ನಿರ್ಮಾಪಕ ಎಸ್.ವಿ ಶಿವಕುಮಾರರ 3 ನೇ ಕಥಾ ಚಿತ್ರವೂ ಇದಾಗಿದೆ. ಕೊರೋನಾ ಉಪಟಳ ನಿಯಂತ್ರಣಕ್ಕೆ ಬಂದ ನಂತರ ಚಿತ್ರ ಬಿಡುಗಡೆಯಾಗಲಿದೆಯಂತೆ.

Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp