ಎಸ್ ಪಿಬಿ ಚಿಕಿತ್ಸಾ ವೆಚ್ಚದ ಬಗ್ಗೆ ಕಿಡಿಗೇಡಿಗಳಿಂದ ವದಂತಿ: ನೋವಿನಲ್ಲಿ ಎಸ್ ಪಿ ಚರಣ್ ಹೇಳಿದ್ದಿಷ್ಟು...

ಎಸ್ ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ ನಡೆದು ಇನ್ನೂ 24 ಗಂಟೆಗಳೂ ಕಳೆದಿಲ್ಲ, ಆಗಲೇ ಅವರ ಆಸ್ಪತ್ರೆ ಚಿಕಿತ್ಸಾ ವೆಚ್ಚದ ಬಗ್ಗೆ ಕಿಡಿಗೇಡಿಗಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. 
ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್ ಪಿ ಚರಣ್ (ಸಂಗ್ರಹ ಚಿತ್ರ)
ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್ ಪಿ ಚರಣ್ (ಸಂಗ್ರಹ ಚಿತ್ರ)

ಚೆನ್ನೈ: ಎಸ್ ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ ನಡೆದು ಇನ್ನೂ 24 ಗಂಟೆಗಳೂ ಕಳೆದಿಲ್ಲ, ಆಗಲೇ ಅವರ ಆಸ್ಪತ್ರೆ ಚಿಕಿತ್ಸಾ ವೆಚ್ಚದ ಬಗ್ಗೆ ಕಿಡಿಗೇಡಿಗಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. 

51 ದಿನಗಳ ಕಾಲ ಪಡೆದಿದ್ದ ಚಿಕಿತ್ಸೆಗೆ 3 ಕೋಟಿಗೂ ಹೆಚ್ಚು ಚಿಕಿತ್ಸಾ ವೆಚ್ಚ ಭರಿಸಬೇಕಿತ್ತು. ಇದರಲ್ಲಿ 1.85 ಕೋಟಿಯಷ್ಟು ಹಣವನ್ನು ಮಾತ್ರ ಎಸ್ ಪಿ ಚರಣ್ ಎಂಜಿಎಂ ಆಸ್ಪತ್ರೆಗೆ ಪಾವತಿ ಮಾಡಿದ್ದಾರೆ. ಉಳಿದ ಹಣಕ್ಕಾಗಿ ಸಹಾಯ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಕುಟುಂಬ ಮನವಿ ಮಾಡಿತ್ತು. ತಮಿಳುನಾಡು ಸರ್ಕಾರ ಪ್ರತಿಕ್ರಿಯೆ ನೀಡಲಿಲ್ಲ ಆದರೆ ಅಂತಿಮವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಹಾಯ ಹಸ್ತ ಚಾಚಿದರು ಎಂಬ ವದಂತಿಗಳನ್ನು ಹಬ್ಬಿಸಲಾಗಿದೆ. 

ಈ ವದಂತಿಗಳು ವ್ಯಾಪಕವಾಗಿ ಹಬ್ಬುತ್ತಿದ್ದಂತೆಯೇ, ತಂದೆಯನ್ನು ಕಳೆದುಕೊಂಡ ದುಃಖದ ನಡುವೆಯೂ ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿರುವ ಎಸ್ ಪಿ ಚರಣ್, "ತಂದೆಯ ಆಸ್ಪತ್ರೆ ವೆಚ್ಚಗಳು, ಎಂಜಿಎಂ ಆಸ್ಪತ್ರೆ ಹಾಗೂ ಸಾಹಾಯದ ಬಗ್ಗೆ ವದಂತಿಗಳನ್ನು ಹಬ್ಬಿಸಬೇಡಿ, ಈ ರೀತಿಯ ವದಂತಿಗಳಿಂದಾಗಿ ಬಹಳಷ್ಟು ಜನರಿಗೆ ನೋವುಂಟಾಗಲಿದೆ. ಆಸ್ಪತ್ರೆಯ ಸಿಬ್ಬಂದಿಗಳು ನಮಗೆ ಅತ್ಯುತ್ತಮವಾಗಿ ಸಹಕರಿಸಿದ್ದಾರೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚಗಳ ಬಗ್ಗೆ ವೈದ್ಯರು ಹಾಗೂ ನಾನು ಪತ್ರಿಕಾಗೋಷ್ಠಿ ನಡೆಸಿ ವಿವರಗಳನ್ನು ನೀಡುತ್ತೇವೆ ಎಂದು ಚರಣ್ ತಿಳಿಸಿದ್ದಾರೆ. 

ಎಸ್ ಪಿಬಿ ವಿಷಯದಲ್ಲಿ ಈ ರೀತಿ ವದಂತಿ ಹಬ್ಬಿಸುತ್ತಿರುವವರ ವಿರುದ್ಧ ತೀವ್ರ ಆಕ್ರೋಶ, ಅಸಾಮಾಧಾನ ವ್ಯಕ್ತವಾಗತೊಡಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com