ಡ್ರಗ್ ಪೆಡ್ಲರ್ ಜೊತೆ ಸಂಪರ್ಕ: ಕನ್ನಡ ನಟಿ ಶ್ವೇತಾ ಕುಮಾರಿ ಬಂಧನ
ಡ್ರಗ್ ಪೆಡ್ಲರ್ ಜತೆ ನಿಕಟ ಸಂಪರ್ಕ ಇಟ್ಟುಕೊಂಡು ಮಾದಕ ಜಾಲವನ್ನು ವಿಸ್ತರಿಸಿದ ಆರೋಪದಡಿ ಮತ್ತೊಬ್ಬ ಕನ್ನಡದ ನಟಿ ಶ್ವೇತಾ ಕುಮಾರಿಯನನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
Published: 05th January 2021 12:35 PM | Last Updated: 05th January 2021 01:30 PM | A+A A-

ಶ್ವೇತಾ ಕುಮಾರಿ
ಮುಂಬಯಿ: ಮಾದಕ ವಸ್ತು ಪೂರೈಕೆ ಆರೋಪದಲ್ಲಿ ಕನ್ನಡ ಚಲನಚಿತ್ರ ನಟಿ ಶ್ವೇತಾ ಕುಮಾರಿ ಅವರನ್ನು ಸೋಮವಾರ ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಮಾದಕ ವಸ್ತು ಪೂರೈಕೆ ಮಾಡಿದ ಆರೋಪದಲ್ಲಿ ನಟಿಯನ್ನು ಬಂಧಿಸಲಾಗಿದೆ. ಮುಂಬೈಯ ಮಿರಾ ರಸ್ತೆಯ ಹೋಟೆಲ್ ಒಂದರ ಮೇಲೆ ನಡೆದ ದಾಳಿಯ ವೇಳೆ ನಟಿಯನ್ನು ಬಂಧಿಸಲಾಗಿದೆ. ನಟಿ ಕುಮಾರಿ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಮಾಹಿತಿ ನೀಡಿದ್ದಾರೆ.
ಎನ್ಸಿಬಿ ಅಧಿಕಾರಿಗಳು ಜನವರಿ 2 ರಂದು ಇಲ್ಲಿನ ಮೀರಾ-ಭಯಾಂದರ್ ಪ್ರದೇಶದಲ್ಲಿರುವ ಕ್ರೌನ್ ಬ್ಯುಸಿನೆಸ್ ಹೋಟೆಲ್ ಮೇಲೆ ದಾಳಿ ನಡೆಸಿ 400 ಗ್ರಾಂ ಮೆಫೆಡ್ರೋನ್ (ಎಂಡಿ) ವಶಪಡಿಸಿಕೊಂಡಿದ್ದರು. ಅಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಹೈದರಾಬಾದ್ ನಿವಾಸಿಯಾಗಿರುವ 27 ವರ್ಷದ ನಟನನ್ನು ಬಂಧಿಸಲಾಗಿತ್ತು.
ಪೆಡ್ಲರ್ ಗಳ ಜೊತೆಗೆ ಮುಖ್ಯ ಸರಬರಾಜುದಾರರನ್ನು ಬಂಧಿಸಲು ಎನ್ ಸಿಬಿ ವ್ಯವಸ್ಥಿತ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಅಂತಾರಾಜ್ಯ ಡ್ರಗ್ ಪೂರೈಕೆದಾರರಿಂದ ವಶಪಡಿಸಿಕೊಳ್ಳುವ ಪ್ರಕರಣಗಳಲ್ಲಿ ಎನ್ಸಿಬಿ ಆರ್ಥಿಕ ತನಿಖೆಯತ್ತ ಗಮನ ಹರಿಸುತ್ತಿದೆ.
ಮುಂಬೈ ಡ್ರಗ್ ಪೆಡ್ಲರ್ ಕರೀಂ ನ ಸಹಚರ ಚಾಂದ್ ಶೇಖ್ ನೀಡಿದ ಮಾಹಿತಿಯ ಆಧಾರದಲ್ಲಿ ಶ್ವೇತಾ ಕುಮಾರಿ ಅನ್ನುಬಂಧಿಸಲಾಗಿದೆ.
ಶ್ವೇತ ಕುಮಾರಿ ಅವರು ಕನ್ನಡಕ್ಕಿಂತಲೂ ತೆಲುಗು ಸಿನಿಮಾ ಉದ್ಯಮದಲ್ಲಿ ಹೆಚ್ಚು ಸಂಪರ್ಕ ಹೊಂದಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಸಹ ಹೆಚ್ಚಾಗಿ ನಟಿಸಿರುವ ಶ್ವೇತಾ, ಒಂದು ತಮಿಳು ಸಿನಿಮಾದಲ್ಲಿಯೂ ನಟಿಸಿದ್ದಾರೆ.
ನಟಿ ಶ್ವೇತಾ, ಡ್ರಗ್ಸ್ ಪಡೆಯುತ್ತಿದ್ದರಲ್ಲದೆ, ಡ್ರಗ್ಸ್ ಮಾರಾಟದಲ್ಲಿಯೂ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.
ನಟಿಯ ಮೊಬೈಲ್ ಅನ್ನು ಎನ್ ಸಿಬಿ ವಶಪಡಿಸಿಕೊಂಡಿದ್ದು ಕರೆ ಮಾಹಿತಿ, ಸಂಪರ್ಕ ಸಂಖ್ಯೆ, ವಾಟ್ಸ್ ಆಪ್ ಚಾಟ್ ಗಳನ್ನು ಜಾಲಾಡುತ್ತಿದ್ದಾರೆ. ನಟಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.