ರಶ್ಮಿಕಾ ನಂತರ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ 'ಕಿಸ್' ನಟಿ ಶ್ರೀಲೀಲಾ!
ಕನ್ನಡದಲ್ಲಿ 'ಕಿಸ್', 'ಭರಾಟೆ' ಸಿನಿಮಾಗಳ ಮೂಲಕ ಖ್ಯಾತಿ ಪಡೆದ ಶ್ರೀಲೀಲಾ, ಸ್ಯಾಂಡಲ್ವುಡ್ನ ಬೇಡಿಕೆಯ ನಟಿಯಾಗಿ ಗಮನಸೆಳೆಯುತ್ತಿದ್ದಾರೆ. ಒಂದಾದ ಮೇಲೊಂದು ಅವಕಾಶಗಳು ಅವರಿಗೆ ಸಿಗುತ್ತಿವೆ.
Published: 13th January 2021 12:53 PM | Last Updated: 13th January 2021 03:21 PM | A+A A-

ಶ್ರೀಲೀಲಾ
ಕನ್ನಡದಲ್ಲಿ 'ಕಿಸ್', 'ಭರಾಟೆ' ಸಿನಿಮಾಗಳ ಮೂಲಕ ಖ್ಯಾತಿ ಪಡೆದ ಶ್ರೀಲೀಲಾ, ಸ್ಯಾಂಡಲ್ವುಡ್ನ ಬೇಡಿಕೆಯ ನಟಿಯಾಗಿ ಗಮನಸೆಳೆಯುತ್ತಿದ್ದಾರೆ. ಒಂದಾದ ಮೇಲೊಂದು ಅವಕಾಶಗಳು ಅವರಿಗೆ ಸಿಗುತ್ತಿವೆ. ಸದ್ಯ ಅವರಿಗೆ ತೆಲುಗಿನಿಂದಲೂ ಆಫರ್ ಬಂದಿದೆ. ಅದು ದೊಡ್ಡ ಬ್ಯಾನರ್ನಲ್ಲಿ ಅನ್ನೋದು ವಿಶೇಷ!
ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ಹೊಸದೊಂದು ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ಇದು ಅವರ ನಿರ್ಮಾಣದ ಸಿನಿಮಾ. 1996ರಲ್ಲಿ ಅವರೇ ನಿರ್ದೇಶನ ಮಾಡಿದ್ದ 'ಪೆಳ್ಳಿ ಸಂದಡಿ' ಚಿತ್ರದ ಸಿಕ್ವೇಲ್ ಇದು. ಇದರಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಶ್ರೀಲೀಲಾಗೆ ಸಿಕ್ಕಿದೆ.
ಶ್ರೀಮುರಳಿ ಜೊತೆ 'ಭರಾಟೆ' ಹಾಗೂ ವಿರಾಟ್ ಜೊತೆ 'ಕಿಸ್' ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಶ್ರೀಲೀಲಾ, ಪ್ರಸ್ತುತ ಧ್ರುವ ಸರ್ಜಾ ಜೊತೆ 'ದುಬಾರಿ' ಸಿನಿಮಾ ಮಾಡುತ್ತಿದ್ದಾರೆ. ನಂದಕಿಶೋರ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಬಗ್ಗೆ ತುಂಬ ನಿರೀಕ್ಷೆ ಇದೆ. ಜೊತೆಗೆ 'ಬಜಾರ್' ಖ್ಯಾತಿಯ ನಟ ಧನ್ವೀರ್ ಜೊತೆ 'ಬೈ ಟು ಲವ್' ಅನ್ನೊ ಸಿನಿಮಾಗೂ ಶ್ರೀಲೀಲಾ ನಾಯಕಿ
ಈ ಬಾರಿ ಕೆ. ರಾಘವೇಂದ್ರ ರಾವ್ ನಿರ್ದೇಶನ ಮಾಡುತ್ತಿಲ್ಲ. ಬದಲಿಗೆ, ಹೊಸ ಪ್ರತಿಭೆ ಗೌರಿ ಎಂಬುವವರಿಗೆ ನಿರ್ದೇಶನದ ಹೊಣೆ ನೀಡಲಾಗಿದೆ. ರಾಘವೇಂದ್ರ ರಾವ್ ಅವರೇ ಸ್ಕ್ರಿಪ್ಟ್ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 'ಬಾಹುಬಲಿ' ನಿರ್ಮಾಣ ಮಾಡಿದ್ದ ಪ್ರೊಡಕ್ಷನ್ ಹೌಸ್ ಕೂಡ ಇದಕ್ಕೆ ಕೈಜೋಡಿಸಿದೆ.
ತೆಲುಗು ನಟ ಶ್ರೀಕಾಂತ್ ಅವರ ಪುತ್ರ ರೋಷನ್ ಈ ಸಿನಿಮಾಕ್ಕೆ ನಾಯಕ. ಈ ಹಿಂದೆ ಅಕ್ಕಿನೇನಿ ನಾಗಾರ್ಜುನ ನಿರ್ಮಾಣದ 'ನಿರ್ಮಲ ಕಾನ್ವೆಂಟ್' ಸಿನಿಮಾದಲ್ಲಿ ರೋಷನ್ ನಟಿಸಿದ್ದರು. ಇದೀಗ ಅಪ್ಪನ ಸಿನಿಮಾದ ಸಿಕ್ವೇಲ್ನಲ್ಲಿ ಪೂರ್ಣಪ್ರಮಾಣದ ಹೀರೋ ಆಗಿದ್ದಾರೆ. ಈ ಚಿತ್ರಕ್ಕೂ 'ಪೆಳ್ಳಿ ಸಂದಡಿ' ಎಂದೇ ಶೀರ್ಷಿಕೆ ಇಡಲಾಗಿದೆ.