ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅನುರಣಿಸಲಿರುವ ಶಾಸ್ತ್ರೀಯ ಸಂಗೀತ

ನಗರದಲ್ಲಿ ಆಯೋಜಿತವಾಗಿರುವ ಅಂತರಾಷ್ಟೀಯ 12ನೇ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಂಗೀತ ಅನುರಣಿಸಲಿದ್ದು ತನ್ನ ವಿಶೇಷತೆಗಳಿಂದ  ದೇಶ - ವಿದೇಶಗಳ ಸಂಗೀತ - ಸಿನೆಮಾಸಕ್ತರನ್ನು ತನ್ನೆಡೆಗೆ ಸೆಳೆಯಲಿದೆ.  
ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅನುರಣಿಸಲಿರುವ ಶಾಸ್ತ್ರೀಯ ಸಂಗೀತ

ಬೆಂಗಳೂರು: ನಗರದಲ್ಲಿ ಆಯೋಜಿತವಾಗಿರುವ ಅಂತರಾಷ್ಟೀಯ 12ನೇ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಂಗೀತ ಅನುರಣಿಸಲಿದ್ದು ತನ್ನ ವಿಶೇಷತೆಗಳಿಂದ  ದೇಶ - ವಿದೇಶಗಳ ಸಂಗೀತ - ಸಿನೆಮಾಸಕ್ತರನ್ನು ತನ್ನೆಡೆಗೆ ಸೆಳೆಯಲಿದೆ. 

ಈ ಬಾರಿಯ ಬೆಂಗಳೂರು ಚಿತ್ರೋತ್ಸವದ ಪ್ರಧಾನ ವಿಷಯ " ಭಾರತೀಯ ಸಾಂಪ್ರದಾಯಿಕ ಸಂಗೀತ ಪರಂಪರೆ ಮತ್ತು ಸಿನೆಮಾ" ಇದರಿಂದಾಗಿ ಭಾರತೀಯ ಚಲನಚಿತ್ರ ರಂಗದಲ್ಲಿ ಇದುವರೆಗೂ ತೆರೆಕಂಡ ಸಂಗೀತ ಪ್ರಧಾನ ಚಿತ್ರಗಳಲ್ಲಿ ಅತ್ಯುತ್ತಮವಾದವುಗಳು ಮತ್ತೆ ಬೆಳ್ಳಿತೆರೆಯಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಲಿವೆ.

"ಭಾರತೀಯ ಸಂಗೀತ ಪರಂಪರೆಯ ದಿಗ್ಗಜರು, ಹಿಂದೂಸ್ತಾನಿ - ಕರ್ನಾಟಕ ಸಂಗೀತ ಪ್ರಧಾನವಾಗಿರುವ ಸಾಕಷ್ಟು ಸಿನೆಮಾಗಳು ತೆರೆಕಂಡ ಸಂದರ್ಭದಲ್ಲಿ ಗಳಿಸಿದ ಜನಪ್ರಿಯತೆ ಇಂದಿಗೂ ಮುಕ್ಕಾಗಿಲ್ಲ. ಕಾಲ ಎಷ್ಟೇ ಸರಿದರೂ ತಮ್ಮ ಗುಣಗಳಿಂದ ಅವು ಇಂದಿಗೂ ಜನಮನ್ನಣೆಗೆ ಪಾತ್ರವಾಗಿವೆ. ಇಂಥ ಸಿನೆಮಾಗಳು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವುದರಿಂದ ವಿಶೇಷವಾಗಿ ದೂರದ ರಾಜ್ಯಗಳು, ದೇಶಗಳ ಪ್ರೇಕ್ಷಕರಿಗೂ ಇಲ್ಲಿನ ಸಂಗೀತ ಪರಂಪರೆ ಪರಿಚಯವಾಗುತ್ತದೆ" ಎಂದು ಚಿತ್ರೋತ್ಸವ ಕಲಾ ನಿರ್ದೇಶಕ ವಿದ್ಯಾಶಂಕರ್ ಅಭಿಪ್ರಾಯಪಡುತ್ತಾರೆ.

ಕನ್ನಡದಲ್ಲಿ ಭೈರವೀ ಕೆಂಪೇಗೌಡರ ಜೀವನ ಆಧರಿಸಿದೆಂದು ಹೇಳಲಾದ "ಹಂಸಗೀತೆ" ಸಂಗೀತಗಾರನ ಶ್ರಮ ಬಿಂಬಿಸುವ "ಸಂಧ್ಯಾರಾಗ" ಸಂಗೀತಗಾರನ ಜೀವನದ ಏರಿಳಿತ ಚಿತ್ರಿಸುವ ಮಲೆಯ ಮಾರುತ" ಇಂದಿಗೂ ಪ್ರೇಕ್ಷಕರ ಎದೆಯಲ್ಲಿ ಹಚ್ಚಹಸಿರಾಗಿವೆ. ಹಾಗೆ ತೆಲುಗಿನ " ಶಂಕರಾಭರಣಂ" ಇವುಗಳು ಭಾಷೆಯ ಗಡಿದಾಟಿದ ಸಿನೆಮಾಗಳು. ಇವುಗಳಲ್ಲದೇ ತಮಿಳು, ಮಲೆಯಾಳಂ, ಹಿಂದಿ ಮತ್ತಿತ್ತರ ಭಾಷೆಗಳಲ್ಲಿಯೂ ಸಂಗೀತ ಪ್ರಧಾನ ಚಿತ್ರಗಳು ತೆರೆಕಂಡಿವೆ. ಇವುಗಳನ್ನು ಉತ್ತಮ ಸಂಗೀತ ರಸಸ್ವಾದನೆಗೆ ಅವಕಾಶವಿರುವ ಅತ್ಯಾಧುನಿಕ ಧ್ವನಿ - ಬೆಳಕು ವ್ಯವಸ್ಥೆ ಇರುವ ಚಿತ್ರಮಂದಿರದಲ್ಲಿ ವೀಕ್ಷಿಸುವುದು ಅಪೂರ್ವ ಅನುಭೂತಿ ನೀಡುತ್ತದೆ.

"ಈಗಾಗಲೇ ಇಂಥ ಸಿನೆಮಾಗಳಲ್ಲಿ ಆಯ್ದಪಟ್ಟಿ ವಿವರ ಸದ್ಯದಲ್ಲಿ ಚಿತ್ರೋತ್ಸವದ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುತ್ತದೆ. ಪ್ರೇಕ್ಷಕರು ತಮಗೆ ಬೇಕಾದವುಗಳನ್ನು ಆಯ್ಕೆ ಮಾಡಬಹುದು" ಎಂದು ವಿದ್ಯಾಶಂಕರ್ ವಿವರಿಸುತ್ತಾರೆ.

ಸಂಗೀತವೇ ಪ್ರಧಾನವಾದ ಸಿನೆಮಾಗಳನ್ನು ಹಿರಿತೆರೆಯಲ್ಲಿ ವೀಕ್ಷಿಸುವುದು ಕೂಡ ಖುಷಿಯನ್ನು ಹೆಚ್ಚಿಸುತ್ತದೆ. ಬೇರೆಬೇರೆ ಭಾಷೆಗಳಲ್ಲಿ ಬಂದಿರುವ ಇಂಥ ಚಿತ್ರವೀಕ್ಷಣೆ ವಿಶೇಷವಾಗಿ ಸಂಗೀತಗಾರರು, ಸಂಗೀತದ ವಿದ್ಯಾರ್ಥಿಗಳಿಗೆ ಸಂತಸದ ಸಂಗತಿ.

ಬಹು ವಿಶೇಷವಾಗಿ ಹೆಸರಾಂತ ಗಾಯಕಿ ಹೆಲನ್ ರೆಡ್ಟಿ, ಹಿಂದೂಸ್ತಾನಿ ಸಂಗೀತ ಸಾಮ್ರಾಟ ರಾಜೀವ್ ತಾರಾನಾಥ್ ಅವರುಗಳ ಕುರಿತ ಸಾಕ್ಷ್ಯಚಿತ್ರಗಳೂ ಪ್ರದರ್ಶನಗೊಳ್ಳಲಿವೆ.


ವರದಿ: ಕುಮಾರ ರೈತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com