
ಶ್ರೀನಗರ ಕಿಟ್ಟಿ
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬುದ್ಧಿವಂತ 2 ಚಿತ್ರಕ್ಕೆ ಕನ್ನಡದ ಮತ್ತೊಬ್ಬ ನಟ ಎಂಟ್ರಿ ಕೊಟ್ಟಿದ್ದಾರೆ.
ಬುದ್ಧಿವಂತ 2 ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಇದೀಗ ಚಿತ್ರ ತಂಡ ಚಿತ್ರದ ವಿಲನ್ ಕುರಿತಾಗಿ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದೆ.
ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆಂಬುದು ಈ ವರೆಗೂ ಸ್ಪಷ್ಟವಾಗಿರಲಿಲ್ಲ. ಈ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದ್ದು, ಚಿತ್ರದಲ್ಲಿ ಶ್ರೀನಗರ ಕಿಟ್ಟಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆಂದು ತಿಳಿಸಿದೆ.
ಈಗಾಗಲೇ ಶ್ರೀನಗರ ಕಿಟ್ಟಿಯವರು ನಟಿಸಬೇಕಿದ್ದ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಚಿತ್ರ ಆರಂಭದ ವೇಳೆ ವಿಲನ್ ಪಾತ್ರದಲ್ಲಿ ಆದಿತ್ಯಾ ಕಾಣಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿತ್ತು. ಇದೀಗ ಶ್ರೀನಗರ ಕಿಟ್ಟಿ ನಟಿಸುತ್ತಿರುವುದು ಅಧಿಕೃತವಾಗಿದೆ. ಕಿಟ್ಟಿಯವರು ಅವತಾರ್ ಪುರುಷ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಟಿಆರ್. ಚಂದ್ರಶೇಖರ್ ಅವರು ಬುದ್ಧಿವಂತ-2 ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಅವರು ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಮೇಘನಾ ರಾಜ್ ಮತ್ತು ಪಂಚತಂತ್ರ ಖ್ಯಾತಿಯ ಸೋನಾಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.