ಮಾತಲ್ಲೇ ಕಚಗುಳಿಯಿಡುವ ‘ತೋತಾಪುರಿ’ ವಿಶೇಷ ಪ್ರೋಮೋ ಟೀಸರ್

ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಸಿನಿಮಾ ಪ್ರಾರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಆರಂಭವಾಗಿದೆ.
ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ನಟ ಜಗ್ಗೇಶ್
ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ನಟ ಜಗ್ಗೇಶ್

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಸಿನಿಮಾ ಪ್ರಾರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಆರಂಭವಾಗಿದೆ.

ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರದ ಟೀಸರ್ ಸದ್ಯದಲ್ಲೇ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಪ್ರಚಾರ ಕಾರ್ಯ ಶುರುವಾಗಲಿದೆ ಎಂದು ಹೇಳಲೆಂದೇ ಪ್ರೋಮೋ ಹರಿಬಿಟ್ಟಿದೆ ಚಿತ್ರತಂಡ. ಇದರಲ್ಲಿ ಜಗ್ಗೇಶ್ ಹಾಗೂ ವಿಜಯಪ್ರಸಾದ್ ಮಾತಿನಲ್ಲೇ ಕಚಗುಳಿಯಿಡುತ್ತಾರೆ.

ಈಗ ಈ ಪ್ರೋಮೋ ಮೂಲಕ ತೋತಾಪುರಿ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ಸಿನಿಮಾ ಪ್ರಮೋಶನ್‌ಗಾಗಿ ಲಿರಿಕಲ್ ವಿಡಿಯೋ ಅಥವಾ ಸಿನಿಮಾದ ಟೀಸರ್ ಬಿಡುಗಡೆ ಮಾಡುತ್ತಾರೆ. ಆದರೆ, ‘ತೋತಾಪುರಿ’ ಚಿತ್ರತಂಡ ಮಾತ್ರ ವಿಶೇಷವಾಗಿ ಸಿನಿಮಾದ ಪ್ರಮೋಶನ್ ಬಗ್ಗೆ ಹೇಳಲೆಂದೇ ವಿಶೇಷವಾದ ಟೀಸರ್‌ವೊಂದನ್ನು ಶೂಟ್ ಮಾಡಿ ಸುರೇಶ್ ಆರ್ಟ್ಸ್ ಯೂಟ್ಯೂಬ್ ಚಾನಲ್ ಮೂಲಕ ರಿಲೀಸ್ ಮಾಡಿದೆ. ಈ ಮೂಲಕ ಹೊಸತನಕ್ಕೆ ನಾಂದಿ ಹಾಡಿದೆ.

‘ನೀರ್‌ದೋಸೆ’ ಹಿಟ್ ಕೊಟ್ಟ ಬಳಿಕ ನಿರ್ದೇಶಕ ವಿಜಯ ಪ್ರಸಾದ್ ಹಾಗೂ ಜಗ್ಗೇಶ್ ತೋತಾಪುರಿ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ಅಲ್ಲದೇ ಚಿತ್ರದಲ್ಲಿ ಜಗ್ಗೇಶ್ ಹಾಗೂ ಇತರ ಕಲಾವಿದರ ಗೆಟಪ್ ತುಂಬಾ ವಿಭಿನ್ನವಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿದೆ. ಏಕಕಾಲಕ್ಕೆ ಎರಡೂ ಭಾಗದ ಚಿತ್ರ ಚಿತ್ರೀಕರಣ ಮುಗಿಸಿರುವ ಖ್ಯಾತಿ ಈ ಚಿತ್ರತಂಡಕ್ಕಿದೆ. ಭಾರತ ಚಿತ್ರರಂಗದಲ್ಲಿ ಇದು ದಾಖಲೆಯೂ ಹೌದು. ಹೀಗೆ ನಾನಾ ಕಾರಣಗಳಿಂದಾಗಿ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ವಿಶೇಷವೆಂದರೆ, ಜಗ್ಗೇಶ್ ಈವರೆಗೂ ನಟಿಸಿರುವ ಚಿತ್ರಗಳಲ್ಲಿ ಇದು ಬಿಗ್ ಬಜೆಟ್ ಸಿನಿಮಾ ಎಂಬುದು ಒಂದೆಡೆಯಾದರೆ, ಇದೇ ಮೊದಲ ಬಾರಿಗೆ ಭಾಗ-1 ಭಾಗ-2ರಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಚಾಪ್ಟರ್-1 ಮತ್ತು ಚಾಪ್ಟರ್-2 ಶೂಟಿಂಗ್ ಮುಗಿಸಿರುವ ಚಿತ್ರತಂಡ, ಟೈಟಲ್‌ಗೆ ಟ್ಯಾಗ್‌ಲೈನ್ ಸಹ ಗಮನ ಸೆಳೆಯುವಂತೆ ಇಟ್ಟಿದೆ ‘ತೋತಾಪುರಿ’ ತಂಡ. ಭಾಗ ಒಂದಕ್ಕೆ ‘ತೊಟ್ ಕೀಳ್ಬೇಕಷ್ಟೇ...’ ಎಂದು ಅಡಿಬರಹವಿದ್ದರೆ, ಎರಡನೇ ಭಾಗಕ್ಕೆ ‘ತೊಟ್ ಕಿತ್ತಾಯ್ತು’ ಎಂದು ನಮೂದಿಸಿದೆ. ನಿರ್ದೇಶಕ ವಿಜಯಪ್ರಸಾದ್ ತುಂಟತನ, ಚೇಷ್ಟೆ ಇಷ್ಟಪಟ್ಟವರಿಗೆ ಇಲ್ಲಿ ಅವುಗಳನ್ನು ದುಪ್ಪಟ್ಟು ಅನುಭವಿಸುವಂತೆ ಕಟ್ಟಿಕೊಟ್ಟಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ. ಜಗ್ಗೇಶ್ ಸೇರಿದಂತೆ ಚಿತ್ರದಲ್ಲಿ 80ಕ್ಕೂ ಅಧಿಕ ಕಲಾವಿದರ ದಂಡೇ ಚಿತ್ರದಲ್ಲಿದೆ. ಅದಿತಿ ಪ್ರಭುದೇವ, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

ತಾಂತ್ರಿಕತೆಯ ವಿಚಾರದಲ್ಲೂ ಈ ಚಿತ್ರ ಸದ್ದು ಮಾಡುತ್ತಿದೆ. ಹಿಟ್ ಸಿನಿಮಾಗಳನ್ನು ನೀಡಿರುವ ‘ಸುರೇಶ್ ಆರ್ಟ್ಸ್‌’ ಬ್ಯಾನರ್‌ನ ಕೆ.ಎ.ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಗ್ಗೇಶ್ ನಟನೆಯ ಎದ್ದೇಳು ಮಂಜುನಾಥ, ನೀರ್‌ದೋಸೆ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಅನೂಪ್ ಸೀಳಿನ್ ‘ತೋತಾಪುರಿ’ ಹಾಡುಗಳಿಗೆ ಬ್ಯಾಂಡು ಬಜಾಯಿಸಿದ್ದಾರೆ. ಹಿನ್ನೆಲೆ ಸಂಗೀತಕ್ಕೂ ಅವರದೇ ತಾಳ-ಮೇಳ. ನಿರಂಜನ್ ಬಾಬು ಕ್ಯಾಮೆರಾ, ಸುರೇಶ್ ಅರಸ್ ಸಂಕಲನವಿದೆ.

ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಕೇರಳ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದ ಕೂಡಲೇ ಚಿತ್ರ ಬಿಡುಗಡೆಗೆ ತಂಡ ಸಜ್ಜಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com