ಸಫಾರಿ ವಿವಾದ: ಕೇಸ್ ಬಳಿಕ ಫೋಟೋ, ವಿಡಿಯೋಗಳನ್ನು ಅರಣ್ಯಾಧಿಕಾರಿಗಳಿಗೆ ನೀಡಿದ ನಟ ಧನ್ವೀರ್
ಬಂಡಿಪುರದಲ್ಲಿ ರಾತ್ರಿ ಸಫಾರಿ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಕೇಸ್ ದಾಖಲಾಗುತ್ತಿದ್ದಂತೆಯೇ ನಟ ಧನ್ವೀರ್ ಅವರು, ತಾವು ಯಾವುದೇ ತಪ್ಪು ಮಾಡಿಲ್ಲ, ಸಂಜೆ ಹೊತ್ತಿಗೆ ಕಾಡಿನಿಂದ ಹೊರಗಿದ್ದೆ ಎಂದು ಹೇಳಿದ್ದು, ಇದಕ್ಕೆ ಸಾಕ್ಷ್ಯಾಧಾರಗಳಾಗಿ ತಮ್ಮ ಬಳಿಯಿದ್ದ ಫೋಟೋ ಹಾಗೂ ವಿಡಿಯೋಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದಾರೆ.
Published: 26th October 2020 12:21 PM | Last Updated: 26th October 2020 12:32 PM | A+A A-

ಧನ್ವೀರ್
ಬೆಂಗಳೂರು: ಬಂಡಿಪುರದಲ್ಲಿ ರಾತ್ರಿ ಸಫಾರಿ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಕೇಸ್ ದಾಖಲಾಗುತ್ತಿದ್ದಂತೆಯೇ ನಟ ಧನ್ವೀರ್ ಅವರು, ತಾವು ಯಾವುದೇ ತಪ್ಪು ಮಾಡಿಲ್ಲ, ಸಂಜೆ ಹೊತ್ತಿಗೆ ಕಾಡಿನಿಂದ ಹೊರಗಿದ್ದೆ ಎಂದು ಹೇಳಿದ್ದು, ಇದಕ್ಕೆ ಸಾಕ್ಷ್ಯಾಧಾರಗಳಾಗಿ ತಮ್ಮ ಬಳಿಯಿದ್ದ ಫೋಟೋ ಹಾಗೂ ವಿಡಿಯೋಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದಾರೆಂದು ತಿಳಿದುಬಂದಿದೆ.
ತಮ್ಮ ಮೇಲೆ ಕೇಸ್ ದಾಖಲಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ಧನ್ವೀರ್ ಅವರು, ಅರಣ್ಯ ಇಲಾಖೆಯ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ನಾನು ಸಂಜೆ ಹೊತ್ತಿಗೆ ಕಾಡಿನಿಂದ ಹೊರಗಿದ್ದೆ. ಅರಣ್ಯ ಇಲಾಖೆಯ ವಾಹನದಲ್ಲಿಯೇ ಸಫಾರಿಗೆ ಟಿಕೆಟ್ ಪಡೆದು ತೆರಳಿದ್ದೆ. ನೈಟ್ ಸಫಾರಿ ಮಾಡಿಲ್ಲ. ತಪ್ಪಾಗಿ ನೈಟ್ ಸಫಾರಿ ಎಂದು ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಸಫಾರಿ ವೇಳೆ ಧನ್ವೀರ್ ತೆಗೆದಿರುವ ಫೋಟೋ ಹಾಗೂ ವಿಡಿಯೋಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆಂದು ತಿಳಿದುಬಂದಿದೆ.
ಧನ್ವೀರ್ ನೀಡಿರುವ ಫೋಟೋಗಳ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಧನ್ವೀರ್ ಅವರು ನೀಡಿರುವ ಫೋಟೋ ಹಾಗೂ ವಿಡಿಯೋಗಳನ್ನು ಸಾಕ್ಷ್ಯಾಧಾರಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಧನ್ವೀರ್ ಅವರು ಸಫಾರಿಗೆ ತೆರಳಿದ ಸಮಯವನ್ನು ಪರಿಶೀಲಿಸಲಾಗುತ್ತದೆ. ಧನ್ವೀರ್ ಜೊತೆಗೆ ಸಫಾರಿಗೆ ತೆರಳಿದ್ದವರನ್ನು ವಿಚಾರಣೆಗೊಳಪಡಿಸಲಾಗುತ್ತದೆ. ತನಿಖೆ ಪೂರ್ಣಗೊಂಡ ಬಳಿಕ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆಎಂದು ತಿಳಿಸಿದ್ದಾರೆ.