ಥಿಯೇಟರ್ ಗಳಲ್ಲಿ ಶೇ 50ರಷ್ಟು ಸೀಟು ಭರ್ತಿ ನಿಯಮ, 'ಯುವರತ್ನ' ತಂಡಕ್ಕೆ ಆಘಾತ: ಪುನೀತ್ ರಾಜ್ ಕುಮಾರ್ ಅಸಮಾಧಾನ

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗಿರುವುದರಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜನತೆಗೆ ಹೊರಡಿಸಿದೆ.

Published: 03rd April 2021 10:39 AM  |   Last Updated: 03rd April 2021 01:06 PM   |  A+A-


Puneet Rajkumar

ಪುನೀತ್ ರಾಜ್ ಕುಮಾರ್

Posted By : Sumana Upadhyaya
Source : The New Indian Express

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗಿರುವುದರಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜನತೆಗೆ ಹೊರಡಿಸಿದೆ.

ಅದರಂತೆ ನೈಟ್ ಕರ್ಫ್ಯೂ, ಲಾಕ್ ಡೌನ್ ಮಾಡದೆ ಈಗಿರುವ ವ್ಯವಸ್ಥೆಯಲ್ಲಿ ಕೆಲವು ಕಟ್ಟುನಿಟ್ಟು, ನಿರ್ಬಂಧ ಹಾಕಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 6ರಿಂದ 9ನೇ ತರಗತಿಗಳು ಬಂದ್, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ನಿರ್ಬಂಧ, ರಾಜಕೀಯ ಸಭೆ, ರ್ಯಾಲಿಗಳಲ್ಲಿ ಭಾಗವಹಿಸುವುದಕ್ಕೆ ಮಿತಿ, ಈಜುಕೊಳ, ಜಿಮ್ ಗಳು ಬಂದ್ ಜೊತೆಗೆ ಥಿಯೇಟರ್ ಗಳಲ್ಲಿ ಶೇಕಡಾ 50ರಷ್ಟು ಮಾತ್ರ ಸೀಟಿಂಗ್ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಥಿಯೇಟರ್ ಗಳಲ್ಲಿ ಶೇಕಡಾ 50ರಷ್ಟು ಮಾತ್ರ ಸೀಟಿಂಗ್ ವ್ಯವಸ್ಥೆ ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸಿನೆಮಾ ಥಿಯೇಟರ್ ಗಳಲ್ಲಿ ಪ್ರೇಕ್ಷಕರಿಗೆ ಅನ್ವಯವಾಗಲಿದೆ.
ಆದರೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ದಿಢೀರ್ ಕ್ರಮದಿಂದ ಸ್ಯಾಂಡಲ್ ವುಡ್ ಗೆ ಸಂಕಷ್ಟ ಎದುರಾಗಿದೆ. ಕಳೆದೊಂದು ವರ್ಷದಿಂದ ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿದ್ದ ಚಿತ್ರಲೋಕಕ್ಕೆ ಸರ್ಕಾರದ ತೀರ್ಮಾನ ಬಿಸಿತುಪ್ಪವಾಗಿ ಪರಿಣಮಿಸಿದೆ.

ನಟ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನೆಮಾ ಮೊನ್ನೆ 1ರಂದು ಬಿಡುಗಡೆಯಾಗಿತ್ತು. ಪ್ರೇಕ್ಷಕರಿಗೆ ಇಷ್ಟವಾಗಿ ಮೆಚ್ಚುಗೆ ಗಳಿಸಿ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಕೂಡ ಆಗಿತ್ತು. ನಾಳೆಯವರಿಗೆ ಟಿಕೆಟ್ ಮಾರಾಟವಾಗಿ ಜನ ಥಿಯೇಟರ್ ಗಳಲ್ಲಿ ಸೀಟುಗಳನ್ನು ಕಾಯ್ದಿರಿಸಿದ್ದರು. ಇದೀಗ ಸರ್ಕಾರದ ನಿರ್ಧಾರ ಯುವರತ್ನ ಚಿತ್ರದ ನಿರ್ಮಾಪಕರಿಗೆ, ವಿತರಕರಿಗೆ ಆರ್ಥಿಕ ನಷ್ಟವುಂಟುಮಾಡುವುದಂತೂ ಸತ್ಯ.

ನಿನ್ನೆ ಮಾಧ್ಯಮಗಳ ಜೊತೆ ಮತ್ತು ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ನಟ ಪುನೀತ್ ರಾಜ್ ಕುಮಾರ್, ನಿನ್ನೆ ತಾನೆ ಯುವರತ್ನ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾಗೆ ಈಗಾಗಲೇ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್​ಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಈಗ ಇದ್ದಕ್ಕಿದ್ದ ಹಾಗೆ ಸರ್ಕಾರ ಈ ರೀತಿ ಹೊಸ ನಿಯಮ ಜಾರಿಗೆ ತಂದರೆ ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ.

ಸಿನಿಮಾ ನೋಡಲು ಬರುವ ಎಲ್ಲರೂ ಸಹ ಕೊರೋನಾ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಕಡ್ಡಾಯವಾಗಿ  ಮಾಸ್ಕ್​ ಹಾಕಿಕೊಳ್ಳುತ್ತಿದ್ದಾರೆ, ಸ್ಯಾನಿಟೈಜರ್ ಬಳಸುತ್ತಿದ್ದಾರೆ. ನಿನ್ನೆ, ಇವತ್ತು ಸಿನಿಮಾ ಥಿಯೇಟರ್​​ಗೆ ಮಕ್ಕಳು ಹಾಗೂ ಹಿರಿಯರನ್ನು ಕರೆದುಕೊಂಡು ಬಂದಿದ್ದರು.  ಮಾಸ್ಕ್​ ಧರಿಸಿಯೇ ಸಿನಿಮಾ ನೋಡ್ತಿದ್ದಾರೆ. ಹೀಗಾಗಿ ಸರ್ಕಾರ ದಯವಿಟ್ಟು ಶೆ.50ರಷ್ಟು ಮಾತ್ರ ಸೀಟಿಂಗ್ ವ್ಯವಸ್ಥೆಯನ್ನು ತೆಗೆದುಹಾಕಬೇಕು.

ಕನಿಷ್ಟ ನಮಗೆ ಮೂರ್ನಾಲ್ಕು ದಿನ ಮುಂಚಿತವಾಗಿ ಆದರೂ ಮಾಹಿತಿ ನೀಡಬೇಕಿತ್ತು. ಈಗಾಗಲೇ ಭಾನುವಾರದ ತನಕ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಈಗ ಈ ರೀತಿ ನಿರ್ಧಾರಗಳನ್ನ ತೆಗೆದುಕೊಂಡಾಗ ನಮಗೆ ಕಷ್ಟ ಆಗುತ್ತೆ. ನಮಗೂ ಕೂಡ ಸರ್ಕಾರದ ನಿರ್ಧಾರದಿಂದ ಶಾಕ್‌ ಆಗಿದೆ ಎಂದರು. ಮೊನ್ನೆ ‌ನಡೆದ ಸಭೆ ಬಳಿಕ‌ ಕೂಡ ಯಾವುದೇ ತೀರ್ಮಾನ ಮಾಡಿರಲಿಲ್ಲ. ಹೀಗಾಗಿ ನಾವು ಸಿನಿಮಾ ರಿಲೀಸ್ ಮಾಡುವ ನಿರ್ಧಾರ ಮಾಡಿದ್ದೆವು. ಈಗ ಏಕಾಏಕಿ ನಾಳೆ ಇಂದ ಸಿನಿಮಾ ಥಿಯೇಟರ್ 50% ಅಂದ್ರೆ ಹೇಗಾಗಬೇಡ‌? ನಿನ್ನೆ ಸಿನಿಮಾ ರಿಲೀಸ್ ಆಗಿದೆ, ಒಳ್ಳೆ ರೆಸ್ಪಾನ್ಸ್ ಬರ್ತಿದೆ . ಇವತ್ತು ಸಿನಿಮಾ ಒಳ್ಳೆ ಪಿಕಪ್ ಆಗಿದೆ. ಫ್ಯಾಮಿಲಿ ‌ಆಡಿಯನ್ಸ್ ಕೂಡ ಥಿಯೇಟರ್ ಕಡೆಗೆ ಬರ್ತಿದ್ದಾರೆ. ಈ ವೇಳೆ ಈ ರೀತಿ ನಿಯಮ ತಂದಿರೋದು ಒಂದು ಒಳ್ಳೆ ಸಿನಿಮಾ ಕೊಂದು ಹಾಕಿದಂತೆ ಆಗಿದೆ. ಇದು ನ್ಯಾಯ ಅಲ್ಲ, ಸರ್ಕಾರಕ್ಕೆ ನಾವು ಮನವಿ‌ ಮಾಡುತ್ತೇವೆ ಎಂದು ಪುನೀತ್ ರಾಜ್ ಕುಮಾರ್ ಹೇಳಿದರು.

ಸಿಎಂಗೆ ನಾನು ಖಂಡಿತ ಮನವಿ ಮಾಡುತ್ತೇನೆ‌‌. ಈ ನಿರ್ಧಾರವನ್ನ ವಾಪಸ್ ಪಡೆಯಿರಿ. ನಾಳೆ ಚಿತ್ರರಂಗ ಯಾವ ರೀತಿ ನಡೆದುಕೊಳ್ತಾರೋ ಅದಕ್ಕೆ ಬದ್ಧರಾಗಿ ಇರುತ್ತೇವೆ ಎಂದರು.

ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ: ಥಿಯೇಟರ್ ಗಳಲ್ಲಿ ಶೇಕಡಾ 50ರಷ್ಟು ಸೀಟು ಭರ್ತಿಗೆ ಸಂಬಂಧಪಟ್ಟಂತೆ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದ್ದು, ಅಲ್ಲಿ ಪ್ರಮುಖ ಕಲಾವಿದರು, ವಿತರಕರು, ನಿರ್ಮಾಪಕರು, ನಿರ್ದೇಶಕರು ಸೇರಿ ಚರ್ಚಿಸಿ ನಿರ್ಧಾರ ತೆಗೆದುಕೊಂಡು ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp