ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಹೊಸ ನಿಯಮ: ನವೆಂಬರ್ 1 ರಿಂದ ಜಾರಿ

ರಾಮನಗರದ ಬಳಿ ಇತ್ತೀಚೆಗೆ ಲವ್ ಯೂ ರಚ್ಚು ಶೂಟಿಂಗ್ ಸ್ಥಳದಲ್ಲಿ ಸಂಭವಿಸಿದ ಫೈಟರ್ ವಿವೇಕ್ ಸಾವಿನ ಬಳಿಕ ಎಚ್ಚೆತ್ತುಕೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಹೊಸ ನಿಯಮ ಜಾರಿಗೆ ತಂದಿದ್ದು, ನವೆಂಬರ್ 1ರಿಂದ ಜಾರಿಗೆ ಬರಲಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಮನಗರದ ಬಳಿ ಇತ್ತೀಚೆಗೆ ಲವ್ ಯೂ ರಚ್ಚು ಶೂಟಿಂಗ್ ಸ್ಥಳದಲ್ಲಿ ಸಂಭವಿಸಿದ ಫೈಟರ್ ವಿವೇಕ್ ಸಾವಿನ ಬಳಿಕ ಎಚ್ಚೆತ್ತುಕೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಹೊಸ ನಿಯಮ ಜಾರಿಗೆ ತಂದಿದ್ದು, ನವೆಂಬರ್ 1ರಿಂದ ಜಾರಿಗೆ ಬರಲಿವೆ.

ಇನ್ನು ಮುಂದೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಫೈಟರ್ ಗಳಿಗೆ ಇನ್ಶೂರೆನ್ಸ್ ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಕೇವಲ ಫೈಟರ್ ಗಳು ಮಾತ್ರವಲ್ಲದೆ, ಎಲ್ಲಾ ಕಾರ್ಮಿಕರಿಗೂ ವಿಮೆ ಮಾಡುವುದು ಕಡ್ಡಾಯವಾಗಿದೆ.

ವಿಮೆಯಿರುವ ಕಾರ್ಮಿಕರು, ತಂತ್ರಜ್ಞರಿಗೆ ಮಾತ್ರ ಶೂಟಿಂಗ್ ನಲ್ಲಿ ಅವಕಾಶ ಕೊಡಬೇಕು ಎಂದು ನಿರ್ಮಾಪಕರಿಗೆ ವಾಣಿಜ್ಯ ಮಂಡಳಿ ಸೂಚನೆ ನೀಡಿದೆ. ಚಿತ್ರೀಕರಣಕ್ಕೆ ಮೊದಲು ಸ್ವಯಂಪ್ರೇರಿತವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಕಾರ್ಮಿಕರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕು ಎಂಬ ಹೊಸ ನಿಯಮ ಜಾರಿಗೆ ತರಲಾಗಿದೆ.

ಫೈಟರ್ಸ್ ಹಾಗೂ ಕಾರ್ಮಿಕರಿಗೆ ಇನ್ಶೂರೆನ್ಸ್​ ಕಡ್ಡಾಯವಾಗಿದ್ದು, ಇನ್ಶೂರೆನ್ಸ್ ಇರುವ ಫೈಟರ್ಸ್​ಗಳನ್ನು ಮಾತ್ರ ಚಿತ್ರೀಕರಣಕ್ಕೆ ಬಳಸಬೇಕು ಎಂದು ತೀರ್ಮಾನಿಸಲಾಗಿದೆ. ಸಾಹಸ ದೃಶ್ಯ, ರಿಸ್ಕಿ ದೃಶ್ಯ ಶೂಟಿಂಗ್ ವೇಳೆ ಮುಂಜಾಗ್ರತೆಯನ್ನು ಕಡ್ಡಾಯವಾಗಿ ವಹಿಸಬೇಕಾಗಿದ್ದು, ಚಿತ್ರೀಕರಣ ಸ್ಥಳದಲ್ಲಿ ಆ್ಯಂಬುಲೆನ್ಸ್, ವೈದ್ಯರು, ನರ್ಸ್ ಹಾಗೂ ಪ್ರಥಮ ಚಿಕಿತ್ಸೆಯ ಸೌಲಭ್ಯ ಕಡ್ಡಾಯವಾಗಿ ಇರಬೇಕು.

ನಿರ್ಮಾಪಕರು ಗುಂಪು ವಿಮೆ ಮಾಡಿಸುವುದು ಕಡ್ಡಾಯವಾಗಿದ್ದು, ಫೈಟರ್ಸ್, ಕಾರ್ಮಿಕರು ಸ್ವಯಂ ಪ್ರೇರಿತರಾಗಿ ಒಪ್ಪಿ ಸಹಿ
ಸಹಿ ಮಾಡಿ ಒಪ್ಪಂದ ಪತ್ರ ಮಾಡಿಕೊಳ್ಳಬೇಕು. ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ನುರಿತ ಫೈಟ್ ಮಾಸ್ಟರ್ ನೇಮಕ‌ ಮಾಡಿ ಚಿತ್ರೀಕರಣ ನಡೆಸಬೇಕು. ಒಂದು ವೇಳೆ ಕಾರ್ಮಿಕರಿಗೆ ತೊಂದರೆ ಆದರೆ ಆ ವಿಭಾಗದ ಮುಖ್ಯಸ್ಥರೇ ಹೊಣೆ ಹೊರಬೇಕಾಗುತ್ತದೆ ಎಂದು ನಿಯಮಾವಳಿಗಳಲ್ಲಿ ತಿಳಿಸಲಾಗಿದೆ.

ಇತ್ತೀಚೆಗಷ್ಟೇ ‘ಲವ್​ ಯೂ ರಚ್ಚು’ ಚಿತ್ರೀಕರಣದ ಸಂದರ್ಭದಲ್ಲಿ ಫೈಟರ್ ವಿವೇಕ್ ನಿಧನವಾಗಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಚಿತ್ರೀಕರಣಕ್ಕೆ ಹೊಸ ನಿಯಮಾವಳಿ ರೂಪಿಸುತ್ತೇವೆ ಎಂದು ಘೋಷಿಸಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ವಿವಿಧ ಸಂಘಟನೆಗಳ ಸಭೆಯನ್ನೂ ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. ಈಗ ಫಿಲ್ಮ್ ಚೇಂಬರ್ ಚಿತ್ರೀಕರಣದ ವೇಳೆ ಪಾಲಿಸಬೇಕಾದ ನಿಯಮಾವಳಿಗಳನ್ನು ತಿಳಿಸಿದೆ.

ಈ ಎಲ್ಲ ನಿಯಮಗಳ ಪಾಲನೆ ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳುತ್ತದೆ, ಸಾಹಸ ಕಲಾವಿದರು, ಕಾರ್ಮಿಕರು ಇನ್ನು ಮುಂದಾದರೂ ಜೀವ ಕಳೆದುಕೊಳ್ಳುವ ಭಯವಿಲ್ಲದೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದೇ ಎಂಬುದನ್ನು ಕಾದುನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com