ಡ್ರಗ್ಸ್ ಪ್ರಕರಣ: ನಟರನ್ನೇಕೆ ಅರೆಸ್ಟ್ ಮಾಡಿಲ್ಲ? ಸರಿಯಾಗಿ ತನಿಖೆಯಾದರೆ ಪೆಟ್ಟಿಗೆಯಲ್ಲಿರೋ ಶವಗಳೂ ಆಚೆ ಬರುತ್ತವೆ-ಇಂದ್ರಜಿತ್ ಲಂಕೇಶ್

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ ಕೆಲ ನಟಿಯರನ್ನಷ್ಟೇ ಬಂಧಿಸಲಾಗಿದೆ. ಆದರೆ ನಟರನ್ನೇಕೆ ಬಂಧಿಸಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.

Published: 21st September 2020 05:28 PM  |   Last Updated: 21st September 2020 05:51 PM   |  A+A-


ಇಂದ್ರಜಿತ್ ಲಂಕೇಶ್

Posted By : Raghavendra Adiga
Source : UNI

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ ಕೆಲ ನಟಿಯರನ್ನಷ್ಟೇ ಬಂಧಿಸಲಾಗಿದೆ. ಆದರೆ ನಟರನ್ನೇಕೆ ಬಂಧಿಸಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.

ತಮ್ಮ ಜನ್ಮದಿನದಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಎರಡು ವಾರಗಳ ಹಿಂದೆ ಸಿಸಿಬಿ ಅಧಿಕಾರಗಳಿಗೆ ನನ್ನ ಬಳಿಯಿದ್ದ ಮಾಹಿತಿ ನೀಡಿದ್ದೇನೆ. ಆನಂತರದ ಬೆಳವಣಿಗೆ ಎಲ್ಲರಿಗೂ ತಿಳಿದಿದೆ. ಡ್ರಗ್ಸ್ ಸೇವನೆಯ ದುಷ್ಪರಿಣಾಮವನ್ನು ಯುವಜನತೆಗೆ ತಿಳಿಸುವುದೂ ನನ್ನ ಉದ್ದೇಶವಾಗಿತ್ತು ಎಂದರು.

ಡ್ರಗ್ಸ್ ಪ್ರಕರಣದಲ್ಲಿ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳೂ ಇದ್ದಾರೆ. ಈವೆಂಟ್ ಮ್ಯಾನೇಜರ್‌ಗಳು, ಹಲವಾರು ರಾಜಕಾರಣಿಗಳಿದ್ದಾರೆ. ಆದರೆ ಈ ವರೆಗೆ ಕೇವಲ ಇಬ್ಬರು ನಟಿಯರನ್ನು ಮಾತ್ರ ಅರೆಸ್ಟ್ ಮಾಡಲಾಗಿದೆ. ಆದರೆ ಈ ಸಿಸಿಬಿ ತನಿಖೆ ನನಗೆ ಸಾಕಷ್ಟು ಖುಷಿ ತಂದಿಲ್ಲ. ಯಾವ ರಾಜಕೀಯ ಒತ್ತಡಕ್ಕೆ ಮಣಿಯದೆ  ನಟರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳನ್ನು ಕರೆಸಿ ವಿಚಾರಣೆಗೆ ಒಳಪಡಿಸಿದರೆ ಆಗ ನಮಗೆ ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ. ಅಲ್ಲದೆ ರಾಜ್ಯಕ್ಕೆ ಒಂದು ಸಂದೇಶ ರವಾನೆಯಾಗುತ್ತದೆ. 

ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕನ ಮಗನನ್ನು ಯಾಕಿನ್ನೂ ವಿಚಾರಣೆ ನಡೆಸಿಲ್ಲ. ಸಂಬಂಧವಿಲ್ಲದವರನ್ನು ಕರೆಸಿ ಸುಮ್ಮನೆ ವಿಚಾರಣೆ ಮಾಡಲಾಗುತ್ತಿದೆ. ಹಾಗಾಗಿ ಇದು ರಾಜಕೀಯ ಪ್ರಭಾವವಿಲ್ಲದೆ ನಡೆಯುತ್ತಿರುವ ವಿಚಾರಣೆ ಎಂದು ನನಗೆ ಅನಿಸುತ್ತಿಲ್ಲ. ಇದು ಲವ್ ಜಿಹಾದ್ ಅಲ್ಲ. ಓರ್ವ ನಟಿಗೆ ಲವ್ ಜಿಹಾದ್ ಮಾಡಲು ಸಾಧ್ಯವೆ? ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಕರ್ನಾಟಕದ ಡ್ರಗ್ಸ್ ಮಾಫಿಯಾದಲ್ಲಿ ದೊಡ್ಡ ರಾಜಕಾರಣಿಗಳ ಕೈವಾಡ ಇದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರದಿಂದ ಕೇಂದ್ರಕ್ಕೆ ಸರಿಯಾದ ಮಾಹಿತಿ ರವಾನೆಯಾಗುತ್ತಿಲ್ಲ ಎಂದರು.

ಅಲ್ಲದೆ ಪ್ರಕರಣದ  ಎ1 ಆರೋಪಿಯನ್ನ ಬಂಧಿಸಿಲ್ಲ. ಆದಿತ್ಯ ಆಳ್ವನ ಬಂಧನವಾಗಿಲ್ಲ. ಪ್ರಭಾವಿ ರಾಜಕಾರಿಗಳು ಸುಮ್ನೆ ಬಿಟ್ಟುಬಿಡುವಂತೆ ಪೋಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ. ಡ್ರಗ್ಸ್ ಮಾಫಿಯಾ ಸಣ್ಣ ವಿಚಾರವಲ್ಲ. ರಾಜಕಾರಣಿ ಮಗ ಎಂದು ಆಳ್ವಾ ಬಂಧನವಾಗಿಲ್ಲ. ಸರ್ಕಾರದಲ್ಲಿ ಕೆಲಸ ಮಾಡುವ ನಿರ್ದೇಶಕನ ಮಗನೊಬ್ಬ ಡ್ರಗ್ಸ್ ಪೆಡ್ಲರ್ ಇದ್ದಾನೆ, ಅವನನ್ನ ಇದುವರೆಗೆ ವಿಚಾರಣೆ ಮಾಡಿಲ್ಲ. ಈ ಪ್ರಕರಣದಲ್ಲಿ ತ್ಯಾಪೆ ಕೆಲಸ ಮಾಡಬೇಡಿ, ನೆಪಕ್ಕಷ್ಟೇ ತನಿಖೆ ಅಂತ ಕೈಬಿಡಬೇಡಿ, ಹಳೆಯ ಪ್ರಕರಣಗಳನ್ನ ಕೆದಕಿದರೆ ಇನ್ನಷ್ಟು ವಿವರ ಬಹಿರಂಗವಾಗಲಿದೆ. ಆಗ ಪ್ರಕರಣದ ಸ್ವರೂಪ ಬದಲಾಗುತ್ತದೆ ಎಂದು ಹೇಳಿದರು.

ಕೇವಲ ರಾಜಕೀಯ ಪ್ರಭಾವವಿಲ್ಲದವರನ್ನ ಮಾತ್ರ ವಿಚಾರಣೆಗೆ ಕರೆಸಲಾಗುತ್ತಿದೆ. ಸರಿಯಾದ ತನಿಖೆ ನಡೆದರೆ ಪೆಟ್ಟಿಗೆಯಲ್ಲಿನ ಶವಗಳೂ ಆಚೆ ಬರುತ್ತದೆ ಎಂದು ಇಂದ್ರಜಿತ್ ಹೇಳಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp