ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಹಿರಿಯ ನಾಗರಿಕರು!

ಕಳೆದ ಒಂದು ವಾರದಿಂದ ಸಂಭ್ರಮದಿಂದ ನಡೆಯುತ್ತಿರುವ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಬುಧವಾರ ಸಂಜೆ ತೆರೆ ಬಿದ್ದಿದೆ. ಹಿರಿಯ ಜೀವಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿರುವುದು ಈ ಬಾರಿ ಚಿತ್ರೋತ್ಸವದ ವಿಶೇಷತೆ.
ಬೆಂಗಳೂರು ಚಿತ್ರೋತ್ಸವ
ಬೆಂಗಳೂರು ಚಿತ್ರೋತ್ಸವ

ಬೆಂಗಳೂರು: ಕಳೆದ ಒಂದು ವಾರದಿಂದ ಸಂಭ್ರಮದಿಂದ ನಡೆಯುತ್ತಿರುವ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಬುಧವಾರ ಸಂಜೆ ತೆರೆ ಬಿದ್ದಿದೆ. ಹಿರಿಯ ಜೀವಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿರುವುದು ಈ ಬಾರಿ ಚಿತ್ರೋತ್ಸವದ ವಿಶೇಷತೆ.

2019ರ ಬೆಂಗಳೂರು ಚಿತ್ರೋತ್ಸವದಲ್ಲಿ ಗಣನೀಯ ಸಂಖ್ಯೆಯಲ್ಲಿ ವೃದ್ಧರು ಭಾಗವಹಿದ್ದರು. ಇವರಿಗಾಗಿ ಪ್ರತ್ಯೇಕ ಸರದಿಯೂ ಇತ್ತು. ಜನಪ್ರಿಯ ಸಿನೆಮಾಗಳಿಗೆ ಇವರ ಸಂಖ್ಯೆ ಹೆಚ್ಚಾಗಿದ್ದರಿಂದ ಸಂಘಟಕರು ಮೂರನೇ ದಿನದ ನಂತರ ಪ್ರತ್ಯೇಕ ಸರದಿ ರದ್ದು ಮಾಡಿದ್ದರು. ಆದರೂ ಹಿರಿಯ ಜೀವಗಳ ಉತ್ಸಾಹವೇನೂ ಕುಗ್ಗಲಿಲ್ಲ. ಎಲ್ಲರ ಜೊತೆ ನಿಂತರು. ಸುಸ್ತಾದರೆ ನೆಲದ ಮೇಲೆ ಕುಳಿತು ಚಿತ್ರಮಂದಿರದೊಳಗೆ ಪ್ರವೇಶಕ್ಕಾಗಿ ಕಾಯುತ್ತಿದ್ದರು.

2020ರ ಚಿತ್ರೋತ್ಸವದಲ್ಲಿ ಇದೇ ಉತ್ಸಾಹ ಮುಂದುವರೆದಿದೆ. ವಿತರಣೆಯಾಗಿರುವ 11 ಸಾವಿರ ಪಾಸುಗಳಲ್ಲಿ ಶೇಕಡ 30ಕ್ಕಿಂತಲೂ ಹೆಚ್ಚು ಮಂದಿ 60 ದಾಟಿದವರಿದ್ದಾರೆ.

ಸಾಮಾನ್ಯ ಪಾಸುಗಳ ದರ 800 ರೂ. ವಯಸ್ಸು 60 ದಾಟಿದವರಿಗೆ ಶೇಕಡ 50ರಷ್ಟು ರಿಯಾಯತಿ ಇದೆ. ವಿಶೇಷತೆಯೆಂದರೆ ಆನ್ ಲೈನ್ ನಲ್ಲಿ ಬುಕ್ಕಿಂಗ್ ಆರಂಭವಾದ ಮೂರ್ನಾಲ್ಕು ದಿನಗಳಲ್ಲಿ ಹಿರಿಯ ಜೀವಗಳಿಗೆ ನಿಗದಿಪಡಿಸಿದ್ದ ಪಾಸುಗಳೆಲ್ಲವೂ ಸೋಲ್ಡ್ ಔಟ್ ಔಟ್ ಆಗಿದ್ದವು. " ನಂತರ ನಾನು ಮತ್ತು ನನ್ನ ಸ್ನೇಹಿತರು 800 ರೂ ನೀಡಿ ಆನ್ ಲೈನ್ ನಲ್ಲಿಯೇ ಪಾಸು ಪಡೆದೆವು. ನಮಗೆಲ್ಲರಿಗೂ ಅಂತರಾಷ್ಟ್ರೀಯ ಖ್ಯಾತಿಯ ಸಿನೆಮಾಗಳನ್ನು ನೋಡುವುದು ಮುಖ್ಯವಾಗಿತ್ತು ಎಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗಿ 5 ವರ್ಷ ಕಳೆದಿರುವ ರಾಜಪ್ಪ ಖುಷಿಯಿಂದ ಹೇಳಿದರು.

"ಇಂಥ ಚಿತ್ರೋತ್ಸವಗಳು ಯಾವಾಗಲೂ ಜರುಗುವುದಿಲ್ಲ. ಕಳೆದ ಆರು ವರ್ಷದಿಂದ ಭಾಗವಹಿಸುತ್ತಿದ್ದೇನೆ.‌ಆನ್ ಲೈನ್ ಬುಕ್ಕಿಂಗ್ ಶುರುವಾಗುತ್ತಿದ್ದಂತೆ ನನ್ನ ಪಾಸು ಕಾಯ್ದಿರಿಸಿದ್ದೆ ಎಂದು ಸೇವೆಯಿಂದ ನಿವೃತ್ತರಾಗಿರುವ ಪ್ರೊಫೆಸರ್ ಸುರೇಶ್ ಹೇಳಿದರು.

ಬೇರೆಬೇರೆ ರಾಷ್ಟ್ರಗಳಲ್ಲಿ ಸರ್ವಾಧಿಕಾರಿ ಆಡಳಿತದ ವಿರುದ್ಧ ಕ್ರಾಂತಿಗಳಾಗಿವೆ. ಇಂಥ ಚಿತ್ರಕಥೆ ಹೊಂದಿರುವ ಸಿನೆಮಾಗಳನ್ನು ನೋಡುವುದಕ್ಕೆ ವಿಶೇಷ ಆಸಕ್ತಿ ಎಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾಗಿರುವ 70 ವರ್ಷದ ವಿಠಲ ಶೆಟ್ಟಿ ಹೇಳಿದರು.

ನಗರದ ದೂರದೂರದ ಬಡಾವಣೆಗಳಿಂದ ಚಿತ್ರೋತ್ಸವ ನಡೆಯುತ್ತಿರುವ ಒರಾಯನ್ ಮಾಲ್‍ಗೆ ಬೆಳಗ್ಗೆ 9ಕ್ಕೆಲ್ಲ ಬರುವ ಹಿರಿಯರಲ್ಲಿ ಬಹುತೇಕರು ಯಾವ ಸಿನೆಮಾ ನೋಡಬೇಕು ಎಂದು ಹೋಮ್ ವರ್ಕ್ ಮಾಡಿ ಬರುತ್ತಿದ್ದರು. ಕೆಲವರು ಚಲನಚಿತ್ರ ಅಕಾಡೆಮಿ ವಿತರಿಸಿರುವ ಚಿತ್ರ ಸಾರಾಂಶದ ಕಿರು ಕೈಪಿಡಿ ಓದಿ ಸಿನೆಮಾ ಆಯ್ಕೆ ಮಾಡಿದರೆ ಇನ್ನೂ ಕೆಲವರು ತಮ್ಮ ಮಕ್ಕಳು, ಸ್ನೇಹಿತರ ಸಲಹೆ ಮೇರೆಗೆ ಚಿತ್ರ ಆಯ್ಕೆ ಮಾಡಿದ್ದರು.

ಸಿನೆಮಾಗಳ ಬಿಡುವಿನ ಕಿರು ಅವಧಿಯಲ್ಲಿ ಪರಿಚಿತರು, ಸ್ನೇಹಿತರು ಸೇರಿ ನೋಡಿದ - ನೋಡಲೇಬೇಕಾದ ಸಿನೆಮಾಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಇಂಥ ಸಂದರ್ಭಗಳಲ್ಲಿ ಮೊದಲಿನ ಆಯ್ಕೆ ರದ್ದು ಮಾಡಿ ಬೇರೆ ಸಿನೆಮಾ ನೋಡುತ್ತೇನೆ ಎಂದು ಖಾಸಗಿ‌ ಸಂಸ್ಥೆಯೊಂದರ ನಿವೃತ್ತ ನೌಕರ ದಿನೇಶ್ ನಸುನಗುತ್ತಾ ಹೇಳಿದರು.

ಈ ಎಲ್ಲ ಹಿರಿಯರಲ್ಲಿ ಹೆಚ್ಚಿನವರು ದಿನವೊಂದಕ್ಕೆ ಐದು ಸಿನೆಮಾ ನೋಡಿದರೆ ಇನ್ನು ಉಳಿದವರು ಕನಿಷ್ಠ ಎರಡು ಸಿನೆಮಾ ನೋಡಿ ಖುಷಿಯಿಂದ ಹಿಂದಿರುಗುತ್ತಿದ್ದರು.

-ಕುಮಾರ ರೈತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com