ಕೃತಿಚೌರ್ಯ ತಪ್ಪಿಸಲು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ "ಸ್ಟೋರಿ ಬ್ಯಾಂಕ್"

"ಅದು ನಾನೇ ಬರೆದ ಕಥೆ - ಚಿತ್ರಕಥೆ, ಅದನ್ನು ಕದ್ದು ಸಿನೆಮಾ ಮಾಡಿದ್ದಾರೆ ಎಂಬ ಆರೋಪಗಳು ಚಿತ್ರರಂಗದಲ್ಲಿ ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ.

Published: 11th February 2020 05:17 PM  |   Last Updated: 11th February 2020 05:54 PM   |  A+A-


sunil-puranik

ಸುನೀಲ್ ಪುರಾಣಿಕ್

Posted By : Lingaraj Badiger
Source : UNI

ಬೆಂಗಳೂರು: "ಅದು ನಾನೇ ಬರೆದ ಕಥೆ - ಚಿತ್ರಕಥೆ, ಅದನ್ನು ಕದ್ದು ಸಿನೆಮಾ ಮಾಡಿದ್ದಾರೆ ಎಂಬ ಆರೋಪಗಳು ಚಿತ್ರರಂಗದಲ್ಲಿ ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ. ಇಂಥ ಕೃತಿಚೌರ್ಯ ತಪ್ಪಿಸಲು ಶೀಘ್ರದಲ್ಲೇ ಬ್ಯಾಂಕೊಂದು ಅಸ್ತಿತ್ವಕ್ಕೆ ಬರಲಿದೆ. 

ಕೆಲವು ಬಾರಿ ಚಿತ್ರಸಾಹಿತ್ಯ ಕೃತಿಚೌರ್ಯ ಆರೋಪಗಳು ನ್ಯಾಯಾಲಯದ ಮೆಟ್ಟಿಲು ಏರುತ್ತವೆ. ಇದರಿಂದ ಉಂಟಾಗುವ ನಷ್ಟವೂ ಅಪಾರ. ಕಷ್ಟಪಟ್ಟು ಕಥೆ ರಚಿಸಿದವರಿಗೂ ಅಪಾರ ಬಂಡವಾಳ ಸುರಿದು ಸಿನೆಮಾ ನಿರ್ಮಿಸಿದವರಿಗೂ ಭಾರಿ ನಷ್ಟ. ಸಿನೆಮಾ ಬಿಡುಗಡೆಗೆ ತಡೆಯಾಜ್ಞೆ ಬಂದರಂತೂ ನಷ್ಟದ ಪ್ರಮಾಣ ಏರುತ್ತಲೇ ಹೋಗುತ್ತದೆ. ಈ ವ್ಯಾಜ್ಯದಲ್ಲಿ ಅಸಲಿ ಕಥೆಗಾರರೂ ಬಸವಳಿದು ಹೋಗುತ್ತಾರೆ. ಮಾಧ್ಯಮದಲ್ಲಿಯೂ " ಅದು ನಂದೇ ಕಥೆ; ಅಲ್ಲಲ್ಲ ಅದು ನಂದೇ ಕಥೆ ಕದ್ದಿದ್ದಲ್ಲ" ಎಂಬ ಹೇಳಿಕೆ, ಪ್ರತಿ ಹೇಳಿಕೆಗಳು ರಾರಾಜಿಸುತ್ತಲೇ ಇರುತ್ತವೆ. 
ಇಂಥ ಕೃತಿಚೌರ್ಯಗಳನ್ನು ತಪ್ಪಿಸಲು ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ಸುನೀಲ್ ಪುರಾಣಿಕ್ "ಸ್ಟೋರಿ ಬ್ಯಾಂಕ್" ಪರಿಕಲ್ಪನೆಯನ್ನು ಸಾಕಾರಗೊಳಿಸುವ ಉದ್ದೇಶ ಹೊಂದಿದ್ದಾರೆ.

ಚಿತ್ರ ಸಾಹಿತಿ ತಮ್ಮ ಕಥೆ - ಚಿತ್ರಕಥೆಗಳನ್ನು ಅಕಾಡೆಮಿ ಕಚೇರಿಗೆ ತಂದು ನೀಡಿದರೆ ಅದನ್ನು ಪರಿಶೀಲಿಸಿ ದೃಢೀಕರಿಸಲಾಗುತ್ತದೆ. ಹೀಗೆ ದೃಢೀಕರಿಸಿದ ಪ್ರತಿಗಳಲ್ಲಿ ಒಂದು ಲೇಖಕರ ಬಳಿ ಮತ್ತೊಂದು ಅಕಾಡೆಮಿಯ ಸ್ಟೋರಿ ಬ್ಯಾಂಕಿನಲ್ಲಿ ಇರುತ್ತದೆ. ಮುಂದೊಮ್ಮೆ ವಿವಾದ ತಲೆದೋರಿದರೆ ಅಸಲಿ ಕಥೆ ಯಾರದ್ದು ಎಂದು ತಿಳಿಯಲು ಸಹಾಯಕ. ಆಗ ವಿವಾದ ಮುಂದುವರಿಯುವುದಿಲ್ಲ" ಎಂದು ಸುನೀಲ್ ಪುರಾಣಿಕ್ ವಿವರಿಸುತ್ತಾರೆ.

ಅಕಾಡೆಮಿ ಇಂಥ ಪರಿಕಲ್ಪನೆ ಜಾರಿಗೆ ತಂದರೆ ಆರ್ಥಿಕವಾಗಿ ಬಡವಾಗಿದ್ದು ಅತ್ಯುತ್ತಮ ಕಥೆ - ಚಿತ್ರಕಥೆ ರಚಿಸುವ ಪ್ರತಿಭಾವಂತರಿಗೆ ಅನುಕೂಲವಾಗುತ್ತದೆ. ಕೃತಿಚೌರ್ಯ ಮಾಡದೇ ಇದ್ದಾಗಲೂ ನಿರ್ಮಾಪಕರು - ನಿರ್ದೇಶಕರು ಅನಗತ್ಯವಾಗಿ ನಷ್ಟ ಅನುಭವಿಸದೇ ಇರುವ ಸ್ಥಿತಿಯೂ ನಿರ್ಮಾಣವಾಗುತ್ತದೆ. ಮುಖ್ಯವಾಗಿ ಇಮೇಜಿಗೆ ಧಕ್ಕೆಯಾಗುವ ಪರಿಸ್ಥಿತಿ ನಿವಾರಣೆಯಾಗುತ್ತದೆ.

ಆದಷ್ಟೂ ಶೀಘ್ರದಲ್ಲಿ "ಸ್ಟೋರಿ ಬ್ಯಾಂಕ್"  ಜಾರಿಗೆ ಬರಲಿದೆ.‌ ಇಂಥದೊಂದು ಪರಿಕಲ್ಪನೆಯನ್ನು ಮೊಟ್ಟಮೊದಲ ಬಾರಿಗೆ ಜಾರಿಗೊಳಿಸಿದ ಹೆಗ್ಗಳಿಕೆಯೂ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ದೊರೆಯುತ್ತದೆ.

"ನನಗೆ ತಿಳಿದ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಸ್ಟೋರಿ ಬ್ಯಾಂಕ್ ಇಲ್ಲ. ಇದು ಕರ್ನಾಟಕದಲ್ಲಿ ಜಾರಿಗೆ ಬಂದರೆ ಮಾದರಿ ಕೆಲಸವಾಗುತ್ತದೆ. ಇದರಿಂದ ವಿವಾದಗಳು ತಲೆದೋರುವುದು ನಿಲ್ಲುತ್ತದೆ ಎಂದು ಹೇಳಬಹುದೆಂದು ಸಿನೆಮಾ ರಂಗದ ಕುರಿತು ಅಪಾರ ಮಾಹಿತಿ ಇರುವ ಸದಾಶಿವ ಅಭಿಪ್ರಾಯಪಡುತ್ತಾರೆ.

Stay up to date on all the latest ಸಿನಿಮಾ ಸುದ್ದಿ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp