ಈ ವರ್ಷ ಹುಟ್ಟುಹಬ್ಬದ ಸಂಭ್ರಮ ಬೇಡ, ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್: ಫೇಸ್ಬುಕ್ ಲೈವ್ ನಲ್ಲಿ ನಟ ದರ್ಶನ್ ಹೇಳಿಕೆ
ಈ ವರ್ಷ ಹುಟ್ಟುಹಬ್ಬದ ಸಂಭ್ರಮ ಬೇಡ, ಮಾರ್ಚ್ 11ಕ್ಕೆ ರಾಬರ್ಟ್ ಬಿಡುಗಡೆಯಾಗಲಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದಾರೆ.
Published: 10th January 2021 11:22 AM | Last Updated: 10th January 2021 11:42 AM | A+A A-

ನಟ ದರ್ಶನ್
ಬೆಂಗಳೂರು: ಈ ವರ್ಷ ಹುಟ್ಟುಹಬ್ಬದ ಸಂಭ್ರಮ ಬೇಡ, ಮಾರ್ಚ್ 11ಕ್ಕೆ ಮಹಾಶಿವರಾತ್ರಿ ಹಬ್ಬದ ದಿನದಂದು ರಾಬರ್ಟ್ ಬಿಡುಗಡೆಯಾಗಲಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದಾರೆ.
ಫೇಸ್ಬುಕ್ ಲೈವ್ ನಲ್ಲಿ ಮಾತನಾಡಿರುವ ದರ್ಶನ್ ಅವರು, 2021 ಫೆಬ್ರವರಿ 16ರಂದು ಹುಟ್ಟುಹಬ್ಬವನ್ನು ಆಚರಣೆ ಮಾಡುವುದಿಲ್ಲ. ಕೊರೋನಾ ಪ್ರತೀ ವಲಯದ ಜನರ ಮೇಲೂ ಗಂಭೀರ ಪರಿಣಾಮ ಬೀರಿದೆ. 2020ನ್ನು ಮರೆಯಲೂ ಸಾಧ್ಯವೇ ಇಲ್ಲ. ಮುಂದಿನ ವರ್ಷವಾದರೂ ಎಲ್ಲಾ ಸಂಕಷ್ಟಗಳೂ ದೂರವಾಗಲೀ, ಕೊರೋನಾ ಹೋಗಲಿ, ಮುಂದಿನ ವರ್ಷ ಎಲ್ಲರೂ ಸಿಗೋಣ ಎಂದು ಹೇಳಿದ್ದಾರೆ.
2020ರಲ್ಲಿ ನೀವೂ ಸೇರಿ ನಾನೂ ಕೂಡ ಕೆಲಸ ಮಾಡಿಲ್ಲ. ನನ್ನ ಹುಟ್ಟುಹಬ್ಬದ ದಿನದಂದೂ ಸಾಕಷ್ಟು ಊರುಗಳಿಂದ ಜನರು ಹಣ ಸಂದಾಯ ಮಾಡಿಕೊಂಡು ಗಾಡಿಗಳಲ್ಲಿ ಇಲ್ಲಿಗೆ ಬರುತ್ತಾರೆ. ಯಾರೂ ಕಷ್ಟಗಳನ್ನು ಪಡಬೇಡಿ. ಮೊದಲು ನಿಮ್ಮ ಮನೆಯವರನ್ನು ನೋಡಿ, ಕಷ್ಟಗಳನ್ನು ದೂರಾಗಿಸಿಕೊಳ್ಳಿ. ಸುರಕ್ಷಿತವಾಗಿರಿ. ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಿಲ್ಲ ಎಂದು ಬೇಸವಾಗದಿರಿ. ನಾನು ಫೆ.15-18ರವರೆಗೂ ಊರಿನಲ್ಲಿಯೇ ಇರುವುದಿಲ್ಲ. ಮನೆ ಬಳಿ ಬಂದು ಯಾರೂ ಬೇಸರಗೊಳ್ಳದಿರಿ ಎಂದು ತಿಳಿಸಿದ್ದಾರೆ.
ಮಾರ್ಚ್ ನಂತರ ಒಂದೊಂದು ಭಾನುವಾರದಂದು ಒಂದೊಂದು ಊರಿನವರಿಗೆ ಸಿಗುವ ವ್ಯವಸ್ಥೆ ಮಾಡುತ್ತೇನೆ. ದಯವಿಟ್ಟು ಯಾರೂ ಹುಟ್ಟುಹಬ್ಬಕ್ಕೆ ಮನೆಯ ಬಳಿ ಬರಬೇಡಿ. ನಿಮ್ಮ ಆರೋಗ್ಯ ನನಗೆ ಮುಖ್ಯ ಕೊರೋನಾ ಕಾಟ ಮುಗಿದ ನಂತರ ಮುಂದಿನ ವರ್ಷ ಹುಟ್ಟುಹಬ್ಬವನ್ನು ಆಚರಿಸೋಣ ಎಂದಿದ್ದಾರೆ.
ಇದೇ ವೇಳೆ ಒಟಿಟಿ ಪ್ಲಾಟ್ ಫಾರ್ಮ್ ಕುರಿತಂತೆಯೂ ಮಾತನಾಡಿರುವ ದರ್ಶನ್ ಅವರು, ನಿರ್ಮಾಪಕರು ಸಾಕಷ್ಟು ಕಷ್ಟಪಟ್ಟು ಸಿನಿಮಾ ಮಾಡಲು ಹಣವನ್ನು ಹಾಕಿರುತ್ತಾರೆ. ಜನರನ್ನು ಮನರಂಜಿಸಲು ಜೀವವನ್ನೇ ಪಣಕ್ಕಿಟ್ಟು ಸಾಕಷ್ಟು ಕಷ್ಟಪಟ್ಟಿರುತ್ತೇವೆ. ಅಂತಹ ಕಷ್ಟವನ್ನು ಟಿವಿ, ಮೊಬೈಲ್ ನಲ್ಲಿ ನೀವು ನೋಡಿದರೆ ಅಷ್ಟು ಮಜಾ ಇರುವುದಿಲ್ಲ. ಮಾರುಕಟ್ಟೆ, ಮದುವೆ ಸಮಾರಂಭ, ಶಾಲೆ, ಕಾಲೇಜುಗಳು ಎಲ್ಲವೂ ಆರಂಭವಾಯಿತು. ಅಂಬಾನಿಯವರು 5ಜಿ ಆರಂಭಿಸಿದ್ದಾರೆ. ಇದೊಂದು ಹಗರಣವೆಂದು ನನಗೆನಿಸುತ್ತಿದೆ. ಥಿಯೇಟರ್ ಗಳಲ್ಲಿ ಸಿನಿಮಾಗಳು ಬರುತ್ತಿಲ್ಲ. ಜನರು ಮೊಬೈಲ್ ನೋಡಿದರೆ 5ಜಿ ವರ್ಕ್ ಆಗುತ್ತದೆ. ಏನೇ ಆದರೂ ನಮ್ಮ ಸಿನಿಮಾ ಮಾತ್ರ ಚಿತ್ರಮಂದಿರದಲ್ಲೇ ಬರುತ್ತದೆ. ಚಿತ್ರವನ್ನು ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡುವುದಿಲ್ಲ. ಚಿತ್ರಮಂದಿರದಲ್ಲಿ ಶೇ.50 ಅಲ್ಲ ಶೇ.25ರಷ್ಟು ಜನರು ಬಂದರೂ ಜನರು ಚಿತ್ರಮಂದಿರಲ್ಲಿ ಸಿನಿಮಾ ನೋಡಲಿ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ರಾಬರ್ಟ್ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿ, ಮಾರ್ಚ್ 11 ರಂದು ರಾಬರ್ಟ್ ಚಿತ್ರ ಬಿಡುಗಡೆಯಾಗುವುದು ಬಹುತೇಕ ಖಚಿತ ಎಂದು ತಿಳಿಸಿದ್ದಾರೆ.
#Roberrt Coming To Theaters On Maha Shivarathri March11 2021 #RoberrtStormMarch11 @TharunSudhir @umap30071 pic.twitter.com/OTecKUlN4v
— Darshan Thoogudeepa (@dasadarshan) January 10, 2021