
ಪ್ರಮೋದ್
ಚಿತ್ರರಂಗಕ್ಕೆ ಕಾಲಿಟ್ಟ ಕೂಡಲೇ ಕೆಲವು ನಾಯಕ ನಟರು ಆರಂಭದಲ್ಲಿಯೇ ಭರವಸೆ ಮೂಡಿಸುತ್ತಾರೆ. ಅಂತಹ ಭರವಸೆ ಮೂಡಿಸಿದ ನಟರಲ್ಲಿ ಪ್ರಮೋದ್ ಅವರು ಮುಂಚೂಣಿಯಲ್ಲಿದ್ದಾರೆ.
ಪ್ರೀಮಿಯರ್ ಪದ್ಮಿನಿ ಚಿತ್ರದ ಬಳಿಕ ನಟ ಪ್ರಮೋದ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಗಳು ಹೆಚ್ಚಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಪ್ರಮೋದ್ ಅವರು ಬ್ಯುಸಿಯಾಗಿದ್ದಾರೆ.
ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ರತ್ನನ್ ಪ್ರಪಂಚ, ಇಂಗ್ಲೀಷ್ ಮಂಜ ಮತ್ತು ಹಂಡ್ರೆಡ್ ಮಂಕೀಸ್ ಎಂಬ ಚಿತ್ರದಲ್ಲಿ ಪ್ರಮೋದ್ ಅವರು ನಟಿಸುತ್ತಿದ್ದಾರೆಂದು ಸುದ್ದಿಗಳಿದ್ದು, ಇದೀಗ ಆ ಪಟ್ಟಿಗೆ ಮತ್ತಷ್ಟು ಸಿನಿಮಾಗಳೂ ಕೂಡ ಸೇರ್ಪಡೆಗೊಂಡಿವೆ.
ಇಂದು ಪ್ರಮೋದ್ ಅವರು ಹುಟ್ಟುಹಬ್ಬದ ದಿನವಾಗಿದ್ದು, ಈ ಸಂದರ್ಭದಲ್ಲಿ ಪ್ರಮೋದ್ ಅಭಿನಯದ ಮೂರು ಚಿತ್ರಗಳೂ ಕೂಡ ಹೊಸದಾಗಿ ಘೋಷಣೆಯಾಗಲಿವೆ. ಈ ಪೈಕಿ ಒಂದು ಚಿತ್ರದ ಟೈಟಲ್ ಹಾಗೂ ಆ ಚಿತ್ರದ ಫಸ್ಟ್ ಲುಕ್ ಅನಾವರಣಗೊಳ್ಳುತ್ತಿದೆ.
ಈ ಚಿತ್ರವನ್ನು ಧನ್ವಿತ್ ಕೇಶವ್ ಅವರು ಕಥೆ ಹಾಗೂ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಅಲಂಕಾರ್ ವಿದ್ಯಾರ್ಥಿ ಎಂದು ಹೆಸರು ಇಡಲಾಗಿದೆ.
ಪೋಸ್ಟರ್ ಡಿಸೈನರ್ ಅವೀಸ್ ನಿರ್ದೇಶನದ ಮೊದಲ ಚಿತ್ರ ಮತ್ತು ಸಂತೋಷ್ ನಾಯಕ್ ಅವರ ಮತ್ತೊಂದು ಹೊಸ ಚಿತ್ರವನ್ನು ಪ್ರಮೋದ್ ಅವರು ಒಪ್ಪಿಕೊಂಡಿದ್ದು, ಈ ಪೈಕಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಜನವರಿ 24 ರಿಂದ ಉತ್ತರ ಕರ್ನಾಟಕದ ನಾನಾ ಭಾಗಗಳಲ್ಲಿ ನಡೆಯಲಿದ್ದು, ಈ ಭಾಗದ ಚಿತ್ರೀಕರಣದಲ್ಲಿ ಪ್ರಮೋದ್ ಭಾಗವಹಿಸಲಿದ್ದಾರೆ. ಬಳಿಕ ಇಂಗ್ಲೀಷ್ ಮಂಜ ಮತ್ತು ಅಲಂಕಾರ್ ವಿದ್ಯಾರ್ಥಿ ಚಿತ್ರಗಳು ಪ್ರಾರಂಭವಾಗಲಿವೆ.
ಅಲಂಕಾರ್ ವಿದ್ಯಾರ್ಥಿ ಚಿತ್ರದ ಕುರಿತು ಮಾತನಾಡಿರು ಪ್ರಮೋದ್ ಅವರು, ಚಿತ್ರದ ಹೆಸರೇ ಹೇಳುವಂತೆ ಚಿತ್ರದಲ್ಲಿ ಕಾಲೇಜು ಜೀವನದ ಕುರಿತಂತಾಗಿದೆ. ಬ್ಯಾಕ್ ಬೆಂಚರ್ಸ್ ಸ್ಯೂಡೆಂಟ್ ಗಳ ಕುರಿತ ಕಥೆ ಇದಾಗಿದೆ. ಅಲಂಕಾರ್ ವಿದ್ಯಾರ್ಥಿ’. ಅಲಂಕಾರಕ್ಕೆ ಕಾಲೇಜಿಗೆ ಬರುವವರು ಎಂದು ಬೈಯುತ್ತಾರಲ್ಲ ಅದೇ ಹೆಸರು ಇಟ್ಟುಕೊಂಡು ಕತೆ ಮಾಡಲಾಗಿದೆ. ‘ಮಾರ್ಕ್ಸ್ ಕಮ್ಮಿ, ಮಾರ್ಕ್ಸ್ ಕಾರ್ಡ್ ಜಾಸ್ತಿ’ ಎಂಬುದು ಚಿತ್ರದ ಟ್ಯಾಗ್ಲೈನ್ ಆಗಿದೆ ಎಂದು ಹೇಳಿದ್ದಾರೆ.