
ದರ್ಶನ್, ಸುದೀಪ್, ಪುನೀತ್
ಬೆಂಗಳೂರು: ಏಪ್ರಿಲ್ ತಿಂಗಳಲ್ಲಿ ಬಿಗ್ ಸ್ಟಾರ್ ಸಿನಿಮಾಗಳು ತೆರೆ ಮೇಲೆ ಬರುತ್ತಿದ್ದು, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ
ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಆದರೆ, ಚಿತ್ರತಂಡ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ
ಈ ಮಧ್ಯೆ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ ಬಹುನಿರೀಕ್ಷಿತ ರಾಬರ್ಟ್ ಚಿತ್ರ ಏಪ್ರಿಲ್ 9, ಶುಭ ಶುಕ್ರವಾರದಂದು ತೆರೆಗೆ ಅಪ್ಪಳಿಸಲಿದೆ.
ಇದೀಗ ಈ ಪಟ್ಟಿಗೆ ಶಿವ ಕಾರ್ತಿಕ್ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -3 ಚಿತ್ರ ಕೂಡಾ ಸೇರಿದೆ. ಏಪ್ರಿಲ್10 ರಂದು ಕೋಟಿಗೊಬ್ಬ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ. ಒಂದು ವೇಳೆ ಈ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ದರ್ಶನ್ ಹಾಗೂ ಸುದೀಪ್ ನಡುವೆ ಬಾಕ್ಸ್ ಆಫೀಸ್ ನಲ್ಲಿ ಭಾರೀ ಪೈಪೋಟಿ ಉಂಟಾಗಲಿದೆ.
ಈ ಎರಡು ಚಿತ್ರಗಳ ಶೂಟಿಂಗ್ ಮುಕ್ತಾಯವಾಗಿದ್ದು, ನಿರ್ಮಾಣ ನಂತರದ ಕಾರ್ಯದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ಚಿತ್ರ ಬಿಡುಗಡೆಯ ಅಧಿಕೃತ ದಿನಾಂಕ ಇನ್ನೂ ನಿಗದಿಯಾಗಿಲ್ಲ, ಸೆನ್ಸಾರ್ ಪ್ರಮಾಣ ಪತ್ರ ದೊರಕಿದ ಬಳಿಕ ದಿನಾಂಕ ನಿಗದಿಪಡಿಸಲಾಗುತ್ತದೆ.