ಆ್ಯಕ್ಟ್ 1978 ಬಳಿಕ ನಿರ್ದೇಶಕ ಮಂಸೋರೆ ಮುಂದಿನ ಪ್ಯಾನ್ ಇಂಡಿಯಾ ಚಿತ್ರದ ಹೆಸರು 'ರಾಣಿ ಅಬ್ಬಕ್ಕ'!

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಸೆಟ್ಟೇರುತ್ತಿದ್ದು, ನಿರ್ದೇಶಕ ಮನ್ಸೋರೆ ಈ ಬಹು ನಿರೀಕ್ಷಿತ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಅಬ್ಬಕ್ಕ ಚಿತ್ರದ ಪೋಸ್ಟರ್
ಅಬ್ಬಕ್ಕ ಚಿತ್ರದ ಪೋಸ್ಟರ್

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಸೆಟ್ಟೇರುತ್ತಿದ್ದು, ನಿರ್ದೇಶಕ ಮನ್ಸೋರೆ ಈ ಬಹು ನಿರೀಕ್ಷಿತ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಈ ಹಿಂದೆ ನಾತಿಚರಾಮಿ, ಹರಿವು, ನಾನು ಅವನಲ್ಲ, ಅವಳು ನಂತಹ ಸದಭಿರುಚಿಯ ಚಿತ್ರ ನೀಡಿದ್ದ ಮಂಸೋರೆ ಇತ್ತೀಚೆಗೆ ಆ್ಯಕ್ಟ್ 1978 ಎಂಬ ಚಿತ್ರದ ಮೂಲಕ ಮತ್ತೊಮ್ಮೆ ಚಿತ್ರ ಪ್ರೇಮಿಗಳ ರಸದೌತಣ ಬಡಿಸಿದ್ದರು. ಈ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಮಂಸೋರೆ ಮತ್ತೊಂದು ಬಹು ನಿರೀಕ್ಷಿತ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮಂಸೋರೆ 16ನೇ ಶತಮಾನದ ಐತಿಹಾಸಿಕ ಕಥೆಯನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದು, ಇದಕ್ಕಾಗಿ ಈಗಾಗಲೇ ಪ್ರೀಪ್ರೊಡಕ್ಷನ್ ಕೆಲಸ ಪ್ರಾರಂಭಿಸಿದ್ದಾರೆ. ಪೋರ್ಚುಗೀಸರ ವಿರುದ್ಧದ ಯುದ್ಧದ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದೆ. 

ಈಗಾಗಲೇ ಚಿತ್ರದ ಪೋಸ್ಟರ್ ಕೂಡ ಬಿಡುಗಡೆ ಆಗಿದ್ದು, ಕುತೂಹಲ ಕೆರಳಿಸಿದೆ. ಸಮುದ್ರದ ಮಧ್ಯೆ ದೊಡ್ಡ ಹಡಗು ತೋಯ್ದಾಡುತ್ತಿರುವ ದೃಶ್ಯ ಪೋಸ್ಟರ್‌ನಲ್ಲಿದ್ದು, ಸಮುದ್ರದಲ್ಲಿನ ಸಮರವನ್ನು ಸಿನಿಮಾದಲ್ಲಿ ಸೆರೆಹಿಡಿಯಲಿರುವುದನ್ನು ಈ ಪೋಸ್ಟರ್ ಸೂಚಿಸಿದೆ. ಚಿತ್ರಕ್ಕೆ ಅಬ್ಬಕ್ಕ ಎಂದು ಹೆಸರಿಡಲಾಗಿದ್ದು, ಬಹುಭಾಷೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. 

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಮಂಸೋರೆ, 'ಅಭಯ ರಾಣಿ ಎಂದೇ ಹೆಸರಾದ ಅಬ್ಬಕ್ಕ ಮಹಾನ್ ಸಾಹಸಿ. ಕಳೆದ ನಾಲ್ಕು ವರ್ಷಗಳಿಂದ ಅಬ್ಬಕ್ಕ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಬಂದಿದ್ದೇನೆ. ಈಗ ಸಿನಿಮಾ ಮಾಡಲು ಸಮಯ ಕೂಡಿ ಬಂದಿದೆ. ಆಕ್ಟ್ 1978 ಸಿನಿಮಾದ ತಂತ್ರಜ್ಞರು ಈ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ. ಪ್ರಸ್ತುತ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಅವರೂ ಕೂಡ ಚಿತ್ರದ ಕುರಿತು ಉತ್ಸುಕರಾಗಿದ್ದು, ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ ಎಂದು ಹೇಳಿದ್ದಾರೆ.

ಅಂತೆಯೇ ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿರಲಿದ್ದು, ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಲಿಗೆ. ಚಿತ್ರವನ್ನು ಕನ್ನಡ, ತಮಿಳು, ಮಲಯಾಳಂನಲ್ಲಿ ಚಿತ್ರೀಕರಿಸಲಾಗುತ್ತಿದ್ದು, ತೆಲುಗು, ಹಿಂದಿ ಮತ್ತು ತುಳಿವಿಗೆ ಡಬ್ಬಿಂಗ್ ಮಾಡಲಾಗುತ್ತದೆ. ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಾಹಣವಿರಲಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸೌಂಡ್ ಡಿಸೈನರ್ ಮಹಾವೀರ್ ಸಬಣ್ಣನವರ್, ಬರಹಗಾರ ವೀರೇಂದ್ರ ಮಲ್ಲಣ್ಣ, ಮತ್ತು ಕಥೆ ಮತ್ತು ಸಂಭಾಷಣೆ ಬರಹಗಾರ ಟಿ.ಕೆ. ದಯಾನಂದ್ ತಂಡದಲ್ಲಿರದ್ದಾರೆ. "ಪ್ರೊಡಕ್ಷನ್ ಹೌಸ್ ಮತ್ತು ಪಾತ್ರವರ್ಗದ ಹೆಚ್ಚಿನ ವಿವರಗಳನ್ನು ಜನವರಿಯಲ್ಲಿ ಬಹಿರಂಗಪಡಿಸಲಾಗುತ್ತದೆ" ಎಂದು ಮಂಸೋರೆ ಹೇಳಿದರು. "ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ನಾವು ಅದನ್ನು 2023 ರಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದೇವೆ ಎಂದು ಹೇಳಿದರು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com