ಹಿರಿಯ ರಂಗಕರ್ಮಿಗಳಿಗೆ ಸಂಚಯ ಕೇರ್ಸ್ ನೆರವು

ಕೋವಿಡ್-19 ಅನೇಕ ರಂಗಗಳಲ್ಲಿ ದುಡಿಯುತ್ತಿರುವ ಜನರ ಪಾಲಿಗೆ ಎರಡು ಅಲುಗಿನ ಕತ್ತಿಯಂತಾಗಿದೆ. ಒಂದೆಡೆ ಜೀವ ಉಳಿಸಿಕೊಳ್ಳುವ ಪ್ರಶ್ನೆಯಾದರೆ ಮತ್ತೊಂದೆಡೆ ಜೀವನ ನಿರ್ವಹಣೆಯ ಪ್ರಶ್ನೆ ಕಾಡುತ್ತಿದೆ.
ಸಂಚಯ ಕೇರ್ಸ್
ಸಂಚಯ ಕೇರ್ಸ್

ಕೋವಿಡ್-19 ಅನೇಕ ರಂಗಗಳಲ್ಲಿ ದುಡಿಯುತ್ತಿರುವ ಜನರ ಪಾಲಿಗೆ ಎರಡು ಅಲುಗಿನ ಕತ್ತಿಯಂತಾಗಿದೆ. ಒಂದೆಡೆ ಜೀವ ಉಳಿಸಿಕೊಳ್ಳುವ ಪ್ರಶ್ನೆಯಾದರೆ ಮತ್ತೊಂದೆಡೆ ಜೀವನ ನಿರ್ವಹಣೆಯ ಪ್ರಶ್ನೆ ಕಾಡುತ್ತಿದೆ. 

ರಂಗಭೂಮಿ ಕಲಾವಿದರೂ ಸಹ ಈ ಎರಡು ಅಲುಗಿನ ಕತ್ತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೆ ಅದೆಷ್ಟೋ ಮಂದಿ ಹಿರಿಯ ರಂಗಕರ್ಮಿಗಳ ಪಾಲಿಗೆ ಆಶಾಕಿರಣವಾಗಿದೆ ರಂಗಭೂಮಿಯ ತಂಡ "ಸಂಚಯ" ಕೈಗೊಂಡಿರುವ ಸಮಾಜಮುಖಿ ನಡೆ.

ಇತ್ತೀಚಿನ ದಿನಗಳಲ್ಲಿ ನಾಟಕ ಪ್ರದರ್ಶನಗಳಿಲ್ಲದೇ ಜೀವನ ನಿರ್ವಹಣೆಗೆ ಸಮಸ್ಯೆ ಎದುರಿಸುತ್ತಿರುವ ಹಿರಿಯ ರಂಗಕರ್ಮಿಗಳಿಗೆ ಸಂಚಯ ಕೇರ್ಸ್ (Sanchaya Cares) ಕಾರ್ಯಕ್ರಮದ ಮೂಲಕ ಕನಿಷ್ಟ ಇನ್ನೆರಡು ತಿಂಗಳು 3,000 ರೂಪಾಯಿ ಆರ್ಥಿಕ ನೆರವು ನೀಡಲು ಸಂಚಯ ರಂಗ ತಂಡ ಮುಂದಾಗಿದೆ.

"ಸಂಚಯ ತಂಡ" ತನ್ನ ಜನಪ್ರಿಯ ಈ ನಾಟಕಗಳ ಗುಚ್ಛವನ್ನು ರೆಕಾರ್ಡ್ ಮಾಡಿ https://www.thefuc.in/sanchaya/ ವೆಬ್ ಸೈಟ್ ನಲ್ಲಿ ಆನ್ ಲೈನ್ ಪ್ರದರ್ಶನ ಏರ್ಪಡಿಸಲಾಗಿದೆ. ಆಸಕ್ತರು ಟಿಕೆಟ್ ಖರೀದಿಸಿ https://www.thefuc.in/sanchaya/ ನಲ್ಲಿ ನಾಟಕಗಳ ಗುಚ್ಛವನ್ನು ವೀಕ್ಷಿಸಬಹುದಾಗಿದೆ. 

ಸಂಚಯ ಕೇರ್ಸ್ ನ ಕೃಷ್ಣ ಹೆಬ್ಬಾಲೆ ಕನ್ನಡಪ್ರಭ.ಕಾಂ ನೊಂದಿಗೆ ಮಾತನಾಡಿದ್ದು, "ಸಂಚಯ  ರಂಗ ತಂಡವು ಈಗಾಗಲೇ ಸಂಕಷ್ಟದಲ್ಲಿರುವ ಹಿರಿಯ ವೃತ್ತಿ ರಂಗಭೂಮಿ ಕಲಾವಿದರನ್ನು ಗುರುತಿಸಿ ಈ ವರೆಗೂ 150 ಕಲಾವಿದರಿಗೆ ಮುಂದಿನ 3 ತಿಂಗಳವರೆಗೆ ಪ್ರತಿ ತಿಂಗಳು 3,000 ರೂಪಾಯಿ ಆರ್ಥಿಕ ನೆರವು ಲಭ್ಯವಾಗುವ ವ್ಯವಸ್ಥೆ ಮಾಡಿದೆ. ಈ ವಾರಾಂತ್ಯದ ವೇಳೆಗೆ ಇನ್ನೂ 80 ಕಲಾವಿದರಿಗೆ ನೆರವು ನೀಡಲು ಉದ್ದೇಶಿಸಲಾಗಿದೆ. 

ಸಂಚಯ ಕೇರ್ಸ್ ನ ಉದ್ದೇಶಕ್ಕೆ, ನಿನಾಸಂ ಸತೀಶ್, ಅಚ್ಯುತ ಕುಮಾರ್, ಸಂಚಾರಿ ವಿಜಯ್, ಮನ್ಸೋರೆ ಮುಂತಾದ  ನಾಡಿನ ಖ್ಯಾತ ಕಲಾವಿದರು ತಮ್ಮ ಸಹಕಾರ ನೀಡಲು ಒಪ್ಪಿದ್ದಾರೆ. ಇದು ನಮ್ಮ ಈ ಆಶಯಕ್ಕೆ ಅಗಾಧವಾದ ಹುರುಪನ್ನು ತಂದಿದೆ. ಕನಿಷ್ಠ 300 ಕಲಾವಿದರನ್ನು (ಹಿರಿಯ, ಮಹಿಳಾ ಕಲಾವಿದರಿಗೆ ಪ್ರಾಧಾನ್ಯ) ಗುರುತಿಸಿ ಅವರಿಗೆ ಧನಸಹಾಯ ಮಾಡುವ ಕಾರ್ಯಕ್ರಮವನ್ನು ರೂಪಿಸಿದ್ದೇವೆ. 

ನಮ್ಮ ಈ ನಾಟಕಗಳ ಗುಚ್ಛವನ್ನು ವಿಶ್ವದಾದ್ಯಂತ ಇರುವ ಕನ್ನಡಿಗರು ನೋಡಿ ರಂಗಕಾಲವಿದರಿಗೆ ನೆರವಾಗುತ್ತಾರೆ ಎಂಬ ಆಶಯವಿದೆ" ಎಂದು ಹೇಳಿದ್ದಾರೆ.

ಸಂಚಯ ರಂಗ ತಂಡವು ಕಳೆದ 32 ವರ್ಷದಿಂದ ತನ್ನ ನಿರಂತರ ರಂಗ ಚಟುವಟಿಕೆಗಳ ಮೂಲಕ ಪ್ರೇಕ್ಷಕರ ಹಾಗೂ ವಿಮರ್ಶಕರ  ಮೆಚ್ಚುಗೆ ಗಳಿಸಿ ನಾಡಿನ ಪ್ರಮುಖ ತಂಡಗಳಲ್ಲೊಂದಾಗಿದೆ. ರಂಗ ಪ್ರಯೋಗಗಳಲ್ಲದೆ ಅನೇಕ ಸುಗಮ ಸಂಗೀತ ಕಾರ್ಯಕ್ರಮಗಳು, ರಂಗಭೂಮಿಯ ವಿವಿಧ ಕಾರ್ಯಾಗಾರಗಳನ್ನು ನಡೆಸುತ್ತಾ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com