
ಪ್ರೇಮ್, ಧ್ರುವ ಸರ್ಜಾ, ಸುಪ್ರಿತ್ ಮತ್ತು ವೆಂಕಟ್ ಕೋನಂಕಿ
ಧ್ರುವ ಸರ್ಜಾ ನಟನೆಯ ಸಿನಿಮಾವನ್ನು ಪ್ರೇಮ್ ನಿರ್ದೇಶಿಸಲಿದ್ದಾರೆ, ಇವರಿಬ್ಬರ ಕಾಂಬಿನೇಷನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ.
ತಮ್ಮ ಮುಂದಿನ ಸಿನಿಮಾ ಬಗ್ಗೆ ನಟ, ನಿರ್ದೇಶಕ ಇಬ್ಬರು ತಮ್ಮ ಟ್ಟಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ. ಪ್ರೇಮ್ ನಿರ್ದೇಶನದ 9ನೇ ಸಿನಿಮಾ ಇದಾಗಿದ್ದು, ಧ್ರುವಸರ್ಜಾ 6ನೇ ಚಿತ್ರವಾಗಿದೆ.
ಯುದ್ಧದ ಈ ಮುನ್ನುಡಿ ಈಗ ಆರಂಭವಾಗುತ್ತದೆ. ನೀವು ಯಾವಾಗಲೂ ತೋರಿಸುವ ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ನಮಗೆ ಹೀಗೆ ಇರಲಿ. ಲವ್ ಯೂ ಆಲ್ ಎಂದು ಪ್ರೇಮ್ ಟ್ವೀಟ್ ಮಾಡಿದ್ದು, ಪ್ರೋಮೋ ಕ್ಲಿಪ್ ಸಹಿತ. ಚಿತ್ರದ ಶೀರ್ಷಿಕೆಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಪ್ರೇಮ್ ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಚಿತ್ರವು ತೆರೆಗೆ ಬರುವ ನಿರೀಕ್ಷೆಯಿದೆ. ಈ ಚಿತ್ರವು ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್‌ನ ನಾಲ್ಕನೇ ಸಿನಿಮಾ ಇದಾಗಿದೆ. ಬೈಟು ಲವ್ , ಸಕತ್ ಮತ್ತು ನಿಖಿಲ್ ಕುಮಾರಸ್ವಾಮಿಯವರ ಮತ್ತೊಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ವಿವಿಧ ಹಂತಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಧ್ರುವ ಸರ್ಜಾ ಸದ್ಯ ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ, ಉದಯ್ ಕೆ ಮೆಹ್ತಾ ನಿರ್ಮಾಣದ ಈ ಚಿತ್ರ ಆಗಸ್ಟ್ 15 ರಂದು ಸೆಟ್ಟೇರಿದೆ. ಪ್ರಸ್ತುತ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮತ್ತೊಂದೆಡೆ, ನಿರ್ದೇಶಕ ಪ್ರೇಮ್ ಏಕ್ ಲವ್ ಯಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.