
ಧ್ರುವ ಸರ್ಜಾ
ಇತ್ತೀಚೆಗೆ ತೆರೆಕಂಡ ನಂದ ಕಿಶೋರ್ ನಿರ್ದೇಶನದ 'ಪೊಗರು' ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎನ್ನುವ ಆರೋಪಕ್ಕೆ ನಾಯಕ ನಟ ಧ್ರುವ ಸರ್ಜಾ ಕ್ಷಮೆ ಕೇಳಿದ್ದಾರೆ.
ಧ್ರುವ ಸರ್ಜಾ ಈ ಕುರಿತಂತೆ ಟ್ವೀಟ್ ಮಾಡಿದ್ದು "ನಮ್ಮ ಇಡೀ ಕುಟುಂಬ ಹನುಮ ಭಕ್ತರು, ಆಂಜನೇಯನ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವದ ಪದ್ದತಿ ಆಚರಿಸುತ್ತಾ, ಗೌರವಿಸುತ್ತಾ ಬದುಕುತ್ತಿದ್ದೇವೆ. ತಾತನ ಕಾಲದಿಂದಲೂ ಹಿಂದುತ್ವದ ಪ್ರತಿಪಾದಕರಾಗಿ ಬದುಕಿದ್ದೇವೆ.
"ಕಲೆಯೇ ಧರ್ಮ, ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಚಿತ್ರದ ಕಥೆ, ಪಾತ್ರಪೋಷಣೆಯಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದೆ ಎನ್ನುವಂತಹಾ ಮಾತು ನಿಜಕ್ಕೂ ನಮ್ಮ ತಂಡಕ್ಕೆ ಬೇಸರ ತಂದಿದೆ. ಈ ಕಾರಣಕ್ಕಾಗಿ ಬೇಷರತ್ ಕ್ಷಮೆ ಕೇಳುತ್ತೇನೆ.
"ನಿಮಗೆ ಬೇಸರವಾಗಿರೋ ದೃಶ್ಯಗಳನ್ನು ಕತ್ತರಿಸಿದ್ದೇವೆ. ಮತ್ತೆ ಸೆನ್ಸಾರ್ ಆದಮೇಲೆ ನಿಮ್ಮೆದುರು ಮಾತನಾಡೋಣ ಎಂದು ನಾನೇ ನಿರ್ಧರಿಸಿದ್ದೆ. ಈಗ ಅದನ್ನು ಸರಿಪಡಿಸಲು ತಂತ್ರಜ್ಞರ ತಂಡ ಸಿದ್ದವಾಗಿದೆ.ನನ್ನ ಮನವಿಯನ್ನು ಪುರಸ್ಕರಿಸಿ ಎಂದಿನಂತೆ ನಿಮ್ಮ ಆಶೀರ್ವಾದವಿರಲಿ." ಎಂದಿದ್ದಾರೆ.
Jai Hanuman pic.twitter.com/mqnrKkkjJH
— Dhruva Sarja (@DhruvaSarja) February 24, 2021
ಸಿನಿಮಾ ದೃಶ್ಯಗಳಲ್ಲಿ ಅರ್ಚಕನ ಭುಜದ ಮೇಲೆ ಖಳನಟ ಖಾಲಿಡುವುದು, ಊಟ, ತಿಂಡಿಗಳ ಬಗ್ಗೆ ಮಾತನಾಡಿರುವುದು ಸೇರಿ ಅನೇಕ ಆಕ್ಷೇಪಾರ್ಹ ದೃಶ್ಯಗಳಿದೆ ಎಂದು ಬ್ರಾಹ್ಮಣ ಸಮುದಾಯ ಆರೋಪಿಸಿ ವಿವಾದಿತ ದೃಶ್ಯಗಳನ್ನು ತೆಗೆದು ಹಾಕಬೇಕೆಂದು ಹೋರಾಟ ನಡೆಸಿತ್ತು. ಇದಕ್ಕೆ ಒಪ್ಪಿಕೊಂಡ ಚಿತ್ರತಂಡ ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನು ಕತ್ತರಿಸಿ ಸಿನಿಮಾವನ್ನು ಮತ್ತೆ ಸೆನ್ಸಾರ್ ಮಂಡಳಿ ಮುಂದೆ ಇಡಲಾಗುತ್ತದೆ ಎಂದು ನಿನ್ನೆ ಹೇಳಿಕೆ ನೀಡಿದೆ.