
ಸುದೀಪ್
ಬೆಂಗಳೂರು/ಹಾವೇರಿ: ನಟ ಕಿಚ್ಚ ಸುದೀಪ್ ಹೆಸರಿನಲ್ಲಿ ಮಹಿಳಾ ಅಭಿಮಾನಿಗಳು ಸೇನೆಯೊಂದನ್ನು ಕಟ್ಟಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ಟಾರ್ ನಟರ ಹೆಸರಿನಲ್ಲಿ ಪುರುಷರು ಸಾಕಷ್ಟು ಅಭಿಮಾನಿ ಸಂಘಗಳನ್ನು ಕಟ್ಟಿಕೊಂಡಿದ್ದಾರಾದರೂ, ಸುದೀಪ್ ಹೆಸರಿನಲ್ಲಿ ‘ಮಹಿಳಾ ಸೇನೆ’ ಸ್ಥಾಪನೆಯಾಗಿರುವುದು ವಿಶೇಷವಾಗಿದೆ.
ಸುದೀಪ್ ಅವರು ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ, ಬ್ಯಾಡಗಿ ತಾಲ್ಲೂಕಿನ ಮಹಿಳಾ ಅಭಿಮಾನಿಗಳು ಒಂದು ವಿಡಿಯೋ ಮೂಲಕ ಕಿಚ್ಚನಿಗೆ ಶುಭಾಶಯ ತಿಳಿಸಿದ್ದಾರೆ. ಅದರಲ್ಲಿ ತಾವು ಮಾಡಿಕೊಂಡಿರುವ ಸಂಘದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. 'ಮಹಾ ಸೇವಕ ಬಾದ್ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ' ಎಂದು ಅದಕ್ಕೆ ಹೆಸರಿಡಲಾಗಿದೆ.
ಈ ಮಹಾಸೇನೆಯಲ್ಲಿ ಬರೀ ಮಹಿಳೆಯರೇ ಸಕ್ರಿಯರಾಗಿದ್ದಾರೆ. 5 ಸಾವಿರಕ್ಕೂ ಅಧಿಕ ಸ್ರೀಯರು ಸುದೀಪ್ ಮೇಲಿನ ಅಭಿಮಾನಕ್ಕಾಗಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ನಟರೊಬ್ಬರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಸಂಘ ಭಾರತದಲ್ಲೇ ಮೊದಲು ಎಂದು ಈ ಮಹಿಳಾ ಸೇನೆಯ ಸದಸ್ಯರು ಹೇಳಿಕೊಂಡಿದ್ದಾರೆ.
ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಅಡಿಯಲ್ಲಿ ಈ ಸಂಘ ಕಾರ್ಯ ನಿರ್ವಹಿಸುತ್ತಿದೆ. ಸುದೀಪ್ ಅವರ ಮಾರ್ಗದರ್ಶನದಲ್ಲಿ ತಾವು ಮುನ್ನಡೆಯುವುದಾಗಿ ಈ ಸಂಘದ ಮಹಿಳೆಯರು ವಿಡಿಯೋ ಮೂಲಕ ತಿಳಿಸಿದ್ದಾರೆ. ಇದನ್ನು ಟ್ವಿಟರ್ನಲ್ಲಿ ನೋಡಿದ ಸುದೀಪ್ ಅವರು ಮನಸಾರೆ ಪ್ರತಿಕ್ರಿಯಿಸಿದ್ದಾರೆ. 'ಇದು ಮಧುರವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ ಅಭಿಮಾನಿಗಳ ಪಾಲಿನ 'ಅಭಿನಯ ಚಕ್ರವರ್ತಿ'.