ವೀರಪ್ಪನ್ ಜೀವನ ಚರಿತ್ರೆ ಆಧರಿತ ವೆಬ್ ಸಿರೀಸ್ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ
ಕಾಡುಗಳ್ಳ ವೀರಪ್ಪನ್ ಜೀವನ ಚರಿತ್ರೆ ಆಧರಿಸಿ ನಿರ್ಮಿಸಿರುವ ‘ವೀರಪ್ಪನ್– ಹಂಗರ್ ಫಾರ್ ಕಿಲ್ಲಿಂಗ್’ ಎಂಬ ವೆಬ್ ಸೀರೀಸ್ ಚಿತ್ರವನ್ನು ಯೂ ಟ್ಯೂಬ್ ಸೇರಿದಂತೆ ಯಾವುದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡದಂತೆ ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.
Published: 13th January 2021 10:45 AM | Last Updated: 13th January 2021 12:34 PM | A+A A-

ಮುತ್ತುಲಕ್ಷ್ಮಿ
ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಜೀವನ ಚರಿತ್ರೆ ಆಧರಿಸಿ ನಿರ್ಮಿಸಿರುವ ‘ವೀರಪ್ಪನ್– ಹಂಗರ್ ಫಾರ್ ಕಿಲ್ಲಿಂಗ್’ ಎಂಬ ವೆಬ್ ಸೀರೀಸ್ ಚಿತ್ರವನ್ನು ಯೂ ಟ್ಯೂಬ್ ಸೇರಿದಂತೆ ಯಾವುದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡದಂತೆ ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.
ಅಟ್ಟಹಾಸ ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ಎ.ಎಂ ಸುರೇಶ್ ವೀರಪ್ಪನ್ ಜೀವನಾಧಾರಿತ ವೆಬ್ ಸೀರೀಸ್ "ಹಂಗರ್ ಫರ್ ಕಿಲ್ಲಿಂಗ್" ನಿರ್ಮಾಣ ಮಾಡಿದ್ದರು. ಈ ವೆಬ್ ಸೀರೀಸ್ ಬಿಡುಗಡೆಯಾದರೆ ನಮ್ಮ ಬದುಕಿಗೆ ಧಕ್ಕೆಯಾಗಲಿದೆ. ಪದೇ ಪದೇ ನನ್ನ ಪತಿಯ ಹೆಸರಿನಲ್ಲಿ ಸಿನಿಮಾ ಮಾಡಿ ಗೌರವಯುತ ಜೀವನಕ್ಕೆ ತೊಂದರೆಯಾಗುತ್ತಿದೆ. ವೆಬ್ ಸೀರೀಸ್ ಬಿಡುಗಡೆಯಾಗಬಾರದು ಎಂದು ಕೋರಿ ವೀರಪ್ಪನ್ ಪತ್ನಿ ಮುತ್ತು ಲಕ್ಷ್ಮೀ ನ್ಯಾಯಾಲಯದ ಮೊರೆ ಹೋಗಿದ್ದರು.
ಮುತ್ತುಲಕ್ಷ್ಮೀ ಅವರ ಅರ್ಜಿ ಅಂಗೀಕರಿಸಿದ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ, ಹಂಗರ್ ಫರ್ ಕಿಲ್ಲಿಂಗ್ ವೆಬ್ ಸೀರೀಸ್ ಬಿಡುಗಡೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ. ನಿರ್ದೇಶಕ ಎ.ಎಂ. ಸುರೇಶ್ ಯಾಕೆ ವೀರಪ್ಪನ್ ಹೆಸರು ಹೇಳಿಕೊಂಡು ಹಣ ಮಾಡುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಗೌರವಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಪದೇ ಪದೇ ತನ್ನ ಗಂಡನ ಹೆಸರಿನಲ್ಲಿ ಸಿನಿಮಾ, ವೆಬ್ ಸೀರೀಸ್ ಮಾಡಬಾರದು.
ಲಿಖಿತ ಅನುಮತಿ ಪಡೆಯದೇ ತಮ್ಮ ಗಂಡನ ಕುರಿತಾಗಿ ಚಿತ್ರ ನಿರ್ಮಿಸಲಾಗಿದೆ. ಅಲ್ಲದೆ ನರಹಂತಕ, ಕಾಡುಗಳ್ಳ ಎಂದು ಬಿಂಬಿಸಲು ನಿರ್ದೇಶಕರು ಹೊರಟಿದ್ದಾರೆ. ಇದರಿಂದ ತಮ್ಮ ವೈಯಕ್ತಿಕ ಜೀವನಕ್ಕೆ ಧಕ್ಕೆಯಾಗಲಿದೆ’ ಎಂದು ಮುತ್ತುಲಕ್ಷ್ಮಿ ದೂರಿದ್ದಾರೆ.
ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ತಡೆಯಾಜ್ಞೆ ಆದೇಶದ ಪ್ರಕಾರ ವೀರಪ್ಪನ್ ಕುರಿತ ವೆಬ್ ಸೀರೀಸ್ ಸೋಸಿಯಲ್ ಮಿಡಿಯಾದಲ್ಲಿ ಹಾಕುವಂತಿಲ್ಲ. ಒಟಿಟಿ ಪ್ಲಾಟ್ ಫಾರಂನಲ್ಲೂ ಬಿಡುಗಡೆ ಮಾಡುವಂತಿಲ್ಲ. ಯಾವುದೇ ಭಾಷೆಯಲ್ಲೂ ರಿಲೀಸ್ ಮಾಡುವಂತಿಲ್ಲ. ಮಾಡಿದಲ್ಲಿ ಸಂವಿಧಾನದ ವಿಧಿ 21ರ ಉಲ್ಲಂಘನೆಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.