ನನ್ನ ಪತ್ನಿಗೆ ಮಾಟ, ಮಂತ್ರ ಮಾಡಿ ವಶೀಕರಣ ಮಾಡಿದ್ದಾರೆ: ಚಿತ್ರ ಸಾಹಿತಿ ಕೆ ಕಲ್ಯಾಣ್ ಆರೋಪ

ೆನನ್ನ ಪತ್ನಿಗೆ ಇಂದಿಗೂ ನನ್ನ ಮೇಲೆ ಪ್ರೀತಿ, ಗೌರವವಿದೆ, ನನಗೂ ಆಕೆಯ ಮೇಲೆ ಪತ್ನಿ ಎಂಬ ಗೌರವ, ಪ್ರೀತಿಯಿದ್ದು ನಾವು ಚೆನ್ನಾಗಿಯೇ ಇದ್ದೇವೆ. ಇನ್ನು ಮುಂದೆಯೂ ಒಟ್ಟಾಗಿ ಬದುಕಲು ನಾನು ಸಿದ್ದನಿದ್ದೇನೆ, ಆಕೆ ಒಳ್ಳೆಯವಳು ಎಂದೇ ನನ್ನ ಅಭಿಪ್ರಾಯ, ಎಲ್ಲವನ್ನೂ ಕೂತು ಮಾತುಕತೆ ನಡೆಸಿ ಸಣ್ಣ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕಿದೆ ಎಂದು  ಚಿತ್ರಸಾಹಿತಿ ಕೆ ಕಲ್ಯಾಣ್ ಹೇ
ಚಿತ್ರ ಸಾಹಿತಿ ಕೆ ಕಲ್ಯಾಣ್
ಚಿತ್ರ ಸಾಹಿತಿ ಕೆ ಕಲ್ಯಾಣ್

ಬೆಳಗಾವಿ: ನನ್ನ ಮದುವೆಯಾಗಿ 15 ವರ್ಷಗಳ ಮೇಲಾಗಿದೆ, ಇಷ್ಟು ದಿನ ಇಲ್ಲದ ದೂರು, ಆರೋಪ ಈಗ ಕಳೆದ 8-10 ತಿಂಗಳಿನಿಂದ ಏಕೆ, ಅಂದರೆ ನನ್ನ ಪತ್ನಿಯ ನಡವಳಿಕೆಯಲ್ಲಿ ಇತ್ತೀಚೆಗೆ ಬದಲಾವಣೆಯಾಗಿದೆ ಎಂದು ಚಿತ್ರ ಸಾಹಿತಿ ಕೆ ಕಲ್ಯಾಣ್ ಆರೋಪಿಸಿದ್ದಾರೆ.

ಚಿತ್ರಸಾಹಿತಿ ಕಲ್ಯಾಣ್ ದಾಂಪತ್ಯ ಬಾಳಲ್ಲಿ ಬಿರುಕು, ಅವರ ಪತ್ನಿ ಅಶ್ವಿನಿ ಅವರ ಮೇಲೆ ದೈಹಿಕ ಮತ್ತು ಮಾನಸಿಕ ಕಿರುಕುಳ, ಹಲ್ಲೆ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ವಿಚ್ಛೇದನ ಕೋರಿದ್ದಾರೆ ಎಂದು ನಿನ್ನೆ ಸುದ್ದಿಯಾಗಿತ್ತು.

ಇದರ ಬಗ್ಗೆ ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಕರೆದ ಕೆ ಕಲ್ಯಾಣ್ ಎಲ್ಲವನ್ನೂ ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ. ಬೆಳಗಾವಿ ಮೂಲದ ಪತ್ನಿಯ ತಂದೆ-ತಾಯಿ ನಮ್ಮ ಬೆಂಗಳೂರು ಮನೆಗೆ ಮನೆಗೆಲಸಕ್ಕೆಂದು ಗಂಗಾ ಕುಲಕರ್ಣಿ ಎಂಬುವವರನ್ನು ಕರೆಸಿಕೊಂಡ ನಂತರ ನನ್ನ ಪತ್ನಿಯ ವರ್ತನೆಯಲ್ಲಿ ಬದಲಾವಣೆಯಾಯಿತು. ಅವರು ನನ್ನ ಪತ್ನಿ ಮೇಲೆ ಮಾಟ-ಮಂತ್ರ ಮಾಡಿದ್ದಾರೆ ಎಂದು ನನಗೆ ಸಂಶಯ ಬರುತ್ತಿದೆ ಎಂದು ಕಲ್ಯಾಣ್ ಆರೋಪಿಸಿದ್ದಾರೆ.

ನನ್ನ ಪತ್ನಿಗೆ ಇಂದಿಗೂ ನನ್ನ ಮೇಲೆ ಪ್ರೀತಿ, ಗೌರವವಿದೆ, ನನಗೂ ಆಕೆಯ ಮೇಲೆ ಪತ್ನಿ ಎಂಬ ಗೌರವ, ಪ್ರೀತಿಯಿದ್ದು ನಾವು ಚೆನ್ನಾಗಿಯೇ ಇದ್ದೇವೆ. ಇನ್ನು ಮುಂದೆಯೂ ಒಟ್ಟಾಗಿ ಬದುಕಲು ನಾನು ಸಿದ್ದನಿದ್ದೇನೆ, ಆಕೆ ಒಳ್ಳೆಯವಳು ಎಲ್ಲವನ್ನೂ ಕೂತು ಮಾತುಕತೆ ನಡೆಸಿ ಸಣ್ಣ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಅಶ್ವಿನಿ ಅಪ್ಪ ಅಮ್ಮನ ಆಸ್ತಿ ಮೇಲೆ ನನಗೆ ಯಾವ ವ್ಯಾಮೋಹ, ಆಸೆಯೂ ಇಲ್ಲ, ಇದ್ದಿದ್ದರೆ ನಾವು ಚೆನ್ನಾಗಿದ್ದ ಸಂದರ್ಭದಲ್ಲಿ ನನಗೆ ಕೇಳಿ ತೆಗೆದುಕೊಳ್ಳಬಹುದಾಗಿತ್ತು. ನಾನು ನನ್ನ ಪತ್ನಿಗೆ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದರೆ ಇಷ್ಟು ವರ್ಷ ಸಂಸಾರ ನಡೆಸಲು ಸಾಧ್ಯವೇ, ಅವರು ನನ್ನೊಂದಿಗೆ ಜೀವನ ಮಾಡಲು ಸಾಧ್ಯವಿದೆಯೇ, ಇದೆಲ್ಲವೂ ಗಂಗಾ ಕುಲಕರ್ಣಿ ಮತ್ತು ಅವರು ನಮ್ಮ ಮನೆಗೆ ಕರೆಸಿಕೊಂಡ ಶಿವಾನಂದ ವಾಲಿ ಎಂಬ ಗುರೂಜಿಯಿಂದಾಗಿ ಆಯಿತು ಎಂದು ಆರೋಪಿಸಿದ್ದಾರೆ.

ಜನವರಿಯಲ್ಲಿ ಬೆಳಗಾವಿಗೆ ಬಂದ ಪತ್ನಿ ಮತ್ತು ಅತ್ತೆ ವಾಪಸ್ ಬೆಂಗಳೂರಿಗೆ ಬರಲಿಲ್ಲ. ಜನವರಿ 10ರ ನಂತರ ಸಂಪರ್ಕಕ್ಕೂ ಸಿಗಲಿಲ್ಲ. ಬೆಳಗಾವಿಗೆ ಹೋಗಿ ವಿಚಾರಿಸಿದೆ. ಆದರೆ ಅತ್ತೆ ಮತ್ತು ಗಂಗಾ ಕುಲಕರ್ಣಿ ಪತ್ನಿಯನ್ನು ನೋಡಲು ಬಿಡಲಿಲ್ಲ. ಅವರು ಮನೆಯಲ್ಲಿ ವಿಚಿತ್ರವಾಗಿ ಪೂಜೆ ಮಾಡುತ್ತಿದ್ದರು, ನಾನು ಬೆಂಗಳೂರಿಗೆ ವಾಪಸ್ಸಾದೆ. ಇದಾದ ಬಳಿಕ  ಏಕಾಏಕಿ ಸಂಪರ್ಕಕ್ಕೆ ಸಿಗಲಿಲ್ಲ.

ಹುಡುಕಿದಾಗ ಮನೆಯೊಂದರಲ್ಲಿ ಕಳೆದ ಜೂನ್ 5ರಂದು ಸಿಕ್ಕರು, ನನ್ನ ಪತ್ನಿಯ ಕೊರಳಲ್ಲಿ ಮಾಂಗಲ್ಯ ಸರ ಮತ್ತು ಕಾಲಿನಲ್ಲಿ ಕಾಲುಂಗುರ ಇರಲಿಲ್ಲ. ಏಕೆ ಇಲ್ಲ ಎಂದು ಪತ್ನಿಯನ್ನು ಕೇಳಿದೆ, ಅದು ಇದ್ದರೆ ಮಾತ್ರ ಗಂಡ-ಹೆಂಡತಿನಾ ಎಂದು ಕೇಳಿದಳು. ಅತ್ತೆ ಆಕೆಯನ್ನು ಒಳಗೆ ಕರೆದುಕೊಂಡು ಹೋಗಿ ಹಣೆಗೆ ವಿಚಿತ್ರವಾಗಿ ಕುಂಕುಮ ಹಚ್ಚಿ ಕರೆತಂದರು. ಅದಾದ ನಂತರ ಪತ್ನಿ ನನ್ನನ್ನು ಅಪರಿಚಿತಳಂತೆ ನೋಡಲು ಆರಂಭಿಸಿದಳು.

ಮಾಟ, ಮಂತ್ರ: ನನ್ನ ಹೆಂಡತಿಗೆ ಕೊಡಿಸಿದ ಆಭರಣ, ಒಡವೆ, ಹಣವನ್ನು ಶಿವಾನಂದ ವಾಲಿ ಕಿತ್ತುಕೊಂಡಿದ್ದಾರೆ. ನನ್ನ ಪತ್ನಿ ಅಕೌಂಟಿಂದ ಹಣ ವರ್ಗಾವಣೆ ಮಾಡಲಾಗಿದೆ. ಗಂಗಾ ಕುಲಕರ್ಣಿ ಬಂದ ಮೇಲೆ ನನ್ನ ಪತ್ನಿಯ ವರ್ತನೆಯಲ್ಲಿ ಬದಲಾವಣೆ ಆಯಿತು, ಆಕೆ ಮತ್ತು ಆಕೆಯ ತಾಯಿ ನಮ್ಮ ಅತ್ತೆ ದೇವರ ಮನೆಯಲ್ಲಿ ಪೂಜೆಗೆ ಕುಳಿತು ನಿಂಬೆಹಣ್ಣು ಇಟ್ಟು ಪೂಜೆ ಮಾಡುತ್ತಿದ್ದರು, ಮಾಟ, ಮಂತ್ರ ಮಾಡಿ ನನ್ನ ಪತ್ನಿಯನ್ನು ವಶೀಕರಣ ಮಾಡಿದ್ದಾರೆ, ಪೂಜೆ, ವಶೀಕರಣ ಮಾಡಿ ಶಿವಾನಂದ ವಾಲಿ ಅತ್ತೆಯವರ ಆಸ್ತಿಗಳನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.

ಶೀಘ್ರ ಒಂದಾಗಿ ಹಾಡು ಸಂಯೋಜಿಸಿ ಪ್ರಸ್ತುತಪಡಿಸುತ್ತೇವೆ: ನಾನು ಮತ್ತು ಪತ್ನಿ ಶೀಘ್ರ ಒಂದಾಗುತ್ತೇವೆ ಎಂಬ ವಿಶ್ವಾಸ ನನಗಿದೆ. ನನ್ನ ಪತ್ನಿ ಗಾಯಕಿ, ನಾನು ಹಾಗೂ ಆಕೆ ಗೀತೆ ರಚಿಸಿ ಸಂಯೋಜಿಸಿ ಬೆಳಗಾವಿಯಲ್ಲಿಯೇ ಸುದ್ದಿಗೋಷ್ಠಿಯಲ್ಲಿ ಪ್ರಸ್ತುತಪಡಿಸುತ್ತೇವೆ. ನನ್ನೊಂದಿಗೆ ಮುಕ್ತವಾಗಿ ಮಾತನಾಡಿದರೆ ಆಕೆಯ ವಿರಸವೆಲ್ಲವೂ ಹೊರಟುಹೋಗುತ್ತದೆ. ಅದಕ್ಕೆ ಮನೆಯವರು ಬಿಡುತ್ತಿಲ್ಲ, ವಿಚಿತ್ರ ಭಯ ಆಕೆಯನ್ನು ಕಾಡುತ್ತಿದೆ ಎಂದು ನನಗೆ ಅನಿಸುತ್ತಿದೆ ಎಂದರು.

ಪತ್ನಿ ಮೇಲೆ ಪ್ರಭಾವ ಬೀರಿ ನನ್ನ ವಿರುದ್ಧ ಆರೋಪ ಮಾಡಿದರೆ ಮಾನನಷ್ಠ ಮೊಕದ್ದಮೆ ಹೂಡುತ್ತೇನೆ ಎಂದು ಕೂಡ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com