ಚಿತ್ರಮಂದಿರಗಳ ತೆರೆಯಲು ಅನುಮತಿ ನೀಡಿ: ಜೈರಾಜ್, ಶಿವರಾಜ್ ಕುಮಾರ್ ನೇತೃತ್ವದ ನಿಯೋಗದಿಂದ ಸಿಎಂ ಯಡಿಯೂರಪ್ಪಗೆ ಮನವಿ

ಕೊರೋನಾ ವೈರಸ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಿತ್ರೋದ್ಯಮವು ವಿಶೇಷ ಪ್ಯಾಕೇಜ್ ಘೋಷಣೆ ಸೇರಿದಂತೆ ಕೆಲ ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿಟ್ಟಿದ್ದಾರೆ. 
ಚಿತ್ರರಂಗದ ಪ್ರಮುಖ ಗಣ್ಯರು ಮುಖ್ಯಮಂತ್ರಿಗಳನ್ನು ಭೇಟಿಯಾಗಲು ತೆರಳುತ್ತಿರುವುದು
ಚಿತ್ರರಂಗದ ಪ್ರಮುಖ ಗಣ್ಯರು ಮುಖ್ಯಮಂತ್ರಿಗಳನ್ನು ಭೇಟಿಯಾಗಲು ತೆರಳುತ್ತಿರುವುದು

ಬೆಂಗಳೂರು: ಕೊರೋನಾ ವೈರಸ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಿತ್ರೋದ್ಯಮವು ವಿಶೇಷ ಪ್ಯಾಕೇಜ್ ಘೋಷಣೆ ಸೇರಿದಂತೆ ಕೆಲ ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿಟ್ಟಿದ್ದಾರೆ. 

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಿ.ಆರ್.ಜೈರಾಜ್ ಮತ್ತು ನಟ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಬುಧವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚಿತ್ರೋದ್ಯಮದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿಕೊಂಡಿತು. 

ಕಳೆದ 6 ತಿಂಗಳುಗಳಿಂದ ಕೊರೋನಾದಿಂದ ತತ್ತರಿಸಿರುವ ಚಿತ್ರೋದ್ಯಮದ ಮಂದಿಗೆ ನೆರವು ನೀಡಲು ವಿಶೇಷ ಪ್ಯಾಕೇಜ್ ಅಗತ್ಯವಿದೆ. ಅಲ್ಲದೇ, ವಾರ್ಷಿಕ ತೆರೆಗೆ ಮನ್ನಾ ಮಾಡಬೇಕು. ಕೊರೋನಾ ಸಂದರ್ಭದಲ್ಲಿ ಚಿತ್ರಮಂದಿರಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಮತ್ತು 2018 ಹಾಗೂ 2019ನೇ ಚಿತ್ರಗಳ ಸಬ್ಸಿಡಿ ಬಿಡುಗಡೆ ಮಾಡಬೇಕು. ಹೆಸರಘಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚಿತ್ರನಗರಿ ಬಗ್ಗೆ ರೂಪರೇಷೆ ಸಿದ್ಧಪಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು. 

ಕೋವಿಡ್ ನಿಂದಾಗಿ ಚಿತ್ರೋದ್ಯಮ ಸ್ಥಗಿತಗೊಂಡಿದೆ ಚಿತ್ರಮಂದಿರಗಳು, ಸ್ಟುಡಿಯೋ, ಲ್ಯಾಬ್, ರೆಕಾರ್ಡಿಂಗ್ ಥಿಯೇಟರ್, ಎಡಿಟಿಂಗ್ ಸೇರಿದಂತೆ ಇತರೆ ಸಂಸ್ಥೆಗಳು ಲಾಭ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ಇವುಗಳ ಪುನಶ್ಚೇತನಕ್ಕೆ ಅಗತ್ಯ ನೆರವು ಒದಗಿಸಬೇಕು. ಚಿತ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಏಕಗವಾಕ್ಷಿ ಪದ್ಧತೆ. ವ್ಯಾಟ್, ಜಿಎಸ್'ಟಿ ಮರುಪಾವತಿ ಕುರಿತು ಕ್ರಮ ಕೈಗೊಳ್ಳಬೇಕು. ಪ್ರದರ್ಶನ ಶುಲ್ಕ ಹೆಚ್ಚಳಕ್ಕೆ ತಿದ್ದುಪಡಿ ತರಬೇಕಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು. 

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರ ಕುರಿತು ಸ್ವತಃ ನಟ ಶಿವರಾಜ್ ಕುಮಾರ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ, ಇಂದು ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರನ್ನು ಚಿತ್ರರಂಗ ಸಹೋದ್ಯೋಗಿಗಳೊಂದಿಗೆ ಹಾಗೂ ಇತರೆ ಪ್ರಮುಖರೊಂದಿಗೆ ಭೇಟಿ ಮಾಡಲಾಯಿತು. ಭೇಟಿ ವೇಳೆ ಚಿತ್ರಮಂದಿರಗಳ ಮರಳಿ ತೆರೆಯುವ ಕುರಿತು ಹಾಗೂ ವಿದ್ಯುತ್ ಸೇರಿದಂತೆ ಇತರೆ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಲಾಯಿತು. ಮನವಿ ಆಲಿಸಿದ ಮುಖ್ಯಮಂತ್ರಿಗಳು ಸಮಸ್ಯೆ ಪರಿಹರಿಸುವ ಭರಸವೆ ನೀಡಿದ್ದಾರೆಂದು ಹೇಳಿದ್ದಾರೆ. 

ನಟಿ ತಾರಾ ಅವರು ಮಾತನಾಟಿ, ಚಿತ್ರರಂಗಕ್ಕೆ ಎದುರಾಗಿರುವ ಸಾಕಷ್ಟು ಸಮಸ್ಯೆಗಳು ಮುಖ್ಯಮಂತ್ರಿಗಳಿಗೆ ತಿಳಿದೇ ಇದೆ. ಗುರುವಾರ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರನ್ನೂ ಭೇಟಿ ಮಾಡಲಿದ್ದೇವೆ. ಚಿತ್ರರಂಗದ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ತಾಳ್ಮೆಯಿಂದ ಆಲಿಸಿದ್ದು, ಬಗೆಹರಿಸುವ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com