ತಲ್ವಾರ್‌ನಲ್ಲಿ ಕೇಕ್‌ ಕತ್ತರಿಸಿದ ದುನಿಯಾ ವಿಜಿಗೆ ನೋಟಿಸ್ ನೀಡಲು ಡಿಸಿಪಿ ಸೂಚನೆ, ವಿಜಯ್ ಹೇಳಿದ್ದೇನು?

ತಮ್ಮ ಕೆಲಸಗಳ ಮೂಲಕ ಆದರ್ಶ ವ್ಯಕ್ತಿಯಾಗಬೇಕಾದವರೇ ವಿಕೃತಿ ಮೆರೆದರೆ ಅಂತಹವರನ್ನು ಏನೆಂದು ಕರೆಯಬೇಕು. ಹೌದು ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ತಮ್ಮ 46ನೇ ವರ್ಷ ಹುಟ್ಟುಹಬ್ಬದಂದು ತಲ್ವಾರ್ ನಲ್ಲಿ ಕೇಕ್ ಕತ್ತರಿಸಿದ ಹಿನ್ನೆಲೆಯಲ್ಲಿ ವಿಜಿ ವಿರುದ್ಧ ಪ್ರಕರಣ ದಾಖಲಿಸಲು ಗಿರಿನಗರ ಪೊಲೀಸರು ಮುಂದಾಗಿದ್ದಾರೆ.

Published: 20th January 2020 04:37 PM  |   Last Updated: 20th January 2020 05:23 PM   |  A+A-


Duniya Vijay

ದುನಿಯಾ ವಿಜಯ್

Posted By : Vishwanath S
Source : UNI

ಬೆಂಗಳೂರು: ತಮ್ಮ ಕೆಲಸಗಳ ಮೂಲಕ ಆದರ್ಶ ವ್ಯಕ್ತಿಯಾಗಬೇಕಾದವರೇ ವಿಕೃತಿ ಮೆರೆದರೆ ಅಂತಹವರನ್ನು ಏನೆಂದು ಕರೆಯಬೇಕು. ಹೌದು ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ತಮ್ಮ 46ನೇ ವರ್ಷ ಹುಟ್ಟುಹಬ್ಬದಂದು ತಲ್ವಾರ್ ನಲ್ಲಿ ಕೇಕ್ ಕತ್ತರಿಸಿದ ಹಿನ್ನೆಲೆಯಲ್ಲಿ ವಿಜಿ ವಿರುದ್ಧ ಪ್ರಕರಣ ದಾಖಲಿಸಲು ಗಿರಿನಗರ ಪೊಲೀಸರು ಮುಂದಾಗಿದ್ದಾರೆ.

ವೈರಲ್ ಆದ ವಿಡಿಯೋ‌, ಆಧರಿಸಿ ವಿಜಿಗೆ ನೋಟಿಸ್ ನೀಡುವಂತೆ ನಗರ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ಗಿರಿ‌ನಗರ ಪೊಲೀಸರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸರು ವಿಜಯ್ ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. 

ದುನಿಯಾ ವಿಜಯ್ ರವಿವಾರ ರಾತ್ರಿ ತಮ್ಮ 46ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ತಂದಿದ್ದ ಕತ್ತಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. 
ಈ ವೇಳೆ ತಮ್ಮ ‘ಸಲಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿದರು.  ಬರ್ತ್ ಡೇ ಸಂಭ್ರಮಾಚರಣೆ ಯಲ್ಲಿ  ವಿಜಿ ಅವರ ತಂದೆ, ತಾಯಿ ಹಾಗೂ ಎರಡನೇ ಪತ್ನಿ ಕೀರ್ತಿ ಪಾಲ್ಗೊಂಡಿದ್ದರು.

ದುನಿಯಾ ವಿಜಿ ಹುಟ್ಟುಹಬ್ಬದ ವೇಳೆ ನಡೆದ ಗಲಾಟೆ ಕೂಗಾಟ ಕತ್ತಿಯಲ್ಲಿ ಕೇಕ್ ಕಟ್ ಮಾಡಿದ  ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ ನಗರ ಪೊಲೀಸ್ ಆಯುಕ್ತರಿಗೆ  ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡುವ ಮೂಲಕ ದೂರು ನೀಡಿದ ಬೆನ್ನಲ್ಲೇ ಅವರ ಮೇಲೆ ಎಫ್‌ಐಆರ್  ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ದುನಿಯಾ ವಿಜಿ ಅವರು ಕೇಕ್ ಕತ್ತರಿಸಲು  ಬಳಸಿದ ಕತ್ತಿ ಹಾಗೂ ಅವರು ನೀಡುವ ಕಾರಣವನ್ನು ಪರಿಶೀಲಿಸಿ ಕಾನೂನು ತಜ್ಞರ ಸಲಹೆ ಪಡೆದು  ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಡಾ.ರೋಹಿಣಿ ಕಟೋಚ್ ಸೆಪಟ್  ತಿಳಿಸಿದ್ದಾರೆ.

ಕ್ಷಮೆ ಕೋರಿದ ವಿಜಿ

‘ಕೇಕ್ ಕತ್ತರಿಸುವ ಮೊದಲು ಯಾರೋ ನನ್ನ ಕೈಗೆ ಕತ್ತಿ ಕೊಟ್ಟರು. ನಾನು ಅದನ್ನು ಬಳಸಿ ಕೇಕ್ ಕತ್ತರಿಸಿದೆ. ಅದು ಖಂಡಿತವಾಗಿಯೂ  ಅಪರಾಧ. ನಾನು ಹಾಗೆ ಮಾಡಿದ್ದನ್ನು ನೋಡಿ ಯಾರೂ ಉದ್ರಿಕ್ತರಾಗಬಾರದು. ಅಂತಹ ಕೆಲಸವನ್ನು  ಯಾರೂ ಮಾಡಬಾರದು. ಆದ್ದರಿಂದ ನಾನು ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ವಿಜಯ್ ಕ್ಷಮೆ ಯಾಚಿಸಿದ್ದಾರೆ. ‘ನಾನು  ಮಾಡಿದ್ದು ಖಂಡಿತ ತಪ್ಪು. ಆದರೆ ಅದು ಹೇಗೆ ನಡೆಯಿತು ಎಂಬುದು ಗೊತ್ತಾಗುತ್ತಿಲ್ಲ. ಯಾರೋ  ಅಭಿಮಾನಿಗಳು ಕತ್ತಿ ಕೊಟ್ಟರು. ನಾನು ಕೇಕ್ ಕಟ್ ಮಾಡಿದೆ. ನನಗೆ ಗೊತ್ತಿಲ್ಲದೆ ಆಗಿರುವ  ತಪ್ಪು ಇದು. ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ’ ಎಂದು ಅವರು ಸಮಜಾಯಿಷಿ ನೀಡಿದರು.ಈ  ವಿಚಾರವಾಗಿ ಹೇಳಿಕೆ ಕೊಡುವಂತೆ ಪೊಲೀಸರು ಕರೆದರೆ, ತಾವು ಹೇಳಿಕೆ ನೀಡುವುದಾಗಿಯೂ ವಿಜಯ್ ಸ್ಪಷ್ಟಪಡಿಸಿದರು.

ಆಯುಕ್ತರಿಗೆ ದೂರು 
ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಕಷ್ಟು  ಅಭಿಮಾನಿಗಳು ಬಂದಿದ್ದರು. ಈ ವೇಳೆ ನನ್ನ ಕೈಗೆ ಯಾರು ಕತ್ತಿ ಕೊಟ್ಟರೋ ಗೊತ್ತಾಗಲಿಲ್ಲ ನನ್ನ ಗಮನಕ್ಕೆ ಬಾರದೇ ಎಡವಟ್ಟಾಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಯ್, ತುಂಬಾ ಖುಷಿಯಾಗುತ್ತಿದೆ. ಇದು  ನನ್ನ ಜನ್ಮದಿನವೆನ್ನುವುದಕ್ಕಿಂತ  ಸಲಗ ಚಿತ್ರ ತಂಡದ ಹುಟ್ಟುಹಬ್ಬ. ಸ್ನೇಹದಲ್ಲಿ ಬದುಕುವುದು ನನಗೆ ಇಷ್ಟ. ಇದು ಸಲಗದ ಹುಟ್ಟುಹಬ್ಬ ಎಂದು ಸಂತಸವ್ಯಕ್ತಪಡಿಸಿದರು. ಚಿತ್ರದ  ನಿರ್ದೇಶಕನಾದ ಮೇಲೆ ಮೊದಲ ಹುಟ್ಟುಹಬ್ಬ ಇದಾಗಿದೆ.  ಫೆಬ್ರವರಿ 14ಕ್ಕೆ ಮತ್ತೊಂದು  ಸಾಂಗ್ ಟ್ರೈಲರ್ ಬಿಡುಗಡೆ ಮಾಡುತ್ತೇವೆ. ನಮ್ಮ ಚಿತ್ರ ತಂಡವೇ ನನಗೆ ಬಲ ತಂದು ಕೊಟ್ಟಿದೆ  ಎಂದರು.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp